ಶಿವಮೊಗ್ಗ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನ.5ರಂದು ನಡೆಸುತ್ತಿರುವ ಲೆಕ್ಕ ಸಹಾಯಕ ಹುದ್ದೆ ಪರೀಕ್ಷೆ ನಡೆಯುವ ದಿನವೇ ಐಪಿಪಿಎಸ್ ಹಾಗೂ ಕಲ್ಯಾಣ ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಪರೀಕ್ಷೆಯೂ ಇದೇ ದಿನ ನಡೆಯುತ್ತಿದೆ. ಈ ಮೂರು ಪರೀಕ್ಷೆ ತೆಗೆದುಕೊಂಡಿರುವ ಅಭ್ಯರ್ಥಿಗಳು ಒಂದೇ ದಿನ ಮೂರೂ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕೆಂಬ ಗೊಂದಲ, ಅನಿವಾರ್ಯತೆ ಸೃಷ್ಠಿಯಾಗಿದೆ. ಇದರಿಂದ ಒಂದು ದಿನ ಒಂದು ಪರೀಕ್ಷೆ ನಡೆಸಿ, ಉಳಿದ ಎರಡು ಪರೀಕ್ಷೆಯನ್ನು ಮುಂದೂಡಬೇಕು ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ. ಲೆಕ್ಕ ಸಹಾಯಕ ಹುದ್ದೆಗೆ ಪರೀಕ್ಷೆ ಬರೆಯುತ್ತಿರುವ ಬಹುತೇಕ ಮಂದಿ ಕಲ್ಯಾಣ ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಐಪಿಪಿಎಸ್ ಪರೀಕ್ಷೆಯನ್ನೂ ತೆಗೆದುಕೊಂಡಿದ್ದಾರೆ. ಒಂದೇ ದಿನ ಮೂರು ಪರೀಕ್ಷೆ ನಡೆಸಿದರೆ ಇವರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಕೆಪಿಎಸ್ಸಿಗಿಂತ ಮೊದಲೇ ಐಬಿಪಿಎಸ್ ಪರೀಕ್ಷೆ ವೇಳಾಪಟ್ಟಿ ನಿಗದಿಯಾಗಿತ್ತು. ಈ ವೇಳಾಪಟ್ಟಿ ನೋಡಿಕೊಂಡು ಕೆಪಿಎಸ್ಸಿ ಪರೀಕ್ಷೆ ಹಾಗೂ ಕಲ್ಯಾಣ ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಗೆ ವೇಳಾಪಟ್ಟಿ ನಿಗದಿ ಮಾಡಬೇಕಿತ್ತು. ಆದರೆ, ಇದನ್ನು ಮಾಡಿಲ್ಲ. ಈಗ ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂಬುದು ಆರೋಪ. ಸಹಾಯವಾಣಿಯಲ್ಲಿಯೂ ಇದಕ್ಕೆ ಸಂಬಂಧಿಸಿದ ಉತ್ತರ ಸಿಗುತ್ತಿಲ್ಲ. ಇದು ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಕೆಪಿಎಸ್ಸಿ. ಸಿವಿಲ್ ಪರೀಕ್ಷೆಗಳನ್ನು ಮುಂದೂಡುವಂತೆ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.