ತಿಗಳಾರಿ ಲಿಪಿ ತಜ್ಞ ಡಾ.ಕೆಳದಿ ಗುಂಡಾ ಜೋಯಿಸ್ ನಿಧನ

KannadaprabhaNewsNetwork |  
Published : Jun 04, 2024, 12:31 AM IST
ಡಾ.ಗುಂಡಾ ಜೋಯಿಸ್ | Kannada Prabha

ಸಾರಾಂಶ

ಎಂ.ಎ. ಪದವೀಧರರಾಗಿದ್ದ ಡಾ.ಗುಂಡಾ ಜೋಯಿಸ್ ಮರೆಯಾಗುತ್ತಿರುವ ಕೆಳದಿ ಇತಿಹಾಸವನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಭಾರತ ಸರ್ಕಾರದ ಶಿಷ್ಯವೇತನ ಪಡೆದು ಕನ್ನಡದ ಮೋಡಿ ಲಿಪಿ ಮತ್ತು ತಿಗಳಾರಿ ಲಿಪಿ ಅಭ್ಯಾಸ ಮಾಡಿದ್ದ ಇವರು ಪುರಾತನ ಮೋಡಿಲಿಪಿ ಮತ್ತು ತಿಗಳಾರಿ ಲಿಪಿ ತಜ್ಞರಾಗಿ ಇತಿಹಾಸ ಕ್ಷೇತ್ರದಲ್ಲಿ ಅಪರೂಪದ ಸೇವೆ ಸಲ್ಲಿಸಿದ್ದರು.

ಕನ್ನಡಪ್ರಭ ವಾರ್ತೆ ಸಾಗರ

ಖ್ಯಾತ ಇತಿಹಾಸ ತಜ್ಞ ಡಾ.ಕೆಳದಿ ಗುಂಡಾ ಜೋಯಿಸ್ (೯೪) ವಯೋಸಹಜವಾಗಿ ಭಾನುವಾರ ಸಂಜೆ ನಿಧನರಾದರು. ಇವರಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಪಟ್ಟಣದ ಶ್ರೀಮಾರಿಕಾಂಬಾ ರುದ್ರಭೂಮಿಯಲ್ಲಿ ನಡೆಯಿತು.

ಎಂ.ಎ. ಪದವೀಧರರಾಗಿದ್ದ ಡಾ.ಗುಂಡಾ ಜೋಯಿಸ್ ಮರೆಯಾಗುತ್ತಿರುವ ಕೆಳದಿ ಇತಿಹಾಸವನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಭಾರತ ಸರ್ಕಾರದ ಶಿಷ್ಯವೇತನ ಪಡೆದು ಕನ್ನಡದ ಮೋಡಿ ಲಿಪಿ ಮತ್ತು ತಿಗಳಾರಿ ಲಿಪಿ ಅಭ್ಯಾಸ ಮಾಡಿದ್ದ ಇವರು ಪುರಾತನ ಮೋಡಿಲಿಪಿ ಮತ್ತು ತಿಗಳಾರಿ ಲಿಪಿ ತಜ್ಞರಾಗಿ ಇತಿಹಾಸ ಕ್ಷೇತ್ರದಲ್ಲಿ ಅಪರೂಪದ ಸೇವೆ ಸಲ್ಲಿಸಿದ್ದರು.

ಕೆಳದಿ ವಸ್ತು ಸಂಗ್ರಹಾಲಯ ಸಂರಕ್ಷಿಸಿ ಹಸ್ತಾಂತರ:

ಭಾರತ ಸರ್ಕಾರದ ಯೋಜನೆಯೊಂದರ ಮೇರೆಗೆ ಕೆಳದಿಯಲ್ಲಿ ಹಸ್ತಪ್ರತಿ ಸಂಪನ್ಮೂಲ ಕೇಂದ್ರ ಸ್ಥಾಪಿಸಿ ಅದರ ಸಂಚಾಲಕರಾಗಿ ಡಾ.ಕೆಳದಿ ಗುಂಡಾ ಜೋಯಿಸ್ ಅನೇಕ ವರ್ಷ ಕಾಲ ಕೆಲಸ ಮಾಡಿದ್ದರು. ಗ್ರಾಮೀಣ ಪ್ರದೇಶದಲ್ಲಿರುವ ಕೆಳದಿ ವಸ್ತು ಸಂಗ್ರಹಾಲಯವನ್ನು ಆಸಕ್ತಿಯಿಂದ ಸಂರಕ್ಷಿಸಿ, ಅಭಿವೃದ್ಧಿಪಡಿಸಿ ಅದನ್ನು ಸರ್ಕಾರ ಹಾಗೂ ಕುವೆಂಪು ವಿಶ್ವವಿದ್ಯಾಲಯಕ್ಕೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹಸ್ತಾಂತರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಬಿಎಂಶ್ರೀ ಪ್ರತಿಷ್ಠಾನ, ರಾಜ್ಯ ಪತ್ರಗಾರ, ಕುವೆಂಪು ವಿಶ್ವವಿದ್ಯಾಲಯದ ಸ್ಥಾಪಕ ಸದಸ್ಯರಾಗಿ ಕೆಲಸ ಮಾಡಿರುವ ಜೋಯಿಸರು ವಿಧಾನಸೌಧದಲ್ಲಿ ಹತ್ತು ವರ್ಷ ಕಾಲ ಉನ್ನತ ಅಧಿಕಾರಿಗಳಿಗೆ ಕನ್ನಡದ ಮೋಡಿಲಿಪಿ ಓದುವ ತರಬೇತಿ ನೀಡಿದ್ದರು. ಲಿಪಿಗಳ ಕುರಿತು ಅಪಾರ ಜ್ಞಾನ ಹೊಂದಿದ್ದ ಗುಂಡಾ ಜೋಯಿಸರನ್ನು ಜಪಾನ್ ಪುರಾತತ್ವ ಇಲಾಖೆ ಮತ್ತು ಅಮೆರಿಕ ತಮ್ಮ ಸಂಶೋಧನಾ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಿ ಗೌರವ ಸಲ್ಲಿಸಿದ್ದು ಸ್ಮರಣೀಯ ಸಂಗತಿ.

