ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಹದೇಶ್ವರ ಮತ್ತು ಕಾವೇರಿ ವನ್ಯಧಾಮಗಳಲ್ಲಿ ಕಳೆದ 4 ತಿಂಗಳಲ್ಲಿ ಹುಲಿಗಳ ಸರಣಿ ಸಾವಿಗೆ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಹಾಗೂ ಸರ್ಕಾರದ ನಿರ್ಲಕ್ಷ್ಯ, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದೇ ಪ್ರಮುಖ ಕಾರಣ ಎಂಬ ಆರೋಪ ಕೇಳಿ ಬಂದಿದೆ.ಕಳೆದ ಜೂನ್ 26ರಲ್ಲಿ ಮಹದೇಶ್ವರ ವನ್ಯಧಾಮದಲ್ಲಿ ತಾಯಿ ಹುಲಿ ಹಾಗೂ 4 ಮರಿ ಹುಲಿಗಳು ಸಾವಿಗೀಡಾಗಿತ್ತು, ಇದಕ್ಕೆ
ಜಾನುವಾರುವೊಂದಕ್ಕೆ ಅದರ ಮಾಲೀಕರು ವಿಷಾಪ್ರಾಶನ ಮಾಡಿದ್ದು ಹುಲಿ ಸಾವಿಗೆ ಪ್ರಮುಖ ಕಾರಣ ಎಂಬುದನ್ನು ಹಚ್ಚಿ ಆರೋಪಿ ಬಂಧಿಸಲಾಗಿತ್ತು. ಆದರೆ ಅಂದು ಈ ವಿಚಾರದಲ್ಲಿ ಸರ್ಕಾರ ಹಾಗೂ ಸಚಿವ ಈಶ್ವರ ಖಂಡ್ರೆ ಅವರೇ ಖುದ್ದು ಪರಿಶೀಲಿಸಿ ಹುಲಿಗಳ ಸಾವಿಗೆ ಕಾಡು ಕಾಯುವ ಅರಣ್ಯ ಸಿಬ್ಬಂದಿಗಳಿಗೆ ಸಕಾಲದಲ್ಲಿ ವೇತನ ನೀಡದ್ದೆ ಹುಲಿಗಳ ಸಾವಿಗೆ ಪ್ರಮುಖ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ವಲಯ ಅರಣ್ಯಾಧಿಕಾರಿ ಮಾದೇಶ್, ಎಸಿಎಫ್ ಗಜಾನನ ಹೆಗ್ಗಡೆ ಅವರನ್ನು ತಕ್ಷಣ ಅಮಾನತುಗೊಳಿಸಿ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರ ನೇಮಿಸಿದ್ದ ಉನ್ನತ ತನಿಖಾ ತಂಡ ಕ್ರಮ ಕೈಗೊಂಡಿತ್ತು. ಬಳಿಕ ಕೆಲ ದಿನಗಳ ನಂತರ ಡಿಸಿಎಫ್ ಚಕ್ರಪಾಣಿ ಅವರನ್ನು ಅಮಾನತುಗೊಳಿಸಿತ್ತು, ಬಳಿಕ ಎಲ್ಲಾ ಅಧಿಕಾರಿಗಳಿಗೂ ದೋಷಾರೋಪಣ ಪಟ್ಟಿ ಜಾರಿಗೊಳಿಸಿ ಕ್ರಮ ಕೈಗೊಂಡ ಹಿರಿಯ ಅಧಿಕಾರಿಗಳು ಕೈತೊಳೆದುಕೊಂಡಿದ್ದರು. ಈ ಪ್ರಕರಣದಲ್ಲಿ 3 ಮಂದಿ ಅಧಿಕಾರಿಗಳ ತಲೆದಂಡವೇ ಮಾನದಂಡ, ಅರಣ್ಯ ಇಲಾಖೆ ಎಚ್ಚರಿಕೆಯ ದಂಡ ಎಂಬ ನಿಟ್ಟಿನಲ್ಲಿ ಮೇಲಾಧಿಕಾರಿಗಳು , ಸರ್ಕಾರ ಮತ್ತು ಸಚಿವರು ಸುಮ್ಮನಾದರು.ಆದರೆ ಈ ನಿಟ್ಟಿನಲ್ಲಿ ಹುಲಿಗಳ ಹತ್ಯೆಯಾಗದಂತೆ ಗಸ್ತು ಸಿಬ್ಬಂದಿಗಳ ನಿಯೋಜನೆ, ಆಗಿಂದಾಗ್ಗೆ ಹಿರಿಯ ಅಧಿಕಾರಿಗಳ ಭೇಟಿ, ಸಚಿವರ ಭೇಟಿ ಹೀಗೆ ಸರ್ಕಾರವೇ ಈನಿಟ್ಟಿನಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳುವಲ್ಲಿ ಎಡವಿತು, ಈ ಹಿನ್ನೆಲೆ ಪುನಃ ಹುಲಿ ಸಾವಿಗೆ ಕಾರಣವೂ ಆಗುತ್ತಿದೆ ಎಂಬ ಅಭಿಪ್ರಾಯ ಪ್ರಾಣಿಯ ಪ್ರಿಯರಲ್ಲಿ ವ್ಯಾಪಕವಾಗಿ ಕೇಳಿ ಬಂದಿದೆ .ಶಾಸಕರ ಕೂಗನ್ನೆ ಲೆಕ್ಕಿಸದ ಸರ್ಕಾರ:
ಐದು ಹುಲಿಗಳ ಸಾವಿನ ಪ್ರಕರಣದಲ್ಲಿ ಸರ್ಕಾರ ನೇಮಿಸಿರುವ ತನಿಖಾ ತಂಡದಲ್ಲಿನ ಅಧಿಕಾರಿಯೊಬ್ಬರು ಚಾಮರಾಜನಗರದಲ್ಲೆ ಕರ್ತವ್ಯ ನಿರ್ವಹಿಸುತ್ತಿದ್ದು ಅವರು ತಪ್ಪಿತಸ್ಥರಾಗಿದ್ದಾರೆ. ಅವರನ್ನೆ ತಂಡದಲ್ಲಿಟ್ಟುಕೊಂಡು ತನಿಖೆ ಮಾಡುವ ಕ್ರಮ ಸರಿಯಲ್ಲ ಎಂದು ಕೊಳ್ಳೇಗಾಲ ಶಾಸಕ ಎ. ಆರ್. ಕೃಷ್ಣಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸರ್ಕಾರ ಕೂಡಲೇ ಆ ಅಧಿಕಾರಿಯನ್ನು ತನಿಖಾ ತಂಡದಿಂದ ಬಿಟ್ಟು ಉನ್ನತ ತನಿಖಾ ತಂಡದಿಂದ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಆದರೆ ಮೇಲಾಧಿಕಾರಿಗಳು ಹಾಗೂ ಸಚಿವರು ಇವರ ಹೇಳಿಕೆಯನ್ನೆ ಗಣನೆಗೆ ತೆಗೆದುಕೊಳ್ಳದಿರುವುದೆ ದುರಂತ. ಅಲ್ಲದೆ ಶಾಸಕರು ಈ ಪ್ರಕರಣದಲ್ಲಿ ಕಾಡು ಕಾಯುವ ಸಿಬ್ಬಂದಿಗಳಿಗೆ ಸಂಬಳ ಪಾವತಿ ವಿಚಾರದಲ್ಲಿ ಒಬ್ಬ ಅಧಿಕಾರಿಯ ಲೋಪವಿದೆ, ಅವರೇ ತನಿಖಾ ಕಮೀಟಿಯಲ್ಲಿದ್ದಾರೆ ಎಂಬುದನ್ನ ಕುರಿತು ಸಾಕಷ್ಟು ಸಲ ಮಾಧ್ಯಮಗಳ ಮೂಲಕವೂ ಚರ್ಚಿಸಿದ್ದರು,ಆದರೂ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಇದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. 3 ಮಂದಿ ಅಧಿಕಾರಿಗಳ ಅಮಾನತ್ತಾದ ಬಳಿಕ ಶಾಸಕರು ಕೆಡಿಪಿ ಸಭೆಗಳಲ್ಲಿ ವಿಚಾರ ಪ್ರಸ್ತಾಪಿಸಿ, ಅಮಾನತುಗೊಂಡ 3 ಮಂದಿ ಎರಡು, ಮೂರು ತಿಂಗಳ ಹಿಂದೆಯಷ್ಟೆ ಬಂದವರು. ಉನ್ನತ ತನಿಖಾ ತಂಡ ಸರಿಯಾದ ರೀತಿ ವರದಿ ನೀಡಿಲ್ಲ, ಅಲ್ಲದೆ ತಪ್ಪಿತಸ್ಥ ಅಧಿಕಾರಿಯೊಬ್ಬರನ್ನಿಟ್ಟುಕೊಂಡೆ ತನಿಖೆ ನಡೆಸಿ ವಾಸ್ತವ ಮರೆಮಾಚಲಾಗುತ್ತಿದೆ ಎಂದಿದ್ದರು. 3 ಮಂದಿ ತಲೆದಂಡ ಬಳಿಕ ಸುಮ್ಮನಾದ ಮೇಲಾಧಿಕಾರಿಗಳು:
ಜೂನ್ 26ರ ಪ್ರಕರಣಲ್ಲಿ 3 ಮಂದಿ ಅಧಿಕಾರಿಗಳನ್ನು ತಲೆದಂಡ ಮಾಡಿದ ಬಳಿಕ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಮೇಲಾಧಿಕಾರಿಗಳ ತಂಡ ಮೈಮರೆಯಿತು. ಬಳಿಕ ಸಚಿವರು, ಹಿರಿಯ ಅಧಿಕಾರಿಗಳ ಭೇಟಿ, ಪರಿಶೀಲನೆ, ಮಾರ್ಗದರ್ಶನದಂತಹ ಅಗತ್ಯ ಮುಜಾಗ್ರತಾ ಕ್ರಮ ಅನುಸರಿಸಿದ್ದರೆ ಹುಲಿ ಸಾವು ತಡೆಯಬಹುದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.ಅಲ್ಲದೆ ಅರಣ್ಯ ಗುತ್ತಿಗೆ ಸಿಬ್ಬಂದಿಗಳಿಗೆ ವೇತನ ಪಾವತಿಸದ್ದೆ ಹುಲಿಗಳ ಸಾವಿಗೆ ಕಾರಣ ಎಂಬ ಅಭಿಪ್ರಾಯವನ್ನು ಹಿರಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದರು. ಪಚ್ಚೆದೊಡ್ಡಿ ಹುಲಿ ಸಾವಿನ ಪ್ರಕರಣದಲ್ಲಿ ಸಿಬ್ಬಂದಿಗಳಿಗೆ ವೇತನ ನೀಡಲಾಗುತ್ತಿದ್ದರೂ ಮೈಮರೆತಿದ್ಯಾಕೆ ಎಂಬ ಪ್ರಶ್ನೆ ಮೂಡಿದೆ. ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ಹುಲಿಯನ್ನು 3 ಭಾಗ ಮಾಡಿ ಕೊಂದು ಬೀಸಾಡಿ ನಿಷೇಧಿತ ಅರಣ್ಯ ಪ್ರದೇಶಕ್ಕೆ ಬೇಟೆಗಾರರು ರಾಜಾರೋಷವಾಗಿ ಪ್ರವೇಶಿಸಿ ಉದ್ದಟತನ ಮೆರೆದು ಹುಲಿ ಕೊಂದಿರುವುದು ಮೇಲ್ನೋಟಕ್ಕೆ ದೖಡಪಟ್ಟಿದೆ. ಈ ವೇಳೆ ಅರಣ್ಯ ಇಲಾಖೆಯ, ಅಧಿಕಾರಿ, ಸಿಬ್ಬಂದಿ ಯಾವ ರೀತಿ ಕಾಡು ಗಸ್ತು ಕಾಯುತ್ತಿದ್ದರು ಎಂಬ ಶಂಕೆಯೂ ವ್ಯಕ್ತವಾಗಿದೆ. ಈನಿಟ್ಟಿನಲ್ಲಿ ಮೇಲಾಧಿಕಾರಿಗಳು, ಸರ್ಕಾರ ಯಾವ ಕ್ರಮಕೈಗೊಳ್ಳಲಿದೆ ತನಿಖಾ ತಂಡ ಪಾರದರ್ಶಕ ವರದಿ ನೀಡುತ್ತ ಮುಂದಿನ ಬೆಳವಣಿಗೆ ಕಾದು ನೋಡಬೇಕಿದೆ.
ಜೂನ್ ತಿಂಗಳಲ್ಲಿ ನಡೆದ ಹುಲಿಗಳ ಸಾವಿನ ಪ್ರಕರಣದಲ್ಲಿ ಲೋಪ ಎಸಗಿದ ತಪ್ಪಿತಸ್ಥ ಅಧಿಕಾರಿಯೊಬ್ಬರನ್ನು ತನಿಖಾ ತಂಡದಲ್ಲಿ ನೇಮಕ ಮಾಡಿಕೊಂಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೆ. ಅಂದು ಸರ್ಕಾರ ಹಾಗೂ ಉನ್ನತ ಸಮಿತಿ ಶಿಫಾರಸ್ಸು ಮೂಲಕ ಕ್ರಮ ಕೈಗೊಂಡು 3 ಅಧಿಕಾರಿಗಳು ಮಹದೇಶ್ವರ ವನ್ಯಧಾಮಕ್ಕೆ ಬಂದು 2-3 ತಿಂಗಳಲಾಗಿತ್ತು. ಈಗ ಅರಣ್ಯ ಇಲಾಖೆ ಪಚ್ಚೆದೊಡ್ಡಿ ಹುಲಿ ಸಾವಿನ ಪ್ರಕರಣದಲ್ಲೂ 3 ತಿಂಗಳ ಹಿಂದೆಯಷ್ಠೆ ಬಂದಿರುವ ಅಧಿಕಾರಿಗಳನ್ನು ಮೇಲಾಧಿಕಾರಿ ಅಮಾನತು ಮಾಡುತ್ತಾರಾ?. ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನ ಕಾದು ನೋಡುವೆ.ಎ .ಆರ್. ಕೖಷ್ಣಮೂರ್ತಿ, ಶಾಸಕ, ಕೊಳ್ಳೇಗಾಲ