ಧಾರವಾಡ: ಕಳೆದ ಐದು ವರ್ಷಗಳಿಂದ ಟ್ವಿನ್ ಸಿಟಿ ಐಡಲ್ ಕಾರ್ಯಕ್ರಮದ ಮೂಲಕ ಸ್ಥಳೀಯವಾಗಿ ಅದೆಷ್ಟೋ ಸಂಗೀತ ಕಲಾವಿದರಿಗೆ ಉತ್ತಮ ವೇದಿಕೆ ಒದಗಿಸಿರುವ ಹೆಗಡೆ ಗ್ರುಪ್ ಹಾಗೂ ವಿಜನ್ ಫೌಂಡೇಶನ್ ಇದೀಗ ಧಾರವಾಡ ಉತ್ಸವದ ಕೊರತೆ ನೀಗಿಸುವ ಧಾರವಾಡ ಹಬ್ಬ ಎಂಬ ವಿಶೇಷ ಕಾರ್ಯಕ್ರಮಕ್ಕೆ ಮುಂದಾಗಿದೆ.
ನವೀನ ಸಜ್ಜು ಗಾಯನ: ಫೆ. 21ರ ಶುಕ್ರವಾರ ಸಂಜೆ ಖ್ಯಾತ ಗಾಯಕ ನವೀನ ಸಜ್ಜು ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. 2ನೇ ದಿನ ಶನಿವಾರ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ರಾಮದುರ್ಗ, ಸೂರಜ್ ಮಂಗಳೂರು, ಸೂರ್ಯಾ ಕುಂದಾಪುರ ಹಾಗೂ ದೀಪಿಕಾ ಮಂಡ್ಯ ತಂಡವು ಹಾಸ್ಯ ಕಾರ್ಯಕ್ರಮ ನಡೆಸಿಕೊಡಲಿದೆ. ಅಂದು ಅಲಘ್ ರಿದಂ ತಂಡ, ಧಾರವಾಡದ ಪ್ರತಿಭೆ, ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ವಿಶ್ವನಾಥ ಹಾವೇರಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.
ಪ್ರಾಣೇಶ ಹಾಸ್ಯ: ಇನ್ನು, ಫೆ. 23ರ ಭಾನುವಾರ ಖ್ಯಾತ ಹಾಸ್ಯ ಕಲಾವಿದ ಪ್ರಾಣೇಶ ನೇತೃತ್ವದ ನರಸಿಂಹ ಜೋಶಿ, ಮಾಮನಿ ಅವರನ್ನೊಳಗೊಂಡ ತಂಡವು ಹಾಸ್ಯ ಪ್ರಸ್ತುತಪಡಿಸಲಿದೆ. ತದ ನಂತರ ಗಾಯಕಿ ಸಿಂಚನ್ ದೀಕ್ಷಿತ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಇದಲ್ಲದೇ ಮೂರು ದಿನ ಸ್ಥಳೀಯ ಕಲಾವಿದರಿಂದ ನೃತ್ಯ, ಜಾನಪದ, ಸಂಗೀತ ಕಾರ್ಯಗಳು ಸಹ ಇರಲಿವೆ.ನಾಳೆ ಉದ್ಘಾಟನೆ: ಫೆ. 21ರ ಶುಕ್ರವಾರ ಸಂಜೆ 6ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಧಾರವಾಡ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕರಾದ ಎನ್.ಎಚ್. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ ಹಾಗೂ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಗೀತರಚನೆಕಾರ ಡಾ.ವಿ. ನಾಗೇಂದ್ರ ಪ್ರಸಾದ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯ ಮಯೂರ ಮೋರೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಯುವ ಪ್ರಶಸ್ತಿ ಪ್ರದಾನ: ಸಂಘಟಕರಲ್ಲಿ ಒಬ್ಬರಾದ ಮುಸ್ತಫಾ ಕುನ್ನಿಬಾವಿ ಮಾತನಾಡಿ, 2ನೇ ದಿನ ಶನಿವಾರ ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವೈಶಾಲಿ ಕುಲಕರ್ಣಿಗೆ ಯುವ ನಾಯಕಿ ಹಾಗೂ ನವೀನ ಕೋನರಡ್ಡಿಗೆ ಯುವನಾಯಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅತಿಥಿಗಳಾಗಿ ಶಿವಲೀಲಾ ಕುಲಕರ್ಣಿ, ವಸಂತ ಹೊರಟ್ಟಿ, ಶಾಕೀರ ಸನದಿ, ಸಂಗಮೇಶ ಬಬಲೇಶ್ವರ, ವಿನೋದ ಅಸೂಟಿ, ದರ್ಶನ ಲಮಾಣಿ, ಮಹೇಶ ಶೆಟ್ಟಿ, ಫಯಾಜ್ ಬಸ್ತವಾಡ್ ಭಾಗವಹಿಸುತ್ತಾರೆ. ಫೆ. 23ರಂದು ಸಮಾರೋಪ ನಡೆಯಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಸೀಮಾ ಮಸೂತಿ, ಅಮೃತ ದೇಸಾಯಿ ಹಾಗೂ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಇರಲಿದ್ದಾರೆ ಎಂದರು.ಪ್ರಶಸ್ತಿ ಪ್ರದಾನ: ಹೆಗಡೆ ಗ್ರುಪ್‌ನ ಸತೀಶ ಹೆಗಡೆ ಮಾತನಾಡಿ, ವಿಜನ್ ಫೌಂಡೇಶನ್ ವತಿಯಿಂದ ಧಾರವಾಡ ಹೆಮ್ಮೆಯ ನಾಗರಿಕ ಪ್ರಶಸ್ತಿಯನ್ನು ಚೀನಾದಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಹೆಸರು ಮಾಡಿದ ಮೊಯಿನ್ ಶೇಖ್ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ಜತೆಗೆ ಅವಳಿ ನಗರದ ಹಿರಿಯ ಐವರು ಮಹಿಳೆ, ಐವರು ಪುರುಷರಿಗೆ ವೇದಿಕೆ ಮೇಲೆ ಗೌರವ ಸನ್ಮಾನ ಮಾಡಲು ತೀರ್ಮಾನಿಸಲಾಗಿದೆ. ಒಟ್ಟಾರೆ, ಮೂರು ದಿನಗಳ ಧಾರವಾಡ ಹಬ್ಬಕ್ಕೆ ಅವಳಿ ನಗರದ ಯುವ ಜನರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.