ಕೆಳದಿ ನೃಪವಿಜಯ ಗದ್ಯಾನುಸಾರ, ಕೆಳದಿ ವಸ್ತು ಸಂಗ್ರಹಾಲಯ ಮಾರ್ಗಸೂಚಿ, ವಿವಿಧ ಮಠಗಳ ಹಸ್ತಪ್ರತಿಸೂಚಿ ಸೇರಿ ೩೫ಕ್ಕೂ ಹೆಚ್ಚು ಸಂಶೋಧನಾ ಕೃತಿಗಳ ಇವರು ರಚಿಸಿದ್ದಾರೆ. ವಿಶ್ವವಿದ್ಯಾಲಯ, ನಿಯತಕಾಲಿಕ, ಅಭಿನಂದನಾ ಗ್ರಂಥ, ಪತ್ರಿಕೆಗಳಿಗೆ ೨೦೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಭಾರತ ಸರ್ಕಾರದ ಹಸ್ತಪ್ರತಿ ಅಭಿಲೇಖಾ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗ, ಕರ್ನಾಟಕ ಇತಿಹಾಸ ಅಕಾಡೆಮಿ ನಡೆಸಿದ ಪ್ರತಿಷ್ಠಿತ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಸಮರ್ಥವಾಗಿ ನಿಭಾಯಿಸಿದ್ದರು.

50ಕ್ಕೂ ಹೆಚ್ಚು ಪ್ರಶಸ್ತಿ, ಸನ್ಮಾನ:

ಇತಿಹಾಸ ಸಂಶೋಧನಾ ಕ್ಷೇತ್ರದಲ್ಲಿನ ಇವರ ಸಾಧನೆಗೆ ೫೦ಕ್ಕೂ ಹೆಚ್ಚು ಪ್ರಶಸ್ತಿ, ಸನ್ಮಾನಗಳು ಸಂದಿವೆ. ಪ್ರಮುಖವಾಗಿ ವಿಧಾನಸೌಧದಲ್ಲಿ ಕೊಡಲ್ಪಟ್ಟ ವಿಶ್ವ ಹಿರಿಯ ನಾಗರಿಕ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಪ್ರಶಸ್ತಿ ಪ್ರಮುಖವಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಗೋವಾ ಪರ್ತಗಾಳಿ ಮಠಾಧೀಶರು, ಬನಾರಸ್‌ ಕಾಶೀಪೀಠ ಇನ್ನಿತರರು ಸನ್ಮಾನಿಸಿದ್ದಾರೆ. ನೂರಾರು ವಿದ್ಯಾರ್ಥಿಗಳು ಅವರ ಜ್ಞಾನದ ಲಾಭ ಪಿ.ಎಚ್.ಡಿ. ಅಧ್ಯಯನ ಮೂಲಕ ಪಡೆದಿದ್ದಾರೆ.

ಡಾ. ಗುಂಡಾ ಜೋಯಿಸ್ ಸಾಧನೆ ಗುರುತಿಸಿ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಕೆಳದೀಶ ಎನ್ನುವ ಅಭಿನಂದನಾ ಗ್ರಂಥ ಸಮರ್ಪಣೆ ಮಾಡಲಾಗಿದ್ದು, ಸಾಗರ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಗೌರವಕ್ಕೂ ಜೋಯಿಸರು ಪಾತ್ರವಾಗಿದ್ದರು. ಗಣ್ಯರು, ಸಂಘಟನೆಗಳಿಂದ ಸಂತಾಪ

ಡಾ.ಕೆಳದಿ ಗುಂಡಾ ಜೋಯಿಸ್ ನಿಧನಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಎಚ್.ಹಾಲಪ್ಪ, ಕುಮಾರ ಬಂಗಾರಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಸಹೃದಯ ಬಳಗ, ತಾಲೂಕು ಇತಿಹಾಸ ವೇದಿಕೆ, ಕೆಳದಿ ವಸ್ತು ಸಂಗ್ರಹಾಲಯ, ಸಾಗರ ಶೃಂಗೇರಿ ಶಂಕರಮಠ ಇನ್ನಿತರೆ ಸಂಘಟನೆಗಳು ಸಂತಾಪ ಸೂಚಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡಿಗರ ಆಕ್ರೋಶ : ರೈಲ್ವೆ ಪರೀಕ್ಷೆ ಮುಂದಕ್ಕೆ
ಎತ್ತಿನಹೊಳೆ ಯೋಜನೆಗೆ ಅರಣ್ಯ ಪ್ರದೇಶ ಬಳಕೆ : ಕೇಂದ್ರ ಷರತ್ತಿನ ಅಸ್ತು