ಕನ್ನಡ, ತೆಲುಗು, ತಮಿಳು ನಾಟಕಗಳ ಹಬ್ಬ। ವಿಚಾರ ಸಂಕಿರಣ, ಸಂವಾದ
ಕನ್ನಡಪ್ರಭ ವಾರ್ತೆ ದಾವಣಗೆರೆವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆಯಿಂದ ಮಾ.15ರಿಂದ ಮೂರು ದಿನಗಳ ಕಾಲ ನಗರದ ದೃಶ್ಯಕಲಾ ಮಹಾ ವಿದ್ಯಾಲಯದ ಬಯಲು ರಂಗ ಮಂದಿರದ ಪ್ರಾಂಗಣದಲ್ಲಿ ರಾಷ್ಟ್ರೀಯ ವೃತ್ತಿ ರಂಗೋತ್ಸವ-2025 ನಡೆಯಲಿದೆ ಎಂದು ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ
ನಗರದಲ್ಲಿ ಗುರುವಾರ ರಾಷ್ಟ್ರೀಯ ವೃತ್ತಿ ರಂಗೋತ್ಸವ-2025 ಪೋಸ್ಟರ್ ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಉತ್ಸವದಲ್ಲಿ ವಿಚಾರ ಸಂಕಿರಣ, ರಂಗ ಸಂವಾದ, ರಂಗ ಗೌರವ, ರಂಗ ಗೀತೆಗಳ ಗಾಯನ, ನಾಯಕ ಪ್ರದರ್ಶನ, ರಂಗ ದಾಖಲೆಗಳ ಪ್ರದರ್ಶನ, ಚಿತ್ರಕಲಾ ಪ್ರದರ್ಶನ ಇರಲಿದೆ. ಮಾ.15ರ ಬೆಳಿಗ್ಗೆ 11.30ಕ್ಕೆ ಚಿತ್ರಕಲೆ ಮತ್ತು ರಂಗ ದಾಖಲೆಗಳ ಪ್ರದರ್ಶನವನ್ನು ತಮ್ಮ ಅಧ್ಯಕ್ಷತೆಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಉದ್ಘಾಟಿಸುವರು ಎಂದರು.ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೈರಾಜ ಎಂ.ಚಿಕ್ಕಪಾಟೀಲ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ವೈ.ಕುಮಾರ ಭಾಗವಹಿಸುವರು. ಇದೇ ವೇಳೆ ರಂಗ ದಾಖಲೆಗಳ ಸಂಗ್ರಹಕಾರ ಎ.ಎಸ್.ಕೃಷ್ಣಮೂರ್ತಿ ಅಜ್ಜಂಪುರರನ್ನು ಸನ್ಮಾನಿಸಲಾಗುವುದು. ಅದೇ ಸಂಜೆ 6.30ಕ್ಕೆ ಮಲ್ಲಿಕಾರ್ಜುನ ಕಡಕೋಳ ಅಧ್ಯಕ್ಷತೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ವೃತ್ತಿ ರಂಗೋತ್ಸವವನ್ನು, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ರಂಗ ನಾಟಕಗಳನ್ನು ಉದ್ಘಾಟಿಸಲಿದ್ದಾರೆ. ಡಿಸಿ ಜಿ.ಎಂ.ಗಂಗಾಧರಸ್ವಾಮಿ, ರಂಗ ಸಮಾಜದ ಸದಸ್ಯರಾದ ಜಹಾಂಗೀರ, ಮಹಾಂತೇಶ ಗಜೇಂದ್ರಗಡ, ಗುಬ್ಬಿ ಚನ್ನಬಸಯ್ಯ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಡಾ.ಕೆ.ನಾಗಮ್ಮ ಮರಿಯಮ್ಮನಹಳ್ಳಿ ಭಾಗವಹಿಸುವರು ಎಂದು ತಿಳಿಸಿದರು.
