ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದ ಹುಲಿ ಮೀಸಲು ವ್ಯಾಪ್ತಿಯ ಲಕ್ಕವಳ್ಳಿ ವಲಯದ ಸಾವೇ ಅರಣ್ಯ ಪ್ರದೇಶದಲ್ಲಿ ಹುಲಿಯೊಂದು ಮೃತಪಟ್ಟಿದ್ದು. ಹುಲಿ ಕಳೇಬರ ಅಲ್ಲಿನ ಗಸ್ತು ಸಿಬ್ಬಂದಿಗೆ ಗುರುವಾರ ಬೆಳಿಗ್ಗೆ ಸಿಕ್ಕಿದೆ.
ಎನ್.ಆರ್. ಪುರ ಸರ್ಕಾರಿ ಪಶುವೈದ್ಯ ಶಿವಕುಮಾರ್ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದರು. ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನ ವೈದ್ಯರು ಸಹಕರಿಸಿದರು, ಹುಲಿ ದೇಹದ ಕೆಲವು ತುಣುಕು ಮತ್ತು ರಕ್ತ ಮಾದರಿ ಸಂಗ್ರಹಿಸಿ ಸಾವಿನ ನಿಖರ ಮಾಹಿತಿ ತಿಳಿಯಲು ಉನ್ನತ ಮಟ್ಟದ ಪ್ರಯೋಗಾಲಯಕ್ಕೆ ಕಳುಹಿಸಲು ತೀರ್ಮಾನಿಸಲಾಗಿದೆ.
ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮಗಳ ಪ್ರಕಾರ ಸೂಕ್ತ ಕ್ರಮಗಳನ್ನು ಅನುಸರಿಸಲಾಯಿತು. ಅನಂತರ ಹುಲಿಯ ಕಳೇಬರ ಸುಡಲಾಯಿತು.ಲಕ್ಕವಳ್ಳಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಸಾಗರ್, ವಲಯ ಅರಣ್ಯಾಧಿಕಾರಿ ಸಂತೋಷ್ ಸೂರಿಮಠ, ಗೌರವ ವನ್ಯಜೀವಿ ಪರಿಪಾಲಕ ವೀರೇಶ್, ವೈಲ್ಡ್ ಕೆರ್ ಸಂಸ್ಥೆಯ ಮುಖ್ಯಸ್ಥ ಮಧು ಮೂಗುತಿಹಳ್ಳಿ, ಶಿವಮೊಗ್ಗ ಜಿಲ್ಲಾ ಮಾಜಿ ವನ್ಯಜೀವಿ ಪರಿಪಾಲಕ ವಿನಾಯಕ ಇತರರು ಮರಣೋತ್ತರ ಪರೀಕ್ಷೆಯಲ್ಲಿ ಇದ್ದರು.