ತುಂಗಭದ್ರಾ ಹಿನ್ನೀರಿನಲ್ಲಿ ಮೂವರು ಯುವಕರು ನಾಪತ್ತೆ

KannadaprabhaNewsNetwork |  
Published : Aug 20, 2026, 02:00 AM IST
ತುಂಗಭದ್ರಾ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿ ನೀರು ಪಾಲಾದ ಅಜ್ಜಪ್ಪ, ಯಮನೂರ್ ಮತ್ತು ರಾಜು | Kannada Prabha

ಸಾರಾಂಶ

ಮೀನು ಹಿಡಿಯಲು ತೆರಳಿದ್ದ ಮೂವರು ಯುವಕರು ನಾಪತ್ತೆಯಾಗಿರುವ ಆತಂಕಕಾರಿ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದ ವ್ಯಾಪ್ತಿಯ ತುಂಗಭದ್ರಾ ನದಿಯ ಹಿನ್ನೀರಿನ ಬಳಿ ಮಂಗಳವಾರ ಸಂಜೆ ನಡೆದಿದೆ.

ಹಗರಿಬೊಮ್ಮನಹಳ್ಳಿ: ಮೀನು ಹಿಡಿಯಲು ತೆರಳಿದ್ದ ಮೂವರು ಯುವಕರು ನಾಪತ್ತೆಯಾಗಿರುವ ಆತಂಕಕಾರಿ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದ ವ್ಯಾಪ್ತಿಯ ತುಂಗಭದ್ರಾ ನದಿಯ ಹಿನ್ನೀರಿನ ಬಳಿ ಮಂಗಳವಾರ ಸಂಜೆ ನಡೆದಿದೆ.

ನಾಪತ್ತೆಯಾದವರಲ್ಲಿ ಮಡಿವಾಳರ ಯಮನೂರ (24) ಅವರ ಮೃತದೇಹ ಪತ್ತೆಯಾಗಿದ್ದು, ಮಡಿವಾಳರ ರಾಜು (27) ಹಾಗೂ ಮಡಿವಾಳರ ಅಜ್ಜಪ್ಪ (30) ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಮಂಗಳವಾರ ಸಂಜೆ ತಂಬ್ರಹಳ್ಳಿ ಗ್ರಾಮದ ಸಮೀಪದ ತುಂಗಭದ್ರಾ ಹಿನ್ನೀರಿನ ಪ್ರದೇಶಕ್ಕೆ ಮೀನು ಹಿಡಿಯಲು ತೆರಳಿದ್ದರು. ಸಂಜೆ ವೇಳೆಗೆ ಮನೆಗೆ ಮರಳುತ್ತಾರೆ ಎಂದು ಕುಟುಂಬಸ್ಥರು ನಿರೀಕ್ಷಿಸಿದ್ದರು. ಆದರೆ, ರಾತ್ರಿ ಕಳೆದರೂ ಮೂವರು ಮನೆಗೆ ವಾಪಸ್ ಆಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತು.

ಕುಟುಂಬಸ್ಥರು ಹಾಗೂ ಗ್ರಾಮಸ್ಥರು, ಯುವಕರು ತೆರಳಿದ್ದ ಸ್ಥಳ ಸೇರಿದಂತೆ ಹಿನ್ನೀರಿನ ದಡ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರು. ಯುವಕರ ಮೊಬೈಲ್ ಸಂಪರ್ಕ ಹಾಗೂ ಅವರು ತೆರಳಿದ್ದ ಸ್ಥಳದ ಕುರಿತು ಮಾಹಿತಿ ಕಲೆಹಾಕಲು ಪ್ರಯತ್ನಿಸಿದರೂ ಯಾವುದೇ ಸುಳಿವು ದೊರೆಯಲಿಲ್ಲ. ಬಳಿಕ ಪೊಲೀಸರಿಗೆ ದೂರು ನೀಡಲಾಯಿತು.

ಮಾಹಿತಿ ತಿಳಿಯುತ್ತಿದ್ದಂತೆಯೇ ಹಗರಿಬೊಮ್ಮನಹಳ್ಳಿ ಹಾಗೂ ತಂಬ್ರಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದರು. ಹಿನ್ನೀರಿನ ಪ್ರದೇಶದಲ್ಲಿ ನೀರಿನ ಆಳ ಹಾಗೂ ಅಪಾಯದ ಸಾಧ್ಯತೆ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಅಗ್ನಿಶಾಮಕ ದಳ ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್‌ಡಿಆರ್‌ಎಫ್) ತಂಡವನ್ನು ಸ್ಥಳಕ್ಕೆ ಕರೆಸಲಾಯಿತು.

ಶೋಧ ಕಾರ್ಯದಲ್ಲಿ ಯಮನೂರ್ ಅವರ ಮೃತದೇಹ ಪತ್ತೆಯಾದ ಪರಿಣಾಮವಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ರಾಜು ಹಾಗೂ ಅಜ್ಜಪ್ಪ ಅವರಿಗಾಗಿ ಬುಧವಾರ ಬೆಳಗ್ಗೆಯಿಂದ ಸಂಜೆವರೆಗೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಕೂಡ್ಲಿಗಿ ಡಿವೈಎಸ್‌ಪಿ ಮಲ್ಲೇಶ್ ನಾಯ್ಕ್, ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ, ತಹಸೀಲ್ದಾರ್ ಆರ್. ಕವಿತಾ ಸೇರಿದಂತೆ ಸ್ಥಳೀಯ ಪಂಚಾಯತಿ ಸಿಬ್ಬಂದಿ ಹಾಗೂ ತಂಬ್ರಹಳ್ಳಿ, ಹಗರಿಬೊಮ್ಮನಹಳ್ಳಿ, ಮರಿಯಮ್ಮನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪೊಲೀಸ್ ಠಾಣೆಗಳ ಸಿಬ್ಬಂದಿ ಅಗ್ನಿಶಾಮಕ ಠಾಣೆಯ 100ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಗೇವಾಡಿ ಕಾಲುವೆಗಳಿಗೆ ಸಮರ್ಪಕ ನೀರು ಹರಿಸಲು ಆಗ್ರಹಿಸಿ ಮನವಿ
​ನಿಷ್ಕಾಮ ಭಕ್ತಿ, ಪ್ರೀತಿಯಿಂದ ಮಾತ್ರ ದೈವತ್ವ ಸಾಧ್ಯ: ಬಸವರಾಜ ಬೊಮ್ಮಾಯಿ