ಧಾರವಾಡ: ಕಾರ್ಮಿಕರಿಗಾಗಿ ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆಯ ಮೂರು ವಾಹನಗಳನ್ನು ಇಲ್ಲಿಯ ಸರ್ಕ್ಯೂಟ್ ಹೌಸ್ ಆವರಣದಲ್ಲಿ ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.
ಕಟ್ಟಡ ನಿರ್ಮಾಣ ಪ್ರದೇಶಗಳಿಗೆ ಹೋಗಿ, ಜ್ವರ, ಕೆಮ್ಮು, ಮಧುಮೇಹ, ರಕ್ತದೊತ್ತಡ, ರಕ್ತ ಪರೀಕ್ಷೆ ಸೇರಿದಂತೆ ಸುಮಾರು 20 ಅಂಶಗಳ ಅನ್ವಯ ಕಾರ್ಮಿಕರ ಹಾಗೂ ಅವರ ಸಂಬಂಧಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ತಪಾಸಣೆ ಕುರಿತ ಅವರ ದಾಖಲೆಗಳು ಆನ್ ಲೈನ್ ಮೂಲಕ ನೇರವಾಗಿ ಕಾರ್ಮಿಕ ಇಲಾಖೆಯ ಮುಖ್ಯ ಕಚೇರಿಗೆ ತಲುಪುತ್ತದೆ. ಕಾರ್ಮಿಕರ ಅಧಿಕೃತ ದಾಖಲೆಗಳನ್ನು ಅಂತರ್ಜಾಲದ ಮೂಲಕ ದೃಢ ಪಡಿಸಿಕೊಳ್ಳಲಾಗುತ್ತದೆ ಎಂದರು.
ಕಾರ್ಯಾದೇಶ ಪಡೆದಿರುವ ಸಂಸ್ಥೆಗಳು ಪ್ರತಿ ತಿಂಗಳು ಸಂಚಾರಿ ಆರೋಗ್ಯ ಕ್ಲಿನಿಕ್ ಸಂಚರಿಸುವ ಮಾರ್ಗ, ಸ್ಥಳದ ಬಗ್ಗೆ ರೂಟ್ ಮ್ಯಾಪ್‌ನ್ನು ಸಿದ್ಧಪಡಿಸಿ, ಖಾತರಿಪಡಿಸಿಕೊಳ್ಳಬೇಕು. ಪ್ರತಿ ತಿಂಗಳ ಮಾರ್ಗವನ್ನು ಕನಿಷ್ಠ 15 ದಿನಗಳ ಮುಂಚಿತವಾಗಿ ಸಿದ್ಧಪಡಿಸಿ, ವಾಹನಗಳು ಸಂಚರಿಸುವ ಮಾರ್ಗದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಪ್ರಚಾರ ಮಾಡಬೇಕು. ಮಾರ್ಗವನ್ನು ತಯಾರಿಸುವಾಗ ಸಂಸ್ಥೆಯು ಎಲ್ಲ ತಾಲೂಕುಗಳು ಮತ್ತು ತಾಲೂಕಿನ ಎಲ್ಲ ಪ್ರದೇಶಗಳು (ಗ್ರಾಮ, ವಾರ್ಡ್, ಹೋಬಳಿ) ಒಳಪಡುವ ರೀತಿ ಕ್ರಮವಹಿಸಿ ಹಾಗೂ ಎಲ್ಲ ವಿಧಾನಸಭಾ ಕ್ಷೇತ್ರಗಳು ಒಳಪಡುವ ರೀತಿಯಲ್ಲಿ ಸಿದ್ದಪಡಿಸುತ್ತಾರೆ. ಮಾರ್ಗ ಸಿದ್ಧಪಡಿಸುವಾಗ ಪ್ರಯಾಣದ ಸಮಯವು ಅತ್ಯಂತ ಕಡಿಮೆ ಇರುವಂತೆ ಹಾಗೂ ನಿಗಧಿತ ಸ್ಥಳದಲ್ಲಿ ಸಂಚಾರಿ ಆರೋಗ್ಯ ಘಟಕಗಳು ಕನಿಷ್ಠ ನಾಲ್ಕು ಗಂಟೆಗಳಾದರೂ ಕಾರ್ಯನಿರ್ವಹಿಸುವುದನ್ನು ಖಾತರಿಪಡಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.ಹೆಚ್ಚಿನ ಸಂಖ್ಯೆಯ ನೋಂದಾಯಿತ ಕಾರ್ಮಿಕರಿಗೆ ಸೌಲಭ್ಯ ಸಿಗುವಂತಹ ಪ್ರದೇಶಗಳಿಗೆ ಹೋಗುವುದು. ಸಂಚಾರಿ ಆರೋಗ್ಯ ಘಟಕಗಳು ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಶೌಚಾಲಯಗಳು ಇರುವುದನ್ನು ಖಾತರಿಪಡಿಸಿಕೊಳ್ಳುವುದು. ಸದರಿ ಸಂಚಾರಿ ಆರೋಗ್ಯ ಘಟಕಗಳಲ್ಲಿ 25 ವೈದ್ಯಕೀಯ ಉಪಕರಣಗಳು, ಐದು ಪ್ರಯೋಗಾಲಯದ ಉಪಕರಣಗಳು ಹಾಗೂ 37 ವಿವಿಧ ವೈದ್ಯಕೀಯ ಬಳಕೆ ವಸ್ತುಗಳಿವೆ. ಈ ಕುರಿತು ಕಾರ್ಮಿಕ ಇಲಾಖೆ ಅಧಿಕಾರಿಗಳು ನಿಗಾ ವಹಿಸುತ್ತಾರೆ ಎಂದರು.
ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಸಿಇಓ ಭುವನೇಶ ಪಾಟೀಲ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.