ಹಾವೇರಿ: ಎರಡು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದ ಮನೆಯ ಚಾವಣಿ ಕುಸಿದು ಎರಡು ವರ್ಷದ ಅವಳಿ ಮಕ್ಕಳು, ಮಹಿಳೆ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಸವಣೂರು ತಾಲೂಕು ಮಾದಾಪುರ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.
ಮೃತ ಮಕ್ಕಳ ತಂದೆ ಮುತ್ತು, ತಾಯಿ ಸುನೀತಾ ಅಪಾಯದಿಂದ ಪಾರಾಗಿದ್ದು, ಸವಣೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೃದ್ಧೆ ಯಲ್ಲಮ್ಮ ಗಂಭೀರ ಗಾಯಗೊಂಡಿದ್ದು, ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಳೆಯ ಮಣ್ಣಿನ ಮನೆಯಲ್ಲಿ ವಾಸವಾಗಿದ್ದ ಈ ಕುಟುಂಬದವರು ಚಾವಣಿ ನೆನೆಯಬಾರದು ಎಂಬ ಕಾರಣಕ್ಕೆ ಮೇಲಿಂದ ತಾಡಪತ್ರಿ ಹೊದಿಸಿದ್ದರು. ಆದರೆ, ಎರಡು ದಿನಗಳಿಂದ ನಿರಂತರವಾಗಿ ಜಿಟಿಜಿಟಿ ಮಳೆಯಾಗುತ್ತಿದ್ದರಿಂದ ಅನಾಹುತ ಸಂಭವಿಸಿದೆ. ಶುಕ್ರವಾರ ಬೆಳಗಿನ ಜಾವ 3-30ರ ಸುಮಾರಿಗೆ ಚಾವಣಿ ಕುಸಿದು ಮಲಗಿ ನಿದ್ರಿಸುತ್ತಿದ್ದವರ ಮೇಲೆ ಬಿದ್ದಿದೆ. ತಕ್ಷಣ ಅಕ್ಕಪಕ್ಕದ ಮನೆಯವರು ರಕ್ಷಣೆಗೆ ಧಾವಿಸಿದ್ದಾರೆ. ಮಣ್ಣಿನಡಿ ಸಿಲುಕಿದ್ದವರನ್ನು ಹೊರಕ್ಕೆ ತೆಗೆದಿದ್ದಾರೆ. ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ, ಒಂದೂವರೆ ಗಂಟೆಯಾದ ಮೇಲೆ ಆ್ಯಂಬುಲೆನ್ಸ್ ಸ್ಥಳಕ್ಕೆ ಆಗಮಿಸಿದೆ. ಅಷ್ಟರೊಳಗೆ ಆ ಎರಡೂ ಪುಟ್ಟ ಕಂದಮ್ಮಗಳು ಹಾಗೂ ಮಹಿಳೆ ಮೃತಪಟ್ಟಿದ್ದಾರೆ.ಘಟನೆಯಿಂದ ಆಘಾತಗೊಂಡ ಕುಟುಂಬದ ಸದಸ್ಯರ ಆಕ್ರಂದನ ಮುಗಿಲುಮುಟ್ಟಿತ್ತು. ಇಡಿ ಗ್ರಾಮವೇ ದುಃಖದ ಮಡುವಿನಲ್ಲಿ ಮುಳುಗಿತ್ತು. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
₹ 5 ಲಕ್ಷ ಪರಿಹಾರ ಘೋಷಣೆಮಳೆ ಅನಾಹುತದಿಂದ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರದಿಂದ ತಲಾ ₹ 5 ಲಕ್ಷ ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಘೋಷಣೆ ಮಾಡಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ ₹ 2 ಲಕ್ಷ ಪರಿಹಾರ ನೀಡಿದರು.