ಭೂಕುಸಿತಕ್ಕೆ ಮೂವರು ಬಲಿ: ಅವೈಜ್ಞಾನಿಕ ರಸ್ತೆ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ದೂರು

KannadaprabhaNewsNetwork |  
Published : Jun 04, 2025, 12:27 AM IST
2 | Kannada Prabha

ಸಾರಾಂಶ

ಮಂಜನಾಡಿ ಗ್ರಾಮದ ಉರುಮನೆ ಕೋಡಿಯಲ್ಲಿ ಮೇ 30ರಂದು ಸಂಭವಿಸಿದ ಭೂಕುಸಿತ ದುರಂತಕ್ಕೆ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಕಾರಣವಾಗಿದೆ ಎಂಬುದಾಗಿ ಮೃತ ಪುಟಾಣಿ ಮಕ್ಕಳ ತಂದೆ, ಮೃತ ತಾಯಿಯ ಪುತ್ರ ಸೀತಾರಾಮ ಅವರು ರಾಜ್ಯದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ಗೆ ದೂರು ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಳ್ಳಾಲತಾಲೂಕಿನ ಮಂಜನಾಡಿ ಗ್ರಾಮದ ಉರುಮನೆ ಕೋಡಿಯಲ್ಲಿ ಮೇ 30ರಂದು ಸಂಭವಿಸಿದ ಭೂಕುಸಿತ ದುರಂತಕ್ಕೆ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಕಾರಣವಾಗಿದೆ. ಕಳೆದ ಹಲವು ವರ್ಷಗಳಿಂದ ಮನೆಯಿದ್ದರೂ ಸಂಭವಿಸದ ದುರಂತ ಇದೀಗ ರಸ್ತೆ ನಿರ್ಮಾಣದ ಬೆನ್ನಲ್ಲೇ ನಡೆದಿರಲು ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಕಾರಣ ಎಂಬುದಾಗಿ ಮೃತ ಪುಟಾಣಿ ಮಕ್ಕಳ ತಂದೆ, ಮೃತ ತಾಯಿಯ ಪುತ್ರ ಸೀತಾರಾಮ ಅವರು ರಾಜ್ಯದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ಗೆ ದೂರು ಸಲ್ಲಿಸಿದ್ದಾರೆ.ಮನೆ ಮೇಲೆ ಗುಡ್ಡ ಕುಸಿದ ದುರಂತದಲ್ಲಿ ಸೀತಾರಾಮ ಪೂಜಾರಿ ಇವರ ತಾಯಿ ಪ್ರೇಮ ಪೂಜಾರಿ (60), ಇಬ್ಬರು ಮಕ್ಕಳಾದ ಆರ್ಯನ್ (3) ಮತ್ತು ಆರುಷ್‌ (1.5) ಮೃತಪಟ್ಟಿದ್ದಾರೆ. ಇವರ ಜೊತೆಗೆ, ಸೀತಾರಾಮ ಅವರ ಪತ್ನಿ ಅಶ್ವಿನಿ ಅವರ ಎರಡೂ ಕಾಲುಗಳು ಮತ್ತು ತಂದೆ ಕಾಂತಪ್ಪ ಪೂಜಾರಿ ಅವರ ಒಂದು ಕಾಲು ತುಂಡರಿಸಲ್ಪಟ್ಟಿದೆ. ಈ ದುರಂತಕ್ಕೆ ಮುಖ್ಯ ಕಾರಣವಾಗಿದ್ದು, ಕರ್ನಾಟಕ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಮಂಜೂರಾದ 20 ಲಕ್ಷ ರು.ಗಳ ಎಸ್.ಟಿ ಕಾಲೊನಿ ಸಿಸಿ ರಸ್ತೆ ಕಾಮಗಾರಿ. ಕೆ.ಆರ್.ಡಿ.ಐ.ಎಲ್. ಮಂಗಳೂರು ಘಟಕದಿಂದ ನಿರ್ಮಾಣಗೊಂಡ ಈ ರಸ್ತೆಯ ಕಾಮಗಾರಿಯ ಸಂದರ್ಭದಲ್ಲಿ, ಗುಡ್ಡದಿಂದ ಮಣ್ಣು ತೆಗೆಯುವಾಗ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಕಡ್ಡಾಯವಾದ ಭೂವೈಜ್ಞಾನಿಕ ಪರೀಕ್ಷೆ ನಡೆಸಲಾಗಿಲ್ಲ. ಮೈನ್ಸ್ ಆಂಡ್ ಮಿನರಲ್ಸ್ ರೆಗ್ಯುಲೇಷನ್ ಆಂಡ್ ಡೆವಲಪ್ ಮೆಂಟ್ ಆಕ್ಟ್ 1957 ಪ್ರಕಾರ, ಮಣ್ಣಿನ ಸ್ಥಿರತೆ ಮತ್ತು ಕುಸಿತದ ಸಂಭವವನ್ನು ಮೌಲ್ಯಮಾಪನ ಮಾಡುವುದು ಕಾನೂನುಬದ್ಧವಾಗಿದೆ. ಇದರ ಜೊತೆಗೆ, ಕರ್ನಾಟಕ ಅರಣ್ಯ ಕಾಯ್ದೆ 1964ರನ್ವಯ, ಮರಗಳಿದ್ದಲ್ಲಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಅಗತ್ಯವಾಗಿತ್ತು. ಆದರೆ, ಈ ಸುರಕ್ಷತಾ ಮಾನದಂಡಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಭಾರಿ ಮಳೆಯಿಂದಾಗಿ ಗುಡ್ಡದ ಮಣ್ಣು ಕುಸಿದು ಸೀತಾರಾಮ ಅವರ ಮನೆಯ ಮೇಲೆ ಬಿದ್ದಿದ್ದು, ಈ ದುರಂತಕ್ಕೆ ಕಾರಣವಾಯಿತು. ಗ್ರಾಮ ಪಂಯಿತಿ, ಜಿಲ್ಲಾ ಮಟ್ಟದ ಇಂಜಿನಿಯರಿಂಗ್ ವಿಭಾಗ ಮತ್ತು ಕಾಂಟ್ರಾಕ್ಟರ್‌ಗಳ ನಿರ್ಲಕ್ಷ್ಯವು ಈ ಘಟನೆಗೆ ಕಾರಣವಾಗಿದೆ. ಸೂಕ್ತ ಯೋಜನೆ, ತಾಂತ್ರಿಕ ಮೌಲ್ಯಮಾಪನ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದರೆ ಈ ದುರಂತ ತಡೆಯಬಹುದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