ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆ ಬಗ್ಗೆ ಮೂರು ದಿನಗಳ ಗಡುವು

KannadaprabhaNewsNetwork | Published : Jan 31, 2025 12:46 AM

ಸಾರಾಂಶ

ರಾಷ್ಟ್ರೀಯ ಹೆದ್ದಾರಿಯ ಸಣ್ಣಂಪಾಡಿಯಿಂದ ಆರ್ಲ ಜಂಕ್ಷನ್ ತನಕ ಇರುವ ಸಮಸ್ಯೆ ಬಗ್ಗೆ ಮೂರು ದಿನದೊಳಗೆ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಗೋಳಿತ್ತೊಟ್ಟು, ಆರ್ಲ ಜಂಕ್ಷನ್ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮರ್ಪಕ ಕಾಮಗಾರಿ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಗೋಳಿತ್ತೊಟ್ಟು ಗ್ರಾಮಸಭೆಯಲ್ಲಿ ನಡೆದಿದೆ.ಗೋಳಿತ್ತೊಟ್ಟು ಗ್ರಾ.ಪಂ. ಅಧ್ಯಕ್ಷೆ ಸವಿತಾ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಸಭೆ ನಡೆಯಿತು. ಕಡಬ ಪಶುವೈದ್ಯಾಧಿಕಾರಿ ಡಾ. ಅಜಿತ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ರಾಷ್ಟ್ರೀಯ ಹೆದ್ದಾರಿಯ ಸಣ್ಣಂಪಾಡಿಯಿಂದ ಆರ್ಲ ಜಂಕ್ಷನ್ ತನಕ ಇರುವ ಸಮಸ್ಯೆ ಬಗ್ಗೆ ಮೂರು ದಿನದೊಳಗೆ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಸೇವೆಯು ದಿನದ 24 ಗಂಟೆಯೂ ಲಭಿಸುವಂತಾಗಬೇಕು. ಗೋಳಿತ್ತೊಟ್ಟುವಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಶಾಖೆ ತೆರೆಯಬೇಕು, ಗ್ರಾಮದ ಸಮಸ್ಯೆಯ ಬಗ್ಗೆ ಅರಿವು ಇರಬೇಕಾದ ಕಾರಣ ಪ್ರತಿ ಗ್ರಾಮಸಭೆಗೂ ಒಬ್ಬರೇ ನೋಡೆಲ್ ಅಧಿಕಾರಿ ಬರಬೇಕು. ನಾದುರಸ್ತಿಯಲ್ಲಿರುವ ಆಲಂತಾಯ ಶಾಲಾ ಕಟ್ಟಡ ನೆಲಸಮ ಮಾಡಲಾಗಿದ್ದು, ಹೊಸ ಕಟ್ಟಡಕ್ಕೆ ಅನುದಾನ ಒದಗಿಸಿ, ಸರ್ಕಾರಿ ಇಲಾಖೆಯ ಅಧಿಕಾರಿಗಳ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಕ್ರಮ ಕೈಗೊಳ್ಳಿ, ಗೋಳಿತ್ತೊಟ್ಟು ಗ್ರಾಮದಲ್ಲಿ 102 ಟಿ.ಸಿ.ಗಳಿದ್ದು ಒಬ್ಬರೇ ಪವರ್‌ಮ್ಯಾನ್ ಇರುವುದರಿಂದ ಸಮಸ್ಯೆ ಆಗಿದೆ. ಗ್ರಾಮದಲ್ಲಿ ಹೆಚ್ಚುವರಿ ಪವರ್‌ಮ್ಯಾನ್ ನೇಮಕ ಮಾಡಬೇಕು, ಗ್ರಾಮ ಪಂಚಾಯಿತಿನಿಂದ ಮೀನು ಮಾರುಕಟ್ಟೆ ನಿರ್ಮಿಸಿ. ಆ ಬಳಿಕವೇ ಮೀನು ಮಾರಾಟದ ಹಕ್ಕು ಏಲಂ ಮಾಡಬೇಕು, ಸರ್ವೆ ಇಲಾಖೆಯಿಂದ ಯಾವುದೇ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ಲಂಚ ಕೊಟ್ಟರೆ ಮಾತ್ರ ಸರ್ವೆ ಇಲಾಖೆಯಲ್ಲಿ ಕೆಲಸ ಆಗುತ್ತದೆ ಎಂಬ ದೂರು, ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಆಗದೇ ಕಸ್ತೂರಿ ರಂಗನ್ ವರದಿ ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು.

ಬೀಟ್ ಪೊಲೀಸ್ ಕುಮಾರಸ್ವಾಮಿ, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಎಚ್‌ಒ ಪ್ರಜ್ವಲ್ ಕುಮಾರ್, ಸಿಆರ್‌ಪಿ ಮಂಜುನಾಥ್, ಜಿ.ಪಂ.ಇಂಜಿನಿಯರ್ ಹೊಳೆಬಸಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪುಷ್ಪಾವತಿ, ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಇಂಜಿನಿಯರ್ ನಿತಿನ್ ಕುಮಾರ್, ನೆಲ್ಯಾಡಿ ಶಾಖಾ ಜೆಇ ರಾಮಣ್ಣ, ಗಸ್ತು ಅರಣ್ಯ ಪಾಲಕ ಜಗದೀಶ್, ಕೃಷಿ ಸಹಾಯಕ ಸಾಯಿನಾಥ್, ಗ್ರಾಮ ಆಡಳಿತಾಧಿಕಾರಿ ಸುನಿಲ್ ಅವರು ಇಲಾಖಾವಾರು ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷ ಕೆ.ಬಾಬು ಪೂಜಾರಿ, ಸದಸ್ಯರಾದ ವಿ.ಸಿ.ಜೋಸೆಫ್, ಪ್ರಜಲ, ವಾರಿಜಾಕ್ಷಿ, ಶ್ರುತಿ ಪಿ., ನೋಣಯ್ಯ ಗೌಡ, ಶೋಭಾಲತಾ, ಸಂಧ್ಯಾ, ಜನಾರ್ದನ ಗೌಡ, ಜೀವಿತಾ, ಗುಲಾಬಿ ಕೆ., ಎ. ಬಾಲಕೃಷ್ಣ, ಹೇಮಲತಾ, ಪದ್ಮನಾಭ, ಶಿವಪ್ರಸಾದ್ ಎಸ್.ಎಸ್., ಉಪಸ್ಥಿತರಿದ್ದರು.

ಕಾರ್ಯದರ್ಶಿ ಚಂದ್ರಾವತಿ ಸ್ವಾಗತಿಸಿ, ವರದಿ ವಾಚಿಸಿದರು. ಪಿಡಿಒ ಜಗದೀಶ್ ಹಾಗೂ ಸಿಬ್ಬಂದಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Share this article