ಮೂರು ದಿನಗಳ ಹಲಸಿನ ಮೇಳಕ್ಕೆ ಚಾಲನೆ

KannadaprabhaNewsNetwork |  
Published : Aug 01, 2026, 02:00 AM IST
ಹುಬ್ಬಳ್ಳಿ ಆರ್‌.ಎನ್‌. ಶೆಟ್ಟಿ ಮೇಳದಲ್ಲಿ ಆಯೋಜಿಸಲಾದ ಹುಬ್ಬಳ್ಳಿ ಹಲಸಿನ ಮೇಳಕ್ಕೆ ಗಣ್ಯರು ಚಾಲನೆ ನೀಡಿದರು. | Kannada Prabha

ಸಾರಾಂಶ

ಹಲಸಿನ ಸಿಹಿ ಸವಿರುಚಿ, ವೈವಿಧ್ಯಮಯ ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಕರಾವಳಿಯ ಆಹಾರ ಸಂಸ್ಕೃತಿಯನ್ನು ಒಂದೇ ಸೂರಿನಡಿ ಪರಿಚಯಿಸುತ್ತಿರುವ ಹುಬ್ಬಳ್ಳಿ ಹಲಸು ಮೇಳ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಹುಬ್ಬಳ್ಳಿ: ಹಲಸಿನ ಸಿಹಿ ಸವಿರುಚಿ, ವೈವಿಧ್ಯಮಯ ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಕರಾವಳಿಯ ಆಹಾರ ಸಂಸ್ಕೃತಿಯನ್ನು ಒಂದೇ ಸೂರಿನಡಿ ಪರಿಚಯಿಸುತ್ತಿರುವ ಹುಬ್ಬಳ್ಳಿ ಹಲಸು ಮೇಳ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಹು-ಧಾ ಬಂಟ್ಸ್ ಸಂಘ, ಸಾರಸ್ವತ ಬ್ರಾಹ್ಮಣ ಸಮಾಜ, ಬಿಲ್ಲವ ಸಮಾಜ ಸೇವಾ ಸಂಘ, ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜ, ಹುಬ್ಬಳ್ಳಿ ಹೊಟೇಲ್ ಸಂಘ, ಮೊಗವೀರ ಸಂಘ ಹಾಗೂ ಕುಂದಾಪುರದ ಬೆನಕ ಇವೆಂಟ್ಸ್ ಸಹಯೋಗದಲ್ಲಿ ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಿಂದ ಮೇಳ ಆಯೋಜಿಸಲಾಗಿದೆ.

ಮೇಳದಲ್ಲಿ 80ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಪ್ರದರ್ಶಕರು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳು, ಸಾಂಪ್ರದಾಯಿಕ ಆಹಾರ ಪದಾರ್ಥಗಳು ಹಾಗೂ ಗ್ರಾಮೀಣ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡುತ್ತಿದ್ದಾರೆ. ಹಲಸಿನಿಂದ ತಯಾರಿಸಲಾದ 70ಕ್ಕೂ ಅಧಿಕ ಬಗೆಯ ಆಹಾರ ಪದಾರ್ಥಗಳು ಮೇಳದ ಪ್ರಮುಖ ಆಕರ್ಷಣೆಯಾಗಿವೆ.

ಹಲಸಿನ ಜಿಲೇಬಿ, ಹೋಳಿಗೆ, ಕಜ್ಜಾಯ, ಜಾಮ್, ಹಸಸಿನ ಬೀಜದ ಬಿಸ್ಕೆಟ್, ಕಬಾಬ್, ಬಿರಿಯಾನಿ, ಮಂಚೂರಿ, ಮಿಲ್ಕ್‌ಶೇಕ್, ಉಡುಪಿ ಶೈಲಿಯ ಉಪ್ಪಿನಕಾಯಿ, ಹಪ್ಪಳ ಸೇರಿದಂತೆ ಹಲವು ವಿಶೇಷ ಖಾದ್ಯಗಳನ್ನು ಸ್ಥಳದಲ್ಲೇ ತಯಾರಿಸಿ ನೀಡಲಾಗುತ್ತಿದ್ದು, ಆಹಾರಪ್ರಿಯರು ಸವಿದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಲಸಿನ ಗಿಡಗಳು, ಮಾವಿನ ಸಸಿಗಳು ಹಾಗೂ ಇತರ ಕೃಷಿ ಉತ್ಪನ್ನಗಳಿಗೂ ಉತ್ತಮ ಬೇಡಿಕೆ ಕಂಡುಬಂದಿದೆ.

ಮೇಳದಲ್ಲಿ ಬೆನಕ ಇವೆಂಟ್ಸ್‌ನ ಪಾಲುದಾರ ಗಣೇಶ ಶೆಟ್ಟಿ ಮಾತನಾಡಿ, ಕರಾವಳಿಯಲ್ಲಿ ಈಗಾಗಲೇ 17ಕ್ಕೂ ಹೆಚ್ಚು ಹಲಸು ಮೇಳಗಳನ್ನು ಯಶಸ್ವಿಯಾಗಿ ನಡೆಸಿದ್ದು, ಹುಬ್ಬಳ್ಳಿಯಲ್ಲಿ ಇದೇ ಮೊದಲ ಬಾರಿಗೆ ಈ ಮೇಳ ಆಯೋಜಿಸಲಾಗಿದೆ. ಹಲಸಿನ ಮೌಲ್ಯ ಹೆಚ್ಚಿಸುವುದು ಹಾಗೂ ಅದರ ಆರೋಗ್ಯಕರ ಉಪಯೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮೇಳದ ಉದ್ದೇಶ ಎಂದರು.

ಬಂಟ್ಸ್ ಸಂಘದ ರಾಜೇಂದ್ರ ಶೆಟ್ಟಿ ಮಾತನಾಡಿ, ಕರಾವಳಿ ಭಾಗದಲ್ಲಿ ಜನಪ್ರಿಯವಾಗಿರುವ ಹಲಸು ಮೇಳವನ್ನು ಹುಬ್ಬಳ್ಳಿಯಲ್ಲೂ ಆಯೋಜಿಸಿರುವುದು ಸಂತಸದ ಸಂಗತಿ. ಹಲಸಿನ ಪೌಷ್ಟಿಕತೆ ಮತ್ತು ಅದರ ಮಹತ್ವವನ್ನು ಎಲ್ಲರೂ ಅರಿಯಬೇಕು. ಇಂತಹ ಮೇಳಗಳು ಪ್ರತಿವರ್ಷ ನಡೆಯುವ ಮೂಲಕ ಸ್ಥಳೀಯರಿಗೆ ಹೊಸ ಅನುಭವ ಸಿಗಲಿ ಎಂದರು.

ಈ ವೇಳೆ ಅನಂತ ಪದ್ಮನಾಭ ಐತಾಳ, ವಿಠ್ಠಲ ಕಾಮತ್, ದಿನೇಶ ಶೆಟ್ಟಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಪಿಎಸ್ಸಿ ಸಾಲು ಸಾಲು ಹಗರಣ ಖಂಡಿಸಿ ಎಬಿವಿಪಿ ಪ್ರತಿಭಟನೆ
ಸೇನಾ ಗೌರವದಿಂದ ವೀರಯೋಧನಿಗೆ ಅಂತಿಮ ನಮನ