ಅಕ್ರಮ ವಿದ್ಯುತ್‌ ತಂತಿ ಸ್ಪರ್ಶಿಸಿ ಹುಲಿ ಮರಿ ಸಾವು

KannadaprabhaNewsNetwork |  
Published : Mar 18, 2026, 01:30 AM IST
ವಿದ್ಯುತ್ ಶಾಕ್‌ ಗೆ ಹೆಣ್ಣು ಹುಲಿ ಮರಿ ಬಲಿ | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಹುಲಿಗಳ ಸಾವಿನ ಸಂಖ್ಯೆಯು ಏರುತ್ತಲೇ ಇದ್ದು, ಈಗ ಸಾಲಿಗೆ ಮತ್ತೊಂದು ಹುಲಿ ಸೇರ್ಪಡೆಯಾಗಿದೆ. ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ತೋಟಕ್ಕೆ ಅಳವಡಿಸಿದ್ದ ಅಕ್ರಮ ವಿದ್ಯುತ್‌ ತಂತಿಗೆ ಎರಡೂವರೆ ವರ್ಷದ ಹುಲಿ ಮರಿಯೊಂದು ಅಸುನೀಗಿದೆ. ಅರಣ್ಯ ಇಲಾಖೆ ಗಸ್ತಿಗೆಂದು ಹಾರಿಸಿದ ಥರ್ಮಲ್‌ ಡ್ರೋನ್‌ನಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದೆ.

- ಬಾಳೆ ರಕ್ಷಣೆಗೆ ಅಳವಡಿಸಿದ್ದ ವಿದ್ಯುತ್‌ ಬೇಲಿ । ಪಡಗೂರು ಗ್ರಾಮದಲ್ಲಿ ನಡೆದ ಘಟನೆ । ಅಧಿಕಾರಿಗಳ ಭೇಟಿ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಜಿಲ್ಲೆಯಲ್ಲಿ ಹುಲಿಗಳ ಸಾವಿನ ಸಂಖ್ಯೆಯು ಏರುತ್ತಲೇ ಇದ್ದು, ಈಗ ಸಾಲಿಗೆ ಮತ್ತೊಂದು ಹುಲಿ ಸೇರ್ಪಡೆಯಾಗಿದೆ. ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ತೋಟಕ್ಕೆ ಅಳವಡಿಸಿದ್ದ ಅಕ್ರಮ ವಿದ್ಯುತ್‌ ತಂತಿಗೆ ಎರಡೂವರೆ ವರ್ಷದ ಹುಲಿ ಮರಿಯೊಂದು ಅಸುನೀಗಿದೆ. ಅರಣ್ಯ ಇಲಾಖೆ ಗಸ್ತಿಗೆಂದು ಹಾರಿಸಿದ ಥರ್ಮಲ್‌ ಡ್ರೋನ್‌ನಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದೆ.

ಗ್ರಾಮದ ಅಡವಿ ಮಠದ ಬಳಿಯ ರವಿಚಂದ್ರ ಎಂಬುವರಿಗೆ ಸೇರಿದ ಜಮೀನಿನಲ್ಲಿ ಹೆಣ್ಣು ಹುಲಿ ಮರಿಯ ದೇಹ ಪತ್ತೆಯಾಗಿದ್ದು, ಅದರ ವಯಸ್ಸು ಸುಮಾರು ಎರಡುವರೆ ವರ್ಷವಿರಬಹುದು ಎಂದು ಅಂದಾಜಿಸಲಾಗಿದೆ. ಥರ್ಮಲ್‌ ಡ್ರೋನ್‌ ಹಾರಾಟದ ವೇಳೆ ಹುಲಿಯ ದೇಹ ಪತ್ತೆಯಾಗಿದೆ.

ರವಿಚಂದ್ರಗೆ ಸೇರಿದ ಜಮೀನಿನನ್ನು ಗ್ರಾಮದ ಪರಮೇಶ್‌ ಎಂಬುವರು ಗುತ್ತಿಗೆಗೆ ಪಡೆದು ಬಾಳೆ ಬೆಳೆದಿದ್ದರು. ಬೆಳೆ ರಕ್ಷಣೆಗೆ ಅಕ್ರಮವಾಗಿ ವಿದ್ಯುತ್‌ ತಂತಿ ಅಳವಡಿಸಿದ್ದು, ಆ ತಂತಿಗೆ ತಾಗಿ ಹುಲಿ ಮರಿ ಪ್ರಾಣ ಬಿಟ್ಟಿದೆ.ಪತ್ತೆಯಾದ ಬಗೆ?

ಪಡಗೂರು ಗ್ರಾಮದ ಸುತ್ತ ಹುಲಿ ಹಾಗೂ ಚಿರತೆ ಉಪಟಳ ಹೆಚ್ಚಿದೆ. ಇತ್ತೀಚಗೆ ಪಡಗೂರು ಬಳಿ ಹುಲಿ ದಾಳಿಗೆ ಹಸು ಬಲಿಯಾಗಿದ್ದ ಹಿನ್ನಲೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್‌ ಜೋನ್‌ ವಲಯ ಅರಣ್ಯಾಧಿಕಾರಿ ಬೋನನ್ನು ಹುಲಿ ದಾಳಿ ಮಾಡಿದ್ದ ಜಮೀನಿನಲ್ಲಿ ಇರಿಸಿದ್ದರು.ಹುಲಿ ಉಪಟಳಕ್ಕೆ ಬ್ರೇಕ್‌ ಹಾಕಲು ಅರಣ್ಯ ಇಲಾಖೆ ಬೋನು ಇರಿಸಿರುವ ಜೊತೆಗೆ ಥರ್ಮಲ್‌ ಡ್ರೋನ್‌ ಹಾರಿಸುವ ಸಮಯದಲ್ಲಿ ರವಿಚಂದ್ರ ಅವರ ಜಮೀನಿನಲ್ಲಿ ಹುಲಿ ಬಿದ್ದಿದ್ದು ಪತ್ತೆಯಾಗಿದೆ ಎಂದು ಎಸಿಎಫ್‌ ಕೆ. ಸುರೇಶ್‌ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಅಧಿಕಾರಿಗಳ ದೌಡು:

ಹುಲಿ ಸತ್ತ ವಿಷಯ ಖಚಿತವಾದ ಬಳಿಕ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಎಸ್‌. ಪ್ರಭಾಕರನ್‌, ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ಸುರೇಶ್‌, ಗುಂಡ್ಲುಪೇಟೆ ಬಫರ್‌ ಜೋನ್‌ ವಲಯ ಅರಣ್ಯಾಧಿಕಾರಿ ಶಿವಕುಮಾರ್‌ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮುತ್ತುರಾಜ್‌, ಡಿವೈಎಸ್ಪಿ ಸ್ನೇಹರಾಜ್‌, ಬೇಗೂರು ಸರ್ಕಲ್‌ ಇನ್ಸ್‌ಪೆಕ್ಟರ್‌ ಮೋಹಿತ್‌ ಸಹದೇವ್‌ ಸ್ಥಳಕ್ಕೆ ಭೇಟಿ ನೀಡಿದರು.

ಗುಂಡ್ಲುಪೇಟೆ ಬಫರ್‌ ಜೋನ್‌ ವಲಯ ಅರಣ್ಯಾಧಿಕಾರಿ ಶಿವಕುಮಾರ್‌ ನೀಡಿದ ದೂರಿನ ಮೇರೆಗೆ ಪಡಗೂರು ಬಳಿಯ ಜಮೀನಿನ ಮಾಲೀಕ ರವಿಚಂದ್ರ ಹಾಗೂ ಗುತ್ತಿಗೆ ಪಡೆದಿದ್ದ ಪರಮೇಶ್‌ ವಿರುದ್ಧ ತೆರಕಣಾಂಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರೈತರ ಆಕ್ರೋಶ:

ಹುಲಿ ಸಾವಿನ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳ ವಿರುದ್ಧ ರೈತ ಸಂಘದ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಪ್ರಾಣಿಗಳ ಸಾವಿಗೆ ಅಧಿಕಾರಿಗಳೇ ಹೊಣೆ ಎಂದು ಧಿಕ್ಕಾರ ಕೂಗಿದ್ದಾರೆ. ಅರಣ್ಯಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.

ಹುಲಿ ಶವ ಪರೀಕ್ಷೆರೈತರ ಆಕ್ರೋಶ ಹೆಚ್ಚಾದ ಹಿನ್ನಲೆ ಸತ್ತ ಹುಲಿ ದೇಹದ ಮರಣೋತ್ತರ ಪರೀಕ್ಷೆಯನ್ನು ಬಂಡೀಪುರ ಸಫಾರಿ ಕೇಂದ್ರದ ಬಳಿಯ ಅರಣ್ಯ ಇಲಾಖೆ ಕೇಂದ್ರ ಕಚೇರಿ ಆವರಣದಲ್ಲಿ ಪಶು ವೈದ್ಯ ಡಾ. ವಾಸೀ ಮಿರ್ಜಾ, ಡಾ. ಆದರ್ಶ್ ನಡೆಸಿದರು.

ಈ ವೇಳೆ ಕ್ಷೇತ್ರ ನಿರ್ದೇಶಕ ಎಸ್. ಪ್ರಭಾಕರನ್‌, ಎಸಿಎಫ್‌ ಕೆ. ಸುರೇಶ್‌,ಆರ್‌ಎಫ್‌ಒ ಶಿವಕುಮಾರ್‌, ವನ್ಯಜೀವಿ ಪರಿಪಾಲಕ ನಂಜುಂಡ ರಾಜೇ ಅರಸ್‌, ಎನ್‌ಜಿಒ ಗೋಪಾಲ ನಾಯಕ, ಗ್ರಾಪಂ ಮಾಜಿ ಸದಸ್ಯ ಸಂತೋಷ್‌ ಸಮ್ಮುಖದಲ್ಲಿ ಶವ ಪರೀಕ್ಷೆಯ ಬಳಿಕ ಹೆಣ್ಣು ಹುಲಿ ಮರಿಯನ್ನು ಸುಡಲಾಯಿತು.---

ಜಿಲ್ಲೆಯಲ್ಲಿ ಹೆಚ್ಚಾದ ಹುಲಿಗಳ ಸಾವಿನ ಸಂಖ್ಯೆ !

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ 6 ಹುಲಿಗಳು ವಿಷ ಪ್ರಾಶಾನಕ್ಕೆ ಜೀವ ಕಳೆದುಕೊಂಡ ಘಟನೆ ಮಾಸುವ ಮುನ್ನವೇ ಬಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಗುಂಡಾಲ್‌ ಬಳಿ ಉರುಳಿಗೆ ಹುಲಿ ಬಲಿಯಾಗಿತ್ತು. ಈಗ ಮತ್ತೊಂದು ಹುಲಿ ಮೃತಪಟ್ಟಿದೆ.

---

೧೭ಜಿಪಿಟಿ೧

ಗುಂಡ್ಲುಪೇಟೆ ತಾಲೂಕಿನ ಪಡಗೂರು ಬಳಿ ಹುಲಿಯೊಂದು ವಿದ್ಯುತ್‌ ತಗುಲಿ ಸಾವನ್ನಪ್ಪಿದ್ದ ಸ್ಥಳಕ್ಕೆ ಸಿಎಫ್‌ ಎಸ್. ಪ್ರಭಾಕರನ್‌, ಎಸ್‌ಪಿ ಮುತ್ತುರಾಜ್‌ ಸ್ಥಳ ಪರಿಶೀಲನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸ ಮುಕ್ತ ಹೊಸಕೋಟೆ ನಿರ್ಮಾಣಕ್ಕೆ ಸಹಕರಿಸಿ
ಅಲ್ಪಸಂಖ್ಯಾತರು ವರ್ಸಸ್‌ ಸಮರ್ಥ: ಕಾಂಗ್ರೆಸ್‌ ಟಿಕೆಟ್‌ಗಾಗಿ ವಾಗ್ವಾದ