ನರಗುಂದ: ಕಳಸಾ -ಬಂಡೂರಿ ನಾಲಾ ಪ್ರದೇಶದಲ್ಲಿ ಹುಲಿಗಳು ಮತ್ತು ಪರಿಸರ ಬಗ್ಗೆ ಅಧ್ಯಯನ ಮಾಡಲು 5 ಜನ ಸಮಿತಿ ರಚನೆ ಮಾಡಿರುವ ಕುರಿತು ಪ್ರಧಾನಿ ಕಾರ್ಯಾಲಯ ರೈತ ಸೇನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರಿಗೆ ಮಾಹಿತಿ ನೀಡಿದೆ.ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸೊಬರದಮಠ, ಮಹದಾಯಿ ಹಾಗೂ ಕಳಸಾ- ಬಂಡೂರಿ ನಾಲಾ ಯೋಜನೆ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಡಿ. 16ರಂದು ಪತ್ರ ಬರೆದಿದ್ದೆ, ಅದಕ್