ಕನ್ನಡಪ್ರಭ ವಾರ್ತೆ ಧಾರವಾಡ
ಬೇಸಿಗೆಯ ಝಳಕ್ಕೆ ವಿಪರೀತ ಬಸವಳಿದ ಜಿಲ್ಲೆಯ ಜನರಿಗೆ ಶನಿವಾರ ಮಧ್ಯಾಹ್ನ ನಂತರ ಬಿರುಗಾಳಿ, ಗುಡುಗು ಹಾಗೂ ಸಿಡಿಲು ಮಿಶ್ರಿತ ಹದವಾದ ಮಳೆ ಸುರಿದು ಹಿತಾನುಭವ ನೀಡಿತು.ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ನೆತ್ತಿ ಸುಡುತ್ತಿದ್ದ ಸೂರ್ಯನ ಕಿರಣಗಳು, ಸಂಜೆ ಮೋಡ ಕವಿದ ವಾತಾವರಣ ವರುಣನ ಆಗಮನಕ್ಕೆ ಇಂಬು ನೀಡಿತು. ಕಾದು ಕೆಂಡವಾದ ಧರಣಿ ಮೋಡಗಳ ಜಡೆಬಿಚ್ಚಿ ಮೈ ತೊಳೆದುಕೊಂಡಳು.
ಧಾರವಾಡದಲ್ಲಿ ಹೆಚ್ಚು ಮಳೆ ಆಗದೇ ಇದ್ದರೂ ಗುಡುಗು ಸಿಡಿಲಿನ ಅಬ್ಬರ ಜೋರಾಗಿಯೇ ಇತ್ತು. ಕೆಲವೇ ಹೊತ್ತು ಮಳೆ ಬಂದರೂ ದೊಡ್ಡ ಹನಿ ಇರುವ ಕಾರಣ ಇಳಿಜಾರು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು. ಜತೆಗೆ ಮಳೆಯಿಂದ ಚರಂಡಿ ತುಂಬಿ ನೀರು ರಸ್ತೆಯ ಮೇಲೆ ಹರಿದ ಪರಿಣಾಮ ವಾಹನಗಳ ಸಂಚಾರ ದಟ್ಟನೆ ಹೆಚ್ಚಿತ್ತು.ಬಿರುಗಾಳಿಗೆ ಡಿಸಿ ಕಚೇರಿ ಆವರಣದ ಹತ್ತಿರ ಈಜಗೋಳ ನಿರ್ಮಾಣಕ್ಕೆ ಕಟ್ಟಿದ ಕಟ್ಟಿಗೆಗಳು ಸಂಪೂರ್ಣ ಖಾಸಗಿ ಬಸ್ ಮೇಲೆ ಬಿದ್ದಿವೆ. ಇದರಿಂದ ಬಸ್ ಸ್ವಲ್ಪ ಪ್ರಮಾಣದಲ್ಲಿ ಹಾನಿಗೆ ಒಳಗಾಗಿದೆ. ಅದೃಷ್ಟವಶಾತ್ ಬಸ್ಸಿನಲ್ಲಿ ಇದ್ದ ಚಾಲಕ ಮತ್ತು ಕ್ಲೀನರ್ ಗೆ ಯಾವುದೇ ಪ್ರಾಣಾಪಾಯ ಆಗಿಲ್ಲ.
ಮಹಾನಗರದ ಅಲ್ಲಲ್ಲಿ ಮರದ ಟೊಂಗೆಗಳು, ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಈ ವೇಳೆ ವಿದ್ಯುತ್ ಕೈಕೊಟ್ಟ ಹಿನ್ನೆಲೆ ಮಹಾನಗರ ಜನತೆ ಪೇಚಿಗೆ ಸಿಲುಕಿದರು. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಸಾರ್ವಜನಿಕರು ಹೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಶಪಿಸುವಂತಾಯಿತು. ಈ ಮಳೆಯಿಂದ ರೈತಕುಲ ಹರ್ಷಗೊಂಡಿದೆ. ಮುಂಗಾರು ಬಿತ್ತನೆಗೆ ಮಳೆ ಪೂರಕ ಆಗಲಿದೆ. ಬರೀ ಧಾರವಾಡ ಮಾತ್ರವಲ್ಲದೇ ಇಡೀ ಜಿಲ್ಲಾದ್ಯಂತ ಸಾಧಾರಣ ಮಳೆ ಆಗಿದೆ.ಅಳ್ನಾವರ, ಕಲಘಟಗಿಯಲೂ ಮಳೆ
ಅಳ್ನಾವರ: ಬಿಸಿಲಿನ ಬೇಗೆಯಲ್ಲಿ ಬಸವಳಿದ ಇಳೆಗೆ ಶನಿವಾರ ಮಧ್ಯಾಹ್ನ ಬಂದ ಮಳೆ ತುಸು ತಂಪೆರೆದಿದೆ. ಸೆಖೆಯಿಂದ ಕಂಗಾಲಾದ ಜನರಿಗೆ ತಂಗಾಳಿಯ ಅನುಭವ ನೀಡುವುದಕ್ಕೆ ಮಾತ್ರ ಸೀಮಿತವಾದ ಈ ಮಳೆಯು ಬೆಳೆಗಳಿಗೆ ತನ್ಮಯವಾಗುವ ರೀತಿ ಸುರಿಯಲಿಲ್ಲ. ಕಬ್ಬಿನ ಬೆಳೆ ನೀರಿಲ್ಲದೆ ಒಣಗುತ್ತಿದೆ. ಮತ್ತೊಂದು ಕಡೆ ಭತ್ತ ಬಿತ್ತನೆಗಾಗಿ ರೈತರು ಹೊಲಗಳನ್ನು ಸ್ವಚ್ಛಗೊಳಿಸಿ ಇಟ್ಟುಕೊಂಡಿದ್ದು ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.