ಮಾ.16ರ ಸಂಜೆ 6.30ಕ್ಕೆ ತಮ್ಮ ಅಧ್ಯಕ್ಷತೆ. ರಂಗೋತ್ಸವದ ವೇದಿಕೆ ಕಾರ್ಯಕ್ರಮಕ್ಕೆ ಜಿಪಂ ಸಿಇಒ ಸುರೇಶ ಬಿ.ಇಟ್ನಾಳ್ ನಾಟಕೋತ್ಸವಕ್ಕೆ ಚಾಲನೆ ನೀಡುವರು. ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ, ರಂಗ ಸಮಾಜದ ಸದಸ್ಯರಾದ ಡಾ.ರಾಜಪ್ಪ ದಳವಾಯಿ, ಎಚ್.ಎಸ್.ಸುರೇಶ ಬಾಬು, ಡಿಂಗ್ರಿ ನಾಗರಾಜ, ರಂಗ ಗೌರವದ ಚಿಂದೋಡಿ ಶ್ರೀಕಂಠೇಶ, ಗುಬ್ಬಿ ವೀಣ್ಣ ಪ್ರಶಸ್ತಿ ಪುರಸ್ಕೃತೆ ಜಯಲಕ್ಷ್ಮಿ ಹೆಗಡೆ, ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಜೇವರ್ಗಿ ರಾಜಣ್ ಕಲುಬರಗಿ, ವಿಶೇಷಾಧಿಕಾರಿ ರವಿಚಂದ್ರ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಮಾ.17ರ ಸಂಜೆ 6.30ಕ್ಕೆ ಮಲ್ಲಿಕಾರ್ಜುನ ಕಡಕೋಳ ಅಧ್ಯಕ್ಷತೆಯಲ್ಲಿ ಬಿ.ವಿ.ಕಾರಂತ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಜಿ.ತಿಪ್ಪಣ್ಣ ಸಮಾರೋಪ ನುಡಿಗಳನ್ನಾಡುವರು. ಪೂರ್ವ ವಲಯದ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ, ರಂಗ ಸಮಾಜದ ಸದಸ್ಯರಾದ ಪ್ರೊ.ಲಕ್ಷ್ಮೀ ಚಂದ್ರಶೇಖರ, ಶಶಿಘರ ಬಾರೀಘಾಟ್, ಡಾ.ಕೆ.ರಾಮಕೃಷ್ಣಯ್ಯ ಭಾಗವಹಿಸುವರು. ವೃತ್ತಿ ರಂಗಭೂಮಿ ಹಿರಿಯ ಕಲಾವಿದರಾದ ಎಂ.ಎಸ್.ಕೊಟ್ರೇಶ, ಪುಷ್ಪಮಾಲಾ ಅಬ್ದುಲ್ ಸಾಬ್ ಅಣ್ಣಿಗೇರಿ, ಕುಪ್ಪೆಲೂರು ರುದ್ರಯ್ಯ, ರವಿಚಂದ್ರ ಭಾಗವಹಿಸುವರು. ಮೂರು ದಿನ ವಿಚಾರ ಸಂಕಿರಣ, ಹಿರಿಯ ಕಲಾವಿದರೊಂದಿಗೆ ಸಂವಾದವಿರುತ್ತದೆ ಎಂದು ತಿಳಿಸಿದರು.
ವೃತ್ತಿ ರಂಗಭೂಮಿ ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ, ಹಿರಿಯ ರಂಗಕರ್ಮಿಗಳಾದ ಎಸ್.ಎಸ್.ಸಿದ್ದರಾಜು, ನೀಲಗುಂದ, ಬಸವನಗೌಡ, ಡಾ.ಶೃತಿರಾಜ, ಎನ್.ಟಿ.ಮಂಜುನಾಥ, ಶಂಭುಲಿಂಗ ಕೊಟ್ಟೂರು ಇತರರು ಇದ್ದರು.