ರೈತರ ವ್ಯಾಪಾರ ವಹಿವಾಟುಗಳನ್ನು ಉತ್ತೇಜಿಸುವ ಅಭಿವೃದ್ಧಿ

KannadaprabhaNewsNetwork | Published : Aug 8, 2024 1:32 AM

ಸಾರಾಂಶ

ವ್ಯಾಪಾರ ವಹಿವಾಟು ದ್ವಿಗುಣಗೊಂಡು ರೈತರಿಗೆ ಅನುಕೂಲವಾಗಲಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಮೂಲ ಸೌಕರ್ಯ ಒದಗಿಸಿ ಅನುಕೂಲ ಕಲ್ಪಿಸುವ ಮೂಲಕ ರೈತರ ವ್ಯಾಪಾರ ವಹಿವಾಟುಗಳನ್ನು ಉತ್ತೇಜಿಸುವ ಸಲುವಾಗಿ ಸುಮಾರು ಮೂರು ಕೋಟಿ ರು.ಗಳ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ 2023-24ನೇ ಸಾಲಿನ ಆರ್.ಐ.ಡಿ.ಎಫ್-29ರ ಯೋಜನೆಯ ಅನುದಾನದಡಿ ಸುಮಾರು ಮೂರು ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಸಕಲ ಸೌಕರ್ಯಗಳಿದ್ದಲ್ಲಿ ವ್ಯಾಪಾರ ವಹಿವಾಟು ದ್ವಿಗುಣಗೊಂಡು ರೈತರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ನಾನು ಶಾಸಕನಾಗಿ ಆಯ್ಕೆಯಾದ ನಂತರ ಮೊದಲನೇ ಬಾರಿಗೆ ಬೇಡಿಕೆ ಇಟ್ಟಾಗ ಸುಮಾರು ಮೂರು ಕೋಟಿ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ಬಿಡುಗಡೆಗೊಳಿಸಿದ್ದಾರೆ, ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದ ಅವರು. ಎಪಿಎಂಸಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಅಂದಾಜು ಮೂರು ಕೋಟಿ ಅನುದಾನದಲ್ಲಿ ಮುಚ್ಚಿದ ಹರಾಜುಕಟ್ಟೆ, ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ಜಾನುವಾರು ಮಾರುಕಟ್ಟೆ ಉಪ ಪ್ರಾಂಗಣದಲ್ಲಿ ಮುಚ್ಚಿದ ಹರಾಜು ಮಾರುಕಟ್ಟೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು, ನಿಗದಿತ ಸಮಯದಲ್ಲಿ ಮುಕ್ತಾಯಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಎಪಿಎಂಸಿ ಮಾರುಕಟ್ಟೆಗೆ ರಜೆ ಘೋಷಣೆ ಇಲ್ಲ

ರೈತರಿಗೆ ಒಂದು ದಿನ ರಜೆ ಕೊಡಬೇಕೆಂಬ ಹಿತದೃಷ್ಠಿಯಿಂದ ಪ್ರತಿ ಸೋಮವಾರ ಮಾರುಕಟ್ಟೆಗೆ ರಜೆ ಘೋಷಣೆ ಮಾಡಲಾಗಿತ್ತು. ಆದರೆ ಹಲವಾರು ರೈತರು ನಮಗೆ ರಜೆ ಬೇಡ ಪ್ರತಿದಿನ ಮಾರುಕಟ್ಟೆ ತೆರೆಯಿರಿ ಎಂಬ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರೈತರ ಅಭಿಪ್ರಾಯದಂತೆ ರಜೆಯನ್ನು ರದ್ದುಗೊಳಿಸಲಾಗಿದೆ ಎಂದರು.

ಮಾಜಿ ಶಾಸಕ ಕಳಲೆಕೇಶವ ಮೂರ್ತಿ ಮಾತನಾಡಿ, ಮಾರುಕಟ್ಟೆ ಸಮಿತಿಯಲ್ಲಿ ಹಳೇ ಕಟ್ಟಡಗಳು ಗುಣಮಟ್ಟದಿಂದ ಕೂಡಿರುವುದರಿಂದ ಗಟ್ಟಿಯಾಗಿ ಉಳಿದಿವೆ, ಈಗಿನ ಕಾಮಗಾರಿಗಳಿಗೆ ಬಹಳಷ್ಟು ಕಳಪೆಯಾಗಿವೆ ಆದ್ದರಿಂದ ಗುಣಮಟ್ಟ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದರು.

ಎಪಿಎಂಸಿ ಆಡಳಿತಾಧಿಕಾರಿ ಶಿವಕುಮಾರ್ ಕಾಸ್ನೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದ್ದುಮಾದಶೆಟ್ಟಿ, ಎಂ. ಮಾದಪ್ಪ, ಮಾಜಿ ಉಪಾಧ್ಯಕ್ಷ ಕೆಂಡಗಣ್ಣಪ್ಪ, ನಗರಸಭಾ ಸದಸ್ಯರಾದ ಗಂಗಾಧರ್, ಎಸ್.ಪಿ. ಮಹೇಶ್, ಗಾಯತ್ರಿ, ಶ್ರೀಕಂಠಸ್ವಾಮಿ, ಎಪಿಎಂಸಿ ಕಾರ್ಯದರ್ಶಿ ಮಹೇಶ್, ಅಧಿಕಾರಿ ಸೋಮಶೇಖರ್ ಇದ್ದರು.

Share this article