ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತಾಲೂಕಿನ ಪರೇಸಂದ್ರ ಗ್ರಾಮದದಲ್ಲಿ ಶಾಂತಾ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗದಿನ ಆಚರಣೆಯಲ್ಲಿ ಮಾತನಾಡಿ, ಮನುಷ್ಯನಲ್ಲಿರುವ ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ, ನೈತಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳ ಸಮನ್ವಯತೆಯಿಂದ ಪರಿಪೂರ್ಣ ವ್ಯಕ್ತಿತ್ವ ಗಳಿಸಿಕೊಳ್ಳಲು ಯೋಗ ನೆರವಾಗುತ್ತದೆ ಎಂದರು.
ನಮ್ಮ ದೇಶದ ಪ್ರಾಚೀನ ಪರಂಪರೆಯಲ್ಲಿ ಪತಂಜಲಿ ಮಹರ್ಷಿಯವರಿಂದ ರೂಪುಗೊಂಡು ಆಚರಣೆಗೆ ಬಂದ ಯೋಗಕ್ಕೆ ಇಂದು ಜಗತ್ತಿನಾದ್ಯಂತ ಬೇಡಿಕೆಯಿದ್ದು, ಯೋಗವನ್ನು ಮನುಕುಲಕ್ಕೆ ಕೊಡುಗೆಯಾಗಿ ನೀಡಿರುವ ಗೌರವಕ್ಕೆ ಭಾರತವು ಪಾತ್ರವಾಗಿದೆ. ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಯತ್ನದಿಂದಾಗಿ 2015 ರ ಜೂನ್ 21ರಿಂದ ಅಂತಾರಾಷ್ಟ್ರೀಯ ಯೋಗ ದಿನವನ್ನು ಜಗತ್ತಿನ 180 ಕ್ಕೂ ಹೆಚ್ಚು ರಾಷ್ಟ್ರಗಳು ಆಚರಿಸುತ್ತಿವೆ ಎಂದರು.ಭಾರತದ ಗುರುಕುಲ ಪರಂಪರೆಯಲ್ಲಿ ಕಡ್ಡಾಯವಾಗಿ ಯೋಗವನ್ನು ಬೋಧಿಸಲಾಗುತ್ತಿತ್ತು. ಯೋಗವು ಶಿಕ್ಷಣದ ಬಹುಮುಖ್ಯ ಅಂಶವಾಗಿದ್ದು, ಶಾರೀರಿಕ ವಿಕಸನ, ಜ್ಞಾನೇಂದ್ರಯಗಳ ಪಟುತ್ವ, ಪ್ರಜ್ಞೆ, ಜ್ಞಾನ ಮತ್ತು ಆಲೋಚನೆಯನ್ನು ಬಲಗೊಳಿಸಿ ಸಂಸ್ಕಾರಗೊಳಿಸಲು ಯೋಗಾಭ್ಯಾಸವು ನೆರವಾಗುತ್ತದೆ. ಯೋಗಾಭ್ಯಾಸದಿಂದ ಅಧ್ಯಯನ ಪರಿಗಣಿತಿ, ಸಂಸ್ಕಾರ ಹಾಗೂ ಸೇವಾಭಾವನೆಗಳು ಹುಟ್ಟಿ ಬೆಳೆಯುತ್ತವೆ. ಯೋಗಾಭ್ಯಾಸವು ಯಾವುದೇ ದೇಶ, ಭಾಷೆ, ಲಿಂಗ, ಜಾತಿ, ಧರ್ಮಗಳಿಗೆ ಸೀಮಿತವಾಗುವುದಿಲ್ಲ, ಸರ್ವಜನರಿಗೂ ಯೋಗದ ಅವಶ್ಯಕತೆಯಿದ್ದು, ಯೋಗದಿಂದ ಜನರ ನಡುವೆ ಸೋದರತ್ವ, ಸಹಬಾಳ್ವೆ ಹಾಗೂ ಭಾವೈಕ್ಯತೆ ಗುಣಗಳು ಬೆಳೆಯುತ್ತವೆ. ಶಾಲಾ ಹಂತದಲ್ಲಿಯೇ ವಿವಿಧ ಆಸನಗಳು, ಧ್ಯಾನ, ಪ್ರಾಣಾಯಾಮ ಹಾಗೂ ವಿಭಿನ್ನ ಮುದ್ರೆಗಳನ್ನು ಕಲಿತು ಅಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳ ಅಧ್ಯಯನ ಶಕ್ತಿ ಹಾಗೂ ಜ್ಞಾನಾರ್ಜನೆ ಶಕ್ತಿಯುತವಾಗಿ ಮೂಡಿ ಬರುತ್ತದೆ ಎಂದು ಅಭಿಪ್ರಾಯ ಪಟ್ಟರು.
ಸಂಸ್ಥೆಯ ಯೋಗ ಶಿಕ್ಷಕಿ ಶ್ರೇಯಾ ವಿವಿಧ ಆಸನಗಳನ್ನು ಪ್ರದರ್ಶನದೊಂದಿಗೆ ಪ್ರಸ್ತುತ ಪಡಿಸಿದರು. ಶಾಂತಾ ಸಂಸ್ಥೆಯ ವಿದ್ಯಾರ್ಥಿಗಳು ನಡೆಸಿದ ಸಾಮೂಹಿಕ ಯೂಗಾಸನವು ಅತ್ಯಂತ ಪ್ರೇರಕವಾಗಿತ್ತು.