ಲಾಡಖಾನ ಜಮೀನಿನಲ್ಲಿ ಮೂರು ಭ್ರೂಣ ಪತ್ತೆ

KannadaprabhaNewsNetwork | Published : Jun 17, 2024 1:40 AM

ಸಾರಾಂಶ

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು ಹಸುಳೆ ಮಾರಾಟ ಪ್ರಕರಣ ಮತ್ತೆ ಹೊಸ ತಿರುವು ಪಡೆದುಕೊಂಡಿದೆ. ನಕಲಿ ವೈದ್ಯ ವೈದ್ಯ ಅಬ್ದುಲ್‌ ಗಫಾರ ಲಾಡಖಾನಗೆ ಸೇರಿದ್ದ ಜಮೀನಿನಲ್ಲಿ ಪೊಲೀಸರು ಪರಿಶೀಲನೆ ನಡೆಸಿದಾಗ ರವಿವಾರ ಮತ್ತೆ ಮೂರು ಭ್ರೂಣಗಳು ಪತ್ತೆಯಾಗಿವೆ.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಹಸುಳೆ ಮಾರಾಟ ಪ್ರಕರಣ ಮತ್ತೆ ಹೊಸ ತಿರುವು ಪಡೆದುಕೊಂಡಿದೆ. ನಕಲಿ ವೈದ್ಯ ವೈದ್ಯ ಅಬ್ದುಲ್‌ ಗಫಾರ ಲಾಡಖಾನಗೆ ಸೇರಿದ್ದ ಜಮೀನಿನಲ್ಲಿ ಪೊಲೀಸರು ಪರಿಶೀಲನೆ ನಡೆಸಿದಾಗ ರವಿವಾರ ಮತ್ತೆ ಮೂರು ಭ್ರೂಣಗಳು ಪತ್ತೆಯಾಗಿವೆ.

ನಕಲಿ ವೈದ್ಯ ಅಬ್ದುಲ ಗಫಾರ ಲಾಡಖಾನ ಭ್ರೂಣ ಹತ್ಯೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ತಾಲೂಕ ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಿದಾಗ ಈತ ನಕಲಿ ವೈದ್ಯನೆಂಬುದು ಕಂಡು ಬಂದಿತ್ತು. ಪರಿಣಾಮ ಆರೋಗ್ಯ ಅಧಿಕಾರಿಗಳು ಕಿತ್ತೂರು ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣವನ್ನು ಕೂಡ ದಾಖಲಿಸಿದ್ದರು.

ಈ ಪ್ರಕರಣದ ಕುರಿತು ತನಿಖೆಗಿಳಿದ ಕಿತ್ತೂರು ಪೊಲೀಸರು ಪ್ರಾಥಮಿಕ ತನಿಖೆಗಾಗಿ ನಕಲಿ ವೈದ್ಯನ ಆಪ್ತ ಸಹಾಯಕನೋರ್ವನನ್ನು ವಿಚಾರಣೆಗೆ ಒಳಪಡಿಸಿದ್ದರು. ಆಗ ನಕಲಿ ವೈದ್ಯ ಭ್ರೂಣಹತ್ಯೆಯಂತಹ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಎಂಬ ಭಯಾನಕ ಮಾಹಿತಿ ಆಪ್ತ ಸಹಾಯಕನಿಂದ ಹೊರಬಿದ್ದಿದೆ.

ಸ್ಥಳ ಮಹಜರು:

ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದ ಆಪ್ತ ಸಹಾಯಕ ಭ್ರೂಣಗಳನ್ನು ನಕಲಿ ವೈದ್ಯನಿಗೆ ಸಂಬಂಧಪಟ್ಟ ಆದರೆ ಮಾಲೀಕತ್ವ ಅಲ್ಲದ ಜಮೀನಿನಲ್ಲಿ ಹೂತಿಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಈ ಸ್ಥಳವನ್ನು ಪೊಲೀಸರು ರವಿವಾರ ಮಹಜರು ನಡೆಸಿ ಮೂರು ಭ್ರೂಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಭ್ರೂಣಗಳ ಪತ್ತೆ:

ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ ಕೋಣಿ, ಜಿಲ್ಲಾಧಿಕಾರಿಗಳ ಆದೇಶದನ್ವಯ ಹಾಗೂ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಲಾಡಖಾನಗೆ ಸಂಬಂಧಿಸಿದ ಜಮೀನಿನಲ್ಲಿ ಪರಿಶೀಲನೆ ನಡೆಸಲಾಗಿದೆ. ಇಲ್ಲಿ ಹೂತಿಟ್ಟಿರುವ ಮೂರು ಭ್ರೂಣಗಳನ್ನು ಪತ್ತೆ ಹಚ್ಚಲಾಗಿದ್ದು, ಭ್ರೂಣಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಹಸ್ತಾಂತರಿಸಲಾಗಿದೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಪಟ್ಟಣದಲ್ಲಿನ ಕ್ಲಿನಿಕ್‌ನಲ್ಲಿ ನಡೆಸುತ್ತಿದ್ದ ಎಂಬ ವರದಿ ಬಂದಿತ್ತು ಎಂದು ತಿಳಿಸಿದರು.

ರಿಯಾಜ್ ಹೆಸರಿನ ಕ್ಲಿನಿಕ್‌ ತೆರೆಯಲು ಆರೊಗ್ಯ ಇಲಾಖೆಯಿಂದ ಯಾವುದೇ ಪರವಾನಗಿ ಪಡೆದಿರಲಿಲ್ಲ. ಇದು ಅನಧಿಕೃತವಾಗಿತ್ತು. ಈ ಕುರಿತು ಕೆಳ ಹಂತದ ಅಧಿಕಾರಿಗಳು ನಮ್ಮ ಗಮನಕ್ಕೆ ತರದಿರುವ ಬಗ್ಗೆಯೂ ಅವರಿಗೆ ನೋಟಿಸ್ ಸಹ ನೀಡಲಾಗಿದೆ. ತಾಲೂಕಿನ ಇತರೆ ವೈದ್ಯರು ಈ ಗರ್ಭಪಾತಕ್ಕೆ ಲಾಡಖಾನ ಬಳಿ ಶಿಫಾರಸು ಮಾಡಿ ಜನರನ್ನು ಕಳುಹಿಸುವ ಮಾಹಿತಿ ಕೂಡ ಇದೆ. ಇದರಲ್ಲಿ ಅಂತಹ ವೈದ್ಯರ ಮೇಲೆ ಹಾಗೂ ಕ್ಲಿನಿಕ್‌ಗಳ ಮೇಲೆಯೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಮತ್ತು ಲೋಪವನ್ನು ಪರಿಶೀಲಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ತನಿಖೆಗೆ ಸಂಪೂರ್ಣ ಸಹಕಾರ:

ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕಿರಪೂರ ಮಾತನಾಡಿ, ಈ ಜಮೀನನ್ನು ಲಾಡಖಾನ ಲೀಜ್ ಮೇಲೆ ಪಡೆದು ಈ ಕೃತ್ಯ ಮಾಡಿದ್ದಾನೆ. ಇಲ್ಲಿ ಮೂರು ಭ್ರೂಣಗಳು ಪತ್ತೆಯಾಗಿದ್ದು, ಹೆಚ್ಚಿನ ತನಿಖೆಗೆ ಅವಶ್ಯವಿರುವ ಎಲ್ಲ ಸಹಕಾರವನ್ನು ಪೊಲೀಸ್‌ ಇಲಾಖೆಗೆ ನೀಡಲಾಗುವುದು. ಇದೇ ರೀತಿ ಕೃತ್ಯ ಬೇರೆಡೆಯೂ ನಡೆದಿದ್ದರೂ ಸಹ ಅವುಗಳ ಬಗ್ಗೆಯೂ ಪತ್ತೆಹಚ್ಚಲಾಗುವುದು. ಈ ಎಲ್ಲ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು, ಇನ್ನಷ್ಟು ಮಾಹಿತಿ ಪೊಲೀಸರ ತನಿಖೆಯಿಂದ ಹೊರಬರಬೇಕಿದೆ ಎಂದು ಹೇಳಿದರು.

ಜಿಲ್ಲಾ ವೈದ್ಯಾಧಿಕಾರಿ ಡಾ.ಮಹೇಶ ಕೋಣಿ, ಎಸಿ ಪ್ರಭಾವತಿ ಪಕ್ಕಿರಪೂರ, ಡಿವೈಎಸ್ಪಿ ರವಿ ನಾಯ್ಕ ಸೇರಿದಂತೆ ವಿಧಿ ವಿಜ್ಞಾನ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಯಿತು. ಜಮೀನಿನಲ್ಲಿ ಹೂತಿಟ್ಟಿದ್ದ ಭ್ರೂಣಗಳನ್ನು ಹೊರ ತೆಗೆದು ಪರಿಶೀಲಿಸಿದ ನಂತರ ಪ್ರಮುಖ ಆರೋಪಿ ಲಾಡಖಾನನ್ನು ಆತನ ರಿಯಾಜ್ ಕ್ಲಿನಿಕ್‌ಗೆ ಕರೆತಂದು ಇಲ್ಲಿಯೂ ಸ್ಥಳ ಮಹಜರು ನಡೆಸಲಾಯಿತು.

=-------------------------------

ಕೋಟ್‌ಇಲ್ಲಿ ಹೂತಿಟ್ಟಿರುವ ಮೂರು ಭ್ರೂಣಗಳನ್ನು ಪತ್ತೆ ಹಚ್ಚಲಾಗಿದ್ದು, ಭ್ರೂಣಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಹಸ್ತಾಂತರಿಸಲಾಗಿದೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಪಟ್ಟಣದಲ್ಲಿನ ಕ್ಲಿನಿಕ್‌ನಲ್ಲಿ ನಡೆಸುತ್ತಿದ್ದ ಎಂಬ ವರದಿ ಬಂದಿತ್ತು. ರಿಯಾಜ್ ಹೆಸರಿನ ಕ್ಲಿನಿಕ್‌ ತೆರೆಯಲು ಆರೊಗ್ಯ ಇಲಾಖೆಯಿಂದ ಯಾವುದೇ ಪರವಾನಗಿ ಪಡೆದಿರಲಿಲ್ಲ. ಇದು ಅನಧಿಕೃತವಾಗಿತ್ತು. ಈ ಕುರಿತು ಕೆಳ ಹಂತದ ಅಧಿಕಾರಿಗಳು ನಮ್ಮ ಗಮನಕ್ಕೆ ತರದಿರುವ ಬಗ್ಗೆಯೂ ಅವರಿಗೆ ನೋಟಿಸ್ ಸಹ ನೀಡಲಾಗಿದೆ. ತಾಲೂಕಿನ ಇತರೆ ವೈದ್ಯರು ಈ ಗರ್ಭಪಾತಕ್ಕೆ ಲಾಡಖಾನ ಬಳಿ ಶಿಫಾರಸು ಮಾಡಿ ಜನರನ್ನು ಕಳುಹಿಸುವ ಮಾಹಿತಿ ಕೂಡ ಇದೆ. ಇದರಲ್ಲಿ ಅಂತಹ ವೈದ್ಯರ ಮೇಲೆ ಹಾಗೂ ಕ್ಲಿನಿಕ್‌ಗಳ ಮೇಲೆಯೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.ಮಹೇಶ ಕೋಣಿ, ಜಿಲ್ಲಾ ವೈದ್ಯಾಧಿಕಾರಿ

Share this article