ಮೂರುಸಾವಿರಮಠ ಭಾವೈಕ್ಯತೆಯ ಮಹಾಮಠ: ಪ್ರಭುಚನ್ನಬಸವ ಶ್ರೀ

KannadaprabhaNewsNetwork | Published : May 27, 2024 1:03 AM

ಸಾರಾಂಶ

ಅಥಣಿ ಮೊಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಅವರಿಗೆ ಡಾ. ಮೂಜಗಂ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮೂರುಸಾವಿರ ಮಠವು ಭಾವೈಕ್ಯತೆಯ ಮಹಾಮಠವಾಗಿದೆ ಎಂದು ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಶ್ರೀಗಳು ಹೇಳಿದರು.

ಅವರು ಇಲ್ಲಿನ ಜ. ಮೂರುಸಾವಿರ ಮಹಾಸಂಸ್ಥಾನ ಮಠದ ವತಿಯಿಂದ ಡಾ. ಮೂಜಗಂ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲಿಂ. ಡಾ. ಗಂಗಾಧರ ರಾಜಯೋಗೀಂದ್ರ ಶ್ರೀಗಳ 21ನೇ ಪುಣ್ಯ ಸ್ಮರಣೋತ್ಸವ ಹಾಗೂ ಡಾ. ಮೂಜಗಂ ಸಾಹಿತ್ಯ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿ ಮಠಗಳು ಎಂದರೆ ಮೂಗು ಮುರಿಯುವ ಕಾಲದಲ್ಲಿ ಮಠಗಳು ಹೀಗೆ ಇರಬೇಕು ಎಂಬುದನ್ನು ತೋರಿಸಿಕೊಟ್ಟವರು ಲಿಂ. ಗಂಗಾಧರ ರಾಜಯೋಗೀಂದ್ರ ಶ್ರೀಗಳು. ಇಂದು ಸಾಹಿತ್ಯ, ಸಂಸ್ಕೃತಿಗಳು ಅಧಃಪತನದಲ್ಲಿದ್ದು, ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಬಹುದೊಡ್ಡ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.

ವ್ಯಕ್ತಿ ಹುಟ್ಟಿ ಸಾಧನೆ ಮಾಡುತ್ತ, ಸಮಾಜ ಸೇವೆಗೆ ತೊಡಗಿಸಿಕೊಂಡಾಗ ಅವರಿಗೆ ದೊರೆಯುವ ಸನ್ಮಾನ ಅವಿಸ್ಮರಣೀಯ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ಮಠಗಳಿಗೆ ಮಠಾಧೀಶರನ್ನು ನೀಡಿರುವುದು ಮೂರುಸಾವಿರ ಮಠ. ಅಭಿಮಾನ ಎನ್ನುವುದು ದೊಡ್ಡದು. ಅಭಿಮಾನ ಶೂನ್ಯರಾಗಬಾರದು. ನಮ್ಮ ಶ್ರೀಗಳು ಎನ್ನುವ ಅಭಿಮಾನ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಮೂರು ಸಾವಿರಮಠ ಆಗಿನ ಕಾಲಕ್ಕೆ ದೇಶದಲ್ಲಿ ಮಾದರಿ ಮಠವನ್ನಾಗಿ ಡಾ. ಗಂಗಾಧರ ರಾಜಯೋಗೀಂದ್ರ ಶ್ರೀಗಳು ರೂಪಿಸಿದ್ದಾರೆ. ಹಿರಿಯ ಶ್ರೀಗಳಿಗೆ ತಾವು ಸ್ವಾಮೀಜಿ ಎನ್ನುವ ಗರ್ವ ಇರಲಿಲ್ಲ. ಅವರು ಸಮಾಜದ ಬಗ್ಗೆ, ಮಹಿಳೆಯರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು. ನಮಗೆ ನೆಮ್ಮದಿ ನೀಡುವ ಸ್ಥಳಗಳು ಮಠ-ಮಾನ್ಯಗಳು. ಮಠಾಧೀಶರು ಜನರಿಗೆ ಮಾರ್ಗದರ್ಶನ ಮಾಡುವ ಕಾರ್ಯವನ್ನು ನಿರಂತರವಾಗಿ ಮಾಡಬೇಕು. ಜನರ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಸದಾ ಚಿಂತನಶೀಲರಾಗಿರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಮಾತನಾಡಿ, ಸಾಹಿತ್ಯ, ಕಲೆ, ಕಾವ್ಯ ಇವೆಲ್ಲವೂ ಮನುಕುಲವನ್ನು ಎತ್ತರದ ಮಟ್ಟಕ್ಕೆ ಕರೆದುಕೊಂಡು ಹೋಗುತ್ತವೆ. ಚಿಂತೆ, ಮಾನಸಿಕ ತೊಳಲಾಟ ಮನುಷ್ಯನ ಆಶಯವಲ್ಲ, ಅವುಗಳನ್ನು ದಾಟಿ ಸಂತಸದಿಂದ ಇರಬೇಕು ಎಂಬುದು ಮನುಷ್ಯನ ಮೂಲ ಧ್ಯೇಯ. ಸಾಧನೆ, ಸಿದ್ಧಿಯಿಂದ ಪ್ರಶಸ್ತಿಗಳು ದೊರಕಬೇಕು. ಅದರಿಂದ ನಮಗೆ ಖುಷಿ ದೊರೆಯಬೇಕು ಎಂದರು.

ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ಗಂಗಾಧರ ಶ್ರೀಗಳನ್ನು ನಾವು ಪ್ರತಿನಿತ್ಯ ಸ್ಮರಿಸಬೇಕು. ಅವರು ಈ ಮಠವನ್ನು ರಾಷ್ಟ್ರದಾದ್ಯಂತ ಹೆಸರುವಾಸಿ ಮಾಡಿದವರು. ಎಲ್ಲಿಯೇ ಗಲಭೆಗಳಾದರೂ ಶಾಂತಿ ಸಭೆಯನ್ನು ಮಾಡುವ ಮೂಲಕ ಗಂಗಾಧರ ಶ್ರೀಗಳು ಸಮಸ್ಯೆಯನ್ನು ಬಗೆಹರಿಸುತ್ತಿದ್ದರು. ಒಬ್ಬ ವ್ಯಕ್ತಿ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದರೆ ಉತ್ತಮ ಗ್ರಂಥಗಳು ಹೊರ ಹೊಮ್ಮುತ್ತವೆ ಎನ್ನಲು ಮೊಟಗಿ ಮಠದ ಪ್ರಭುಚನ್ನಬಸವ ಶ್ರೀಗಳೇ ಸಾಕ್ಷಿ ಎಂದರು.

ಇದೇ ವೇಳೆ ಅಥಣಿ ಮೊಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಅವರಿಗೆ ಡಾ. ಮೂಜಗಂ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎರಡೆತ್ತಿನ ಮಠದ ಸಿದ್ಧಲಿಂಗ ಶ್ರೀಗಳು, ರುದ್ರಾಕ್ಷಿ ಮಠದ ಬಸವಲಿಂಗ ಶ್ರೀಗಳು, ನವಲಗುಂದ ವಿರಕ್ತಮಠದ ಬಸವಲಿಂಗ ಶ್ರೀಗಳು, ರಾಯನಾಳ ರೇವಣಸಿದ್ದೇಶ್ವರ ಮಠದ ಅಭಿನವ ರೇವಣಸಿದ್ದೇಶ್ವರ ಶ್ರೀಗಳು, ಮಹೇಂದ್ರ ಸಿಂಘಿ, ಶರಣಪ್ಪ ಕೊಟಗಿ, ಬಿ.ಎಲ್. ಪಾಟೀಲ, ಶಶಿ ಸಾಲಿ, ರಾಜಶೇಖರ ಮೆಣಸಿನಕಾಯಿ, ಸುನೀತಾ ಬುರಬುರೆ ಸೇರಿದಂತೆ ಹಲವರಿದ್ದರು.

Share this article