ವಿರಾಜಪೇಟೆ ತಾಲೂಕಿನ ವಿವಿಧೆಡೆ ಹುಲಿ ಸಂಚಾರ ಪತ್ತೆ: ನಾಗರಿಕರಿಗೆ ಆತಂಕ

KannadaprabhaNewsNetwork | Published : Nov 13, 2024 12:09 AM

ಸಾರಾಂಶ

ಸಿದ್ದಾಪುರ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳ ಉಪಟಳದಿಂದ ಸಾರ್ವಜನಿಕರು ಕಂಗಾಲಾಗಿದ್ದು ವನ್ಯಜೀವಿಗಳ ಆಕ್ರಮಣದಿಂದ ಅದೆಷ್ಟೋ ಸಾವು ನೋವುಗಳು ಸಂಭವಿಸಿರುವುದಲ್ಲದೆ ಕೃಷಿಕರ ಬೆಳೆಗಳು ನಾಶವಾಗಿದ್ದು ಕೃಷಿಕರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ.

ಆರ್. ಸುಬ್ರಮಣಿ

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಸಿದ್ದಾಪುರ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳ ಉಪಟಳದಿಂದ ಸಾರ್ವಜನಿಕರು ಕಂಗಾಲಾಗಿದ್ದು ವನ್ಯಜೀವಿಗಳ ಆಕ್ರಮಣದಿಂದ ಅದೆಷ್ಟೋ ಸಾವು ನೋವುಗಳು ಸಂಭವಿಸಿರುವುದಲ್ಲದೆ ಕೃಷಿಕರ ಬೆಳೆಗಳು ನಾಶವಾಗಿದ್ದು ಕೃಷಿಕರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ.

ವಿರಾಜಪೇಟೆ, ಅಮ್ಮತ್ತಿ, ಸಿದ್ದಾಪುರದ ಹಲವು ಪ್ರದೇಶಗಳಲ್ಲಿ ಹುಲಿ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದ್ದು ಕಾರ್ಮಿಕರು ತೋಟಗಳಲ್ಲಿ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತಿದ್ದಾರೆ.

ಅಮ್ಮತ್ತಿ ಸಮೀಪದ ಆನಂದಪುರ, ಸಿದ್ದಾಪುರದ ಗುಹ್ಯ, ವಿರಾಜಪೇಟೆ ಸಮೀಪದ ಮಗ್ಗುಲ ಮುಂತಾದ ಕಡೆಗಳಲ್ಲಿ ಹುಲಿ ಸಂಚರಿಸುತಿರುವುದನ್ನು ಸಾರ್ವಜನಿಕರು ಕಂಡಿದ್ದಾರೆ.

ಶುಕ್ರವಾರ ರಾತ್ರಿ 7.45ರ ಸುಮಾರಿಗೆ ಅಮ್ಮತ್ತಿ ಕಡೆಯಿಂದ ಸಿದ್ದಾಪುರಕ್ಕೆ ಪಿಕಪ್‌ ವಾಹನ ಬರುತ್ತಿದ್ದಾಗ ಆನಂದಪುರದ ಮುಖ್ಯ ತಿರುವಿನಲ್ಲಿ ವಾಹನದ ಅತಿ ಹತ್ತಿರದಲ್ಲೆ ದೊಡ್ಡ ಗಾತ್ರದ ಹುಲಿ ರಸ್ತೆ ದಾಟಿ ಟಾಟಾ ಎಸ್ಟೇಟ್ ನ ಕಾಫಿ ತೋಟದತ್ತ ಸಾಗಿದೆ.

ವಾಹನದ ಸಮೀಪದಲ್ಲೆ ಹುಲಿಯನ್ನು ಕಂಡ ಚಾಲಕ ಭಯಭೀತನಾಗಿ ವಾಹನವನ್ನು ವೇಗವಾಗಿ ಚಾಲಿಸಿ ಸಮೀಪದ ಇಂಜಿಲಗೆರೆಯ ಆಟೋ ಚಾಲಕರಿಗೆ ಹುಲಿ ಸಂಚಾರದ ಮಾಹಿತಿ ನೀಡಿದ್ದಾರೆ. ಸಿದ್ದಾಪುರದ ಗುಹ್ಯ ಗ್ರಾಮದ ಗುಹ್ಯ ಅಗಸ್ತ್ಯೇಶ್ವರ ದೇವಸ್ಥಾನದ ಅರ್ಚಕರು ಬೆಳಗಿನ ಜಾವ 5.30 ರ ಸಮಯದಲ್ಲಿ ಪೂಜೆಗೆ ತೆರಳುವ ಸಮಯದಲ್ಲಿ ದೇವರಕಾಡು ತೋಟದಲ್ಲಿ ಹುಲಿಯನ್ನು ಕಂಡಿದ್ದಾರೆ.

ವಿರಾಜಪೇಟೆ ಸಮೀಪದ ಮಗ್ಗುಲದಲ್ಲಿ ಕೂಡ ಹುಲಿಯೊಂದು ಜನ ನಿಬಿಡ ಪ್ರದೇಶದಲ್ಲೆ ರಸ್ತೆ ದಾಟಿದ್ದು ಸಾರ್ವಜನಿಕರಲ್ಲಿ ಭಯ ಮೂಡಿದೆ. ಚಂಬೆಬೆಳ್ಳೂರು ಪೊದಕೋಟೆ ಗ್ರಾಮದಲ್ಲಿ ಕೂಡ ಹುಲಿ ಪ್ರತ್ಯಕ್ಷವಾಗಿದ್ದು ಅಲ್ಲಿನ ಮಂಡೆಪ೦ಡೆ ಜಾಲಿ ಗಣಪತಿ ಗದ್ದೆಯಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದೆ. ಕಳೆದ ಅ.10 ರಂದು ಇದೇ ಗ್ರಾಮದಲ್ಲಿ ಹಸು ಮತ್ತು ಕರುವನ್ನು ಹುಲಿ ಕೊಂದಿತ್ತು.

ಒಂದೇ ಹುಲಿ ಎಂಬ ಸಂಶಯ .

ಕಾಫೀ ತೋಟಗಳೇ ಹೆಚ್ಚಾಗಿರುವ ಈ ಭಾಗಗಳಲ್ಲಿ ಹಲವು ಕಡೆಗಳಲ್ಲಿ ಕಂಡು ಬಂದ ಹುಲಿ ಒಂದೇ ಆಗಿರಬಹುದು ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ. ಹುಲಿ ಆಹಾರ ಸಿಗದೆ ಒಂದೆಡೆಯಿಂದ ಮತ್ತೊಂದೆಡೆಗೆ ಆಹಾರ ಅರಸಿ ನಡೆಯುತ್ತಿರಬಹುದೆಂದು ಅಂದಾಜಿಸಲಾಗಿದೆ. ಹುಲಿ ಸಂಚಾರದಿಂದ ಹೆಚ್ಚಿನ ಜನ ಸಂಚಾರವಿರುವ ಈ ಭಾಗಗಳಲ್ಲಿ ಜನರು ಓಡಾಡಲು ಭಯ ಪಡುವಂತಾಗಿದೆ.

ಅರಣ್ಯ ಇಲಾಖೆ ಕಾರ್ಯಾಚರಣೆ:

ಅರಣ್ಯ ಇಲಾಖಾಧಿಕಾರಿಗಳು ಹುಲಿ ಪ್ರತ್ಯಕ್ಷವಾದ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದು ಹುಲಿ ಕಾಡಿಗೆ ಅಟ್ಟಲು ತಯಾರಿ ನಡೆಸುತಿದ್ದಾರೆ. ಇಲಾಖೆ ಐದು ತಂಡಗಳನ್ನು ರಚಿಸಿ ಹುಲಿ ಪತ್ತೆಗೆ ಕಾರ್ಯಾಚರಣೆ ನಡೆಸುತಿದ್ದರೂ ಇಲಾಖೆಗೆ ಈವರೆಗೂ ಯಶಸ್ಸು ದೊರಕಿಲ್ಲ.

.........................

ಇಲ್ಲಿನ ಕಾಫಿ ತೋಟಗಳಲ್ಲಿ ಕಾರ್ಮಿಕರು ಪ್ರತಿದಿನ ಕೆಲಸ ಮಾಡುತ್ತಾರೆ. ಮಕ್ಕಳನ್ನು ಶಾಲೆಗೆ ಬಿಡಲು, ಇನ್ನಿತರ ಕೆಲಸಕ್ಕೆ ಜನರು ಹೆಚ್ಚಾಗಿ ನಡೆದಾಡುವ ಪ್ರದೇಶಗಲೂ ಇವೆ. ಹುಲಿ ಸಂಚಾರದಿಂದ ಇಲ್ಲಿನ ಜನರು ಕೂಡ ಭಯದಲ್ಲೆ ಇದ್ದಾರೆ. ಕೆಲಸಗಾರರು ಕೆಲಸಕ್ಕೆ ಹೋಗಲು ಹಿಂದು ಮುಂದು ನೋಡುತ್ತಿದ್ದಾರೆ. ಯಾವುದೇ ಅನಾಹುತ ಸಂಭವಿಸುವ ಮುನ್ನ ಹುಲಿ ಹಿಡಿಯಬೇಕು.

-ನಝೀರ್‌, ವಾಹನ ಚಾಲಕ, ಅಮ್ಮತ್ತಿ.

.....................

ಹಲವು ಕಡೆಗಳಲ್ಲಿ ಸಾರ್ವಜನಿಕರು ಕಂಡಿದ್ದ ಹುಲಿ ಒಂದೇ ಇರಬಹುದು ಎಂದು ಅಂದಾಜಿಸಲಾಗಿದ್ದು ಈಗಾಗಲೇ ನಾವು ಐದು ತಂಡಗಳನ್ನು ರಚಿಸಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತಿದ್ದೆವೆ. ಪೊನ್ನಂಪೇಟೆ ಮತ್ತು ತಿತಿಮತಿಯಿಂದ ಕೂಡ ಕಾರ್ಯಾಚರಣೆಗೆ ಹೆಚ್ಚಿನ ಸಿಬ್ಬಂದಿ ಆಗಮಿಸಿದ್ದಾರೆ. ಹುಲಿ ಪತ್ತೆ ಹಚ್ಚಿ ಶೀಘ್ರ ಅರಣ್ಯಕ್ಕೆ ಅಟ್ಟಲಾಗುವುದು.

-ಶಿವರಾಮ್ ಕೆ.ವಿ., ವಲಯ ಅರಣ್ಯ ಅಧಿಕಾರಿ, ವಿರಾಜಪೇಟೆ.

Share this article