ಕನ್ನಡಪ್ರಭ ವಾರ್ತೆ ಉಡುಪಿ/ಮಂಗಳೂರು
ಕರಾವಳಿಯಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಗುಡುಗು ಸಿಡಿಲು ಸಹಿತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಿಸಿದೆ.ಹವಾಮಾನ ಇಲಾಖೆಯ ಮುನ್ಸೂಚನೆ ಬೆನ್ನಲ್ಲೆ ಭಾನುವಾರ ಮಧ್ಯಾಹ್ನವೇ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ರಾತ್ರಿ ಲಘುವಾಗಿ ಮಳೆಯಾಗುತ್ತಿದೆ. ಭಾನುವಾರ ಮಧ್ಯಾಹ್ನ ಕಾಪು ಮತ್ತು ಕಾರ್ಕಳ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ.
ಉಡುಪಿ ಜಿಲ್ಲೆಯಾದ್ಯಂತ ಬತ್ತದ ಬೆಳೆ ಬಲಿತಿದ್ದು ಕೊಯ್ಲಿಗೆ ಸಿದ್ಧವಾಗಿದೆ. ಆರಂಭದಲ್ಲಿ ಮಳೆಯ ಕೊರತೆಯಿಂದ ಸಂಕಷ್ಟಕ್ಕೊಳಗಾಗಿದ್ದ ರೈತರು ಈಗ ಕೊಯ್ಲಿಗೆ ತಯಾರಿ ನಡೆಸುತ್ತಿರುವಾಗಲೇ ಅಕಾಲಿಕವಾಗಿ ಸುರಿಯುತ್ತಿರುವ ಮಳೆ ರೈತರ ಆತಂಕಕ್ಕೆ ಕಾರಣವಾಗಿದೆ.ಮಂಗಳೂರು ವರದಿ: ದ.ಕ. ಜಿಲ್ಲೆಯ ಬಹುತೇಕ ಕಡೆ ಭಾನುವಾರ ಮಧ್ಯಾಹ್ನ ಬಳಿಕ ಉತ್ತಮ ಮಳೆ ಸುರಿದಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ ವೇಳೆಗೆ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದರೆ, ಮಂಗಳೂರಿನಲ್ಲಿ ರಾತ್ರಿ ಒಂದೆರಡು ಗಂಟೆ ಸಾಧಾರಣ ಮಳೆಯಾಗಿದೆ.
ಭಾನುವಾರ ಬೆಳಗ್ಗಿನಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ನಂತರ ಮಳೆ ಸುರಿಯಲು ಆರಂಭಿಸಿದೆ. ಬಿಟ್ಟೂ ಬಿಟ್ಟು ಮಳೆ ಅಲ್ಲಲ್ಲಿ ಸುರಿದಿದೆ. ಸೋಮವಾರವೂ ಮಳೆ ಮುಂದುವರಿಯುವ ಮುನ್ಸೂಚನೆ ನೀಡಲಾಗಿದೆ.ದ.ಕ. ಜಿಲ್ಲೆಯಲ್ಲಿ ಶನಿವಾರ ಬೆಳಗ್ಗಿನಿಂದ ಭಾನುವಾರ ಬೆಳಗ್ಗಿನವರೆಗೆ ಸರಾಸರಿ 26.1 ಮಿ.ಮೀ. ಮಳೆ ದಾಖಲಾಗಿದೆ. ಮೂಡುಬಿದಿರೆಯಲ್ಲಿ 15.1 ಮಿ.ಮೀ., ಸುಳ್ಯದಲ್ಲಿ 28.1 ಮಿ.ಮೀ., ಪುತ್ತೂರಿನಲ್ಲಿ 19.2 ಮಿ.ಮೀ., ಮಂಗಳೂರು 18.7 ಮಿ.ಮೀ, ಬೆಳ್ತಂಗಡಿ 25.9 ಮಿ.ಮೀ, ಕಡಬ 29.1 ಮಿ.ಮೀ, ಬಂಟ್ವಾಳದಲ್ಲಿ 10.7 ಮಿ.ಮೀ. ಮಳೆಯಾಗಿದೆ.
ಮಳೆಗೆ ಬೆಳೆ ಹಾನಿ ಭೀತಿಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಅಕಾಲಿಕ ಮಳೆ ಸುರಿಯುತ್ತಿದ್ದು, ಬೆಳೆ ಹಾನಿ ಭೀತಿ ಎದುರಾಗಿದೆ. ತಾಲೂಕು ವ್ಯಾಪ್ತಿಯ ಕೃಷಿ ಪ್ರಧಾನ ಪ್ರದೇಶಗಳಾದ ಶಿಮಂತೂರು, ಬಳ್ಕುಂಜೆ, ಅತಿಕಾರಿ ಬೆಟ್ಟು, ತೋಕೂರು, ಕಿನ್ನಿಗೋಳಿ, ಕಟೀಲು, ಪಕ್ಷಿಕೆರೆ ಪ್ರದೇಶಗಳಲ್ಲಿ ಈ ಬಾರಿ ಭರಪೂರ ಫಸಲು ಬಂದಿದ್ದು, ಮಳೆಯಿಂದ ಬೆಳೆ ಹಾನಿಗೀಡಾಗುವ ಸಾಧ್ಯತೆಗಳಿವೆ. ಅಕಾಲಿಕ ಮಳೆಯಿಂದ ಹೊಂಡ ಗುಂಡಿಗಳಿಂದ ಕೂಡಿದ ರಸ್ತೆ ಕೆಸರು ನೀರು ತುಂಬಿ ಸಂಚಾರ ದುಸ್ತರವಾಗಿ ಪರಿಣಮಿಸಿದೆ.