-ನಾಗರಾಜ್ ನ್ಯಾಮತಿ
ಕನ್ನಡಪ್ರಭ ವಾರ್ತೆ, ಸುರಪುರಹಿಂದೆಂದು ಕಂಡರಿಯದಂತ ನಾಲ್ಕು ನಿಮಿಷದ ಬಹುದೊಡ್ಡ ಬಿರುಗಾಳಿ ಮಳೆಗೆ ಅಪಾರ ಹಾನಿ ಉಂಟಾಗಿ ತಾಲೂಕಿನ ದೇವಾಪುರದಲ್ಲಿ ಬುಧವಾರ ಸಂಜೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, ಮನೆ ಕಳೆದುಕೊಂಡವರು ಬೀದಿಗೆ ಬಂದಿದ್ದಾರೆ. ಮತ್ತೊಂದೆಡೆ ನಾಶದ ಲೆಕ್ಕಾಚಾರವು ಮುಂದುವರಿದಿದೆ. ಬುಧವಾರ ಸಂಜೆ 6 ಗಂಟೆ ವೇಳೆಗೆ ಆರಂಭವಾದ 4 ನಿಮಿಷ ಬಿರುಗಾಳಿ ಮಳೆಗೆ ದೇವಾಪುರದಲ್ಲಿ ನೋಡ ನೋಡುತ್ತಿದ್ದಂತೆ ಅಪಾರ ಮನೆಗಳ ತಗಡುಗಳು ಗಾಳಿಯಲ್ಲೇ ಹಾರಿ ಹೋಗಿದ್ದು, ದುರದೃಷ್ಟವಶಾತ್ ಯಾರೊಬ್ಬರಿಗೂ ಹಾನಿಯಾಗಿಲ್ಲ ಎಂಬುದು ಸಮಧಾನಕರ ಸಂಗತಿಯಾಗಿದೆ. * ಹಾರಿದ ತಗುಡುಗಳು:
ಗ್ರಾಮದಲ್ಲಿ ಸುಮಾರು 70ಕ್ಕೂ ಹೆಚ್ಚು ಮನೆಗಳ ತಗುಡುಗಳು ಬಿರುಗಾಳಿ ಹಾರಿ ಹೋಗಿವೆ. ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ಭಾರೀ ಹಾನಿಯಾದರೆ 50ಕ್ಕೂ ಹೆಚ್ಚು ಮನೆಗಳಿಗೆ ಲಘು ಪ್ರಮಾಣದಲ್ಲಿ ಹಾನಿಯಾಗಿದೆ. * ಹಾನಿ:15ಕ್ಕೂ ಹೆಚ್ಚು ಮರಗಳು ಬಿರುಗಾಳಿಗೆ ಧರೆಗುರುಳಿದ್ದು, ದೇವಾಪುರ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. * ಫ್ರಿಡ್ಜ್, ಟಿವಿ ನಾಶ:
ಮನೆಗೆ ಮೇಲ್ಛಾವಣಿ ಹಾಕಿದ್ದ ಸಿಮೆಂಟ್ ಸೀಟ್ ಗಾಳಿಗೆ ಕಿತ್ತು ಕೆಳಗೆ ಬಿದ್ದಿದೆ. ಇದರಿಂದ ಮನೆಯೊಳಗಿದ್ದ ಅಂದಾಜು 20 ಸಾವಿರ ಮೌಲ್ಯದ ಪ್ರಿಡ್ಜ್, 15 ಸಾವಿರ ಮೌಲ್ಯದ ಎಲ್‌ಇಡಿ ಟಿವಿ ಹಾನಿಯಾಗಿದೆ. ಗಾಳಿ ಬರುತ್ತಿದ್ದಂತೆ ಮನೆಯೊಳಗಿದ್ದವರು ಹೊರಗಡೆ ಬಂದಿದ್ದರಿಂದ ಯಾರೊಬ್ಬರಿಗೂ ಗಾಯವಾಗಿಲ್ಲ ಎಂಬುದಾಗಿ ಗ್ರಾಮದ ಮುಖಂಡ ಸಂತೋಷಕುಮಾರ ಬಾಕ್ಲಿ ತಿಳಿಸಿದ್ದಾರೆ.* ಜೀವ ಹಿಡಿದು ಕುಳಿತ ಜನತೆ:ಇಂತಹ ಬಿರುಗಾಳಿಯನ್ನು ನಾವೆಂದು ಕಂಡಿಲ್ಲ. ಬಿರುಗಾಳಿಗೆ ಇಡೀ ಜೀವ ಹೋಯಿತೆಂಬ ಭಾವ ಮನದಲ್ಲಿ ಉಂಟಾಯಿತು. ಗ್ರಾಮದ ಜನತೆಯೂ ನಾಲ್ಕೈದು ನಿಮಿಷ ಜೀವವನ್ನು ಕೈಯಲ್ಲಿ ಹಿಡಿದು ಕುಳಿತಿದ್ದೆವು. ದೇವರ ದಯೆಯಿಂದ ಜೀವ ಹಾನಿಯಾಗಿಲ್ಲ ಎಂಬುದಾಗಿ ಗ್ರಾಮದ ಮಹದೇವ ಛಲವಾದಿ ಕನ್ನಡಪ್ರಭ ಪತ್ರಿಕೆಗೆ ತಿಳಿಸಿದರು. * ಬಿರುಗಾಳಿಯಿಂದ ಅಪಾರ ಮನೆಗಳಿಗೆ ಹಾನಿಯಾಗಿದ್ದರಿಂದ ಕಂದಾಯ ಇಲಾಖೆಯ ಅಧಿಕಾರಿಗಳು ಹಾನಿ ಲೆಕ್ಕಾಚಾರದಲ್ಲಿ ಮುಳುಗಿದ್ದರು. ಇಡೀ ದಿನ ಸುಮಾರು 30 ಮನೆಗಳ ಹಾನಿಯ ಮಾಹಿತಿ ಕಲೆ ಹಾಕುವಲ್ಲಿ ಸುಸ್ತಾಗಿ ಹೋಗಿದ್ದಾರೆ. * ಜೆಸ್ಕಾಂನಿಂದ ದುರಸ್ತಿ ಕಾರ್ಯ :
ಗ್ರಾಮದಲ್ಲಿ 40ಕ್ಕೂ ಹೆಚ್ಚು ಕಂಬಗಳು ಉರುಳಿ ಬಿದ್ದಿದ್ದು, ಇದರಿಂದ ಲಕ್ಷಾಂತರ ರು. ನಷ್ಟ ಜೆಸ್ಕಾಂಗೆ ಉಂಟಾಗಿದೆ. ವಿದ್ಯುತ್ ಕಂಬ ಮರು ಸ್ಥಾಪನೆ, ವೈರ್‌ಗಳ ಜೋಡಣೆ ಕಾರ್ಯ ಜೆಸ್ಕಾಂ ಇಲಾಖೆಯಿಂದ ನಡೆಯುತ್ತಿದೆ.ಒಂದು ವಾರ ವಿದ್ಯುತ್ ಕಷ್ಟ: ಬುಧವಾರ ಸಂಜೆ 6 ಗಂಟೆಯಿಂದ ಹೋದ ವಿದ್ಯುತ್ ಗುರುವಾರವಾದರೂ ಬಂದಿರಲಿಲ್ಲ. ಇದರಿಂದ ಇಡೀ ದೇವಾಪುರ ಗ್ರಾಮವೂ ವಿದ್ಯುತ್ ಇಲ್ಲದೆ ಕತ್ತಲೆಯ ಕೂಪದಲ್ಲಿ ಮುಳುಗಿದೆ. ಒಂದು ವಾರ ವಿದ್ಯುತ್ ಬರುವುದು ತುಸು ಕಷ್ಟವಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.