ಲೋಕಸಭೆ ಚುನಾವಣೆಯಲ್ಲಿ ಎಲ್ಲಿಂದಲೋ ಬಂದ ಕಾಳಪ್ಪ, ಬೋಳಪ್ಪ, ಮಲ್ಲಪ್ಪರಿಗೆಲ್ಲ ಟಿಕೆಟ್ ಇಲ್ಲ: ಸಚಿವ ಎಸ್ಸೆಸ್ಸೆಂ ಪರೋಕ್ಷ ವಾಗ್ದಾಳಿ
ಕಾಂಗ್ರೆಸ್ ಪಕ್ಷದ ಪೋಸ್ಟರ್ ಅಂಟಿಸಿ, ಬಾವುಟ ಹಿಡಿದ ಕಾರ್ಯಕರ್ತರಿಗೆ ಮೊದಲ ಆದ್ಯತೆ. ಎಲ್ಲೋ ಇದ್ದುಕೊಂಡು, ಈಗ ಬಂದರೆ ಏನೂ ನಡೆಯಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆ ಲೋಕಸಭೆ ಚುನಾವಣೆಗೆ ಕೆಲವರು ತಾವು ಆಕಾಂಕ್ಷಿಗಳೆಂದು ಹೇಳಿಕೊಳ್ಳುತ್ತಿರುವ ವಿಚಾರದಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಬಿ.ಮಂಜಪ್ಪ ಹೇಳಿದ್ದು ನಿಜವಿದೆ. ಕಾಂಗ್ರೆಸ್ಸಿನಲ್ಲಿ ಬಾವುಟ ಹಿಡಿದು, ಪೋಸ್ಟರ್ ಅಂಟಿಸಿ, ಚುನಾವಣೆ ಕೆಲಸ ಮಾಡಿದವರಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತೇವೆ ಎಂದರು.ಚನ್ನಗಿರಿ ಶಾಸಕ ಹೇಳಿದ್ದನ್ನು ನೋಡಿದ್ದೇನೆ, ಎಲ್ಲರೂ ಕಾರ್ಯಕರ್ತರೇ. ಮೊದಲು ಕಾರ್ಯಕರ್ತರ ಗುರುತಿಸಬೇಕು. ಕಾಳಪ್ಪ , ಬೋಳಪ್ಪ, ಮಲ್ಲಪ್ಪ, ಸಿದ್ದಪ್ಪರಿಗೆ ಲೋಕಸಭೆ ಟಿಕೆಟ್ ಇಲ್ಲ. ಯಾರು ಏನು ಅಂತಾ ಮೊದಲು ಗೊತ್ತಾಗಬೇಕಲ್ಲವೇ? ಎಲ್ಲಿಂದಲೋ ಬಂದು, ನಿಂತುಕೊಂಡಲ್ಲ. ಕಾರ್ಯಕರ್ತರನ್ನು ಗುರುತಿಸಬೇಕು. ಜಿಲ್ಲಾ, ಬ್ಲಾಕ್ ಅಧ್ಯಕ್ಷರ ಕಂಡು ಭೇಟಿಯಾಗಬೇಕು ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರನ್ನು ಮೊದಲು ಗುರುತಿಸಿ, ಭೇಟಿ ಮಾಡಬೇಕು. ಪಕ್ಷದ ಪದಾಧಿಕಾರಿಗಳು, ಮುಖಂಡರ ಭೇಟಿ ಮಾಡಬೇಕು. ಹಾಗೆ ಮಾಡದೇ, ಎಲ್ಲೋ ಇದ್ದುಕೊಂಡು ಬಂದು, ಬಂದರೆ ಇಲ್ಲಿ ಏನೂ ನಡೆಯುವುದೂ ಇಲ್ಲ. ಪಕ್ಷದ ಹೈಕಮಾಂಡ್ ಯಾರಿಗೆ ಅವಕಾಶ ನೀಡುತ್ತದೋ, ಅಂತಹವರು ಚುನಾವಣೆಗೆ ನಿಲ್ಲಲಿ ಎಂದು ಶಾಸಕ ಶಿವಗಂಗಾ ವಿ.ಬಸವರಾಜ, ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಜಿ..ಬಿ.ವಿನಯಕುಮಾರ ಹೆಸರು ಪ್ರಸ್ತಾಪಿಸದೇ ಎಸ್ಸೆಸ್ ಮಲ್ಲಿಕಾರ್ಜುನ ಮಾತಿನ ಚಾಟಿ ಬೀಸಿದರು. ನ್ಯಾಯಕ್ಕೆ ಬೆಲೆ ಇದೆ, ನ್ಯಾಯಕ್ಕೆ ಬೆಲೆ ಉಂಟು...
ದಾವಣಗೆರೆ: ನ್ಯಾಯಕ್ಕೆ ಬೆಲೆ ಇದೆ, ನ್ಯಾಯಕ್ಕೆ ಬೆಲೆ ಉಂಟು ಆ ದೃಷ್ಟಿಕೋನದಲ್ಲಿ ನಾವು ಹೋಗುತ್ತಿದ್ದೇವೆ. ನ್ಯಾಯಾಲಯದಿಂದ ಲಿಖಿತ ಆದೇಶ ಕೈತಲುಪಿದ ನಂತರ ಯಾರು ಯಾರವು, ಎಲ್ಲೆಲ್ಲಿ ಏನೇನಿವೆ ಅಂತಾನೂ ಹೇಳುತ್ತೇನೆ. ಕಾದು ನೋಡಿ, ರಿಪೋರ್ಟ್ ಆದರೂ ನನ್ನ ಕೈಗೆ ಬರಲಿ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದ್ದಾರೆ.