ಕನ್ನಡಪ್ರಭ ವಾರ್ತೆ ನಾಗಮಂಗಲ
ತೀವ್ರ ಕುತೂಹಲ ಮೂಡಿಸಿದ್ದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ 7 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 6 ಮಂದಿ ಅಭೂತ ಪೂರ್ವ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ, ಜೆಡಿಎಸ್‌ಗೆ ತೀವ್ರ ಮುಖಭಂಗವುಂಟು ಮಾಡಿದ್ದಾರೆ.ತೀವ್ರ ಪೈಪೋಟಿಯೊಂದಿಗೆ ನಡೆದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಬಿಂಡಿಗನವಿಲೆ ಕ್ಷೇತ್ರದಿಂದ ಎನ್.ಟಿ. ಕೃಷ್ಣಮೂರ್ತಿ (479), ಗೊಂಡೇನಹಳ್ಳಿ ಕ್ಷೇತ್ರದಿಂದ ಸಿ.ಜಿ.ಸುರೇಂದ್ರ (263), ಬೆಳ್ಳೂರು ಕ್ಷೇತ್ರದಿಂದ ಲಕ್ಷ್ಮಣಗೌಡ (345), ಮಾಯಿಗೋನಹಳ್ಳಿ ಕ್ಷೇತ್ರದಿಂದ ಸಿ.ಧನರಾಜ್ (346), ದೇವಲಾಪುರ ಕ್ಷೇತ್ರದಿಂದ ಎನ್.ಕೆ.ವಸಂತಮಣಿ (416) ಹಾಗೂ ಚಿಣ್ಯ ಕ್ಷೇತ್ರದಿಂದ ಅಲ್ಪಹಳ್ಳಿ ಡಿ.ಕೃಷ್ಣೇಗೌಡ (539) ಗೆಲುವು ಸಾಧಿಸುವ ಮೂಲಕ ಸಚಿವ ಎನ್.ಚಲುವರಾಯಸ್ವಾಮಿ ಅವರ ಅಸ್ವಿತ್ವವನ್ನು ಭದ್ರಗೊಳಿಸಿದ್ದಾರೆ.
ಒಂದು ಸ್ಥಾನದಲ್ಲಿ ಜೆಡಿಎಸ್ ಗೆಲುವು:ಜೆಡಿಎಸ್‌ನ ಮಾಜಿ ಶಾಸಕ ಸುರೇಶ್‌ಗೌಡರ ಬೆಂಬಲಿತ ಬ್ರಹ್ಮದೇವರಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎನ್.ಉಜ್ವಲ (492) ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಗೀತಾ ದಾಸೇಗೌಡ ವಿರುದ್ಧ ಗೆಲುವು ಸಾಧಿಸಿದರೆ, ಜೆಡಿಎಸ್ ಬೆಂಬಲಿತರಾಗಿ ಚುನಾವಣಾ ಅಖಾಡಕ್ಕಿಳಿದಿದ್ದ ಸಿ.ಕೆ.ಪ್ರದೀಪ್ (356), ಯಶೋಧಮ್ಮ (379), ಸಿ.ಮಂಜುನಾಥ (262), ಯೋಗೇಶ್(115), ಹರೀಶ್ (4), ಸಿದ್ದರಾಜು (203) ಹಾಗೂ ಬಿ.ವಿ.ಕೆಂಚೇಗೌಡ (113) ಮತ ಪಡೆದು ಪರಾಭವಗೊಂಡಿದ್ದಾರೆ.
ಐದು ಸ್ಥಾನಗಳಿಗೆ ಅವಿರೋಧ ಆಯ್ಕೆ:ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ನಾಗಮಂಗಲ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜೆ.ಆಶಾ ಸೇರಿದಂತೆ ‘ಎ’ ತರಗತಿಯಿಂದ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಆಯ್ಕೆಯಾಗಬೇಕಿದ್ದ ನಾಲ್ಕು ಸ್ಥಾನಗಳಿಗೆ ಕೆ.ವಿ.ದಿನೇಶ್, ಬಿ.ಎಂ.ಪ್ರಕಾಶ್, ಎ.ಕುಮಾರ್ ಮತ್ತು ಮರೀಗೌಡ ಅವಿರೋಧವಾಗಿ ಆಯ್ಕೆಯಾಗಿದ್ದರು.
ಬಿರುಸಿನ ಮತದಾನ:ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಬೆಳಗ್ಗೆ 8 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಮತದಾರರು ಮತಗಟ್ಟೆಗೆ ಬಂದು ಬಿರುಸಿನಿಂದ ಮತದಾನ ಮಾಡಿದರು. ಮಧ್ಯಾಹ್ನದ ವೇಳೆಗೆ ಬಹುತೇಕ ಷೇರುದಾರರು ತಮ್ಮ ಚಲಾಯಿಸಿದ್ದರು.
ಉಸ್ತುವಾರಿ ಸಚಿವರಿಂದ ಮತದಾನ:ಸರ್ಕಾರಿ ಪದವಿಪೂರ್ವ ಕಾಲೇಜಿನ ಬ್ರಹ್ಮದೇವರಹಳ್ಳಿ ಮತಗಟ್ಟೆ ಸಂಖ್ಯೆ 2ರಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮತದಾನ ಮಾಡಿದರು. ನಂತರ ಇದೇ ಮತಕೇಂದ್ರದಲ್ಲಿ ಸಚಿವರ ಪತ್ನಿ ಧನಲಕ್ಷ್ಮಿ, ಪುತ್ರ ಸಚ್ಚಿನ್ ಹಾಗೂ ಸೊಸೆ ಆಕಾಂಕ್ಷಾ ಮತ ಹಾಕಿದರು.
ಕೈ ಕಾರ್ಯಕರ್ತರ ವಿಜಯೋತ್ಸವ:ಮತ ಎಣಿಕೆಯಲ್ಲಿ ಕಾಂಗ್ರೆಸ್ ಬೆಂಬಲಿತ ಏಳು ಮಂದಿ ಅಭ್ಯರ್ಥಿಗಳ ಪೈಕಿ 6 ಮಂದಿ ಅಭ್ಯರ್ಥಿಗಳು ಎದುರಾಳಿಗಳಿಗಿಂತ ಮುಂದಿದ್ದಾರೆಂಬ ಮಾಹಿತಿ ಸಿಗುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಕೈ ಪಕ್ಷದ ಕಾರ್ಯಕರ್ತರು ಸಚಿವ ಚಲುವರಾಯಸ್ವಾಮಿ ಪರ ಜಯಘೋಷದೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು.
ಸಂಜೆ 6 ಗಂಟೆ ವೇಳೆಗೆ ಮತ ಎಣಿಕೆ ಕಾರ್ಯಪೂರ್ಣಗೊಂಡ ನಂತರ ತಹಸೀಲ್ದಾರ್ ಹಾಗೂ ಚುನಾವಣಾಧಿಕಾರಿ ಜಿ.ಆದರ್ಶ ಅವರು ಫಲಿತಾಂಶ ಪ್ರಕಟಿಸಿದರು. ಮತದಾನ ಮತ್ತು ಮತ ಎಣಿಕೆ ವೇಳೆ ಯಾವುದೇ ಸಣ್ಣ ಪುಟ್ಟ ಗೊಂದಲ ಸಮಸ್ಯೆ ಉಂಟಾಗದಂತೆ ಡಿವೈಎಸ್‌ಪಿ ಬಿ.ಚಲುವರಾಜು, ಸಿಪಿಐ ನಿರಂಜನ್ ಹಾಗೂ ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್, ಗ್ರಾಮಾಂತರ ಠಾಣೆ ಪಿಎಸ್‌ಐ ರಾಜೇಂದ್ರ, ಬಿಂಡಿಗನವಿಲೆ ಠಾಣೆಯ ಪಿಎಸ್‌ಐ ಮಾರುತಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ನಿಯೋಜಿಸಲಾಗಿತ್ತು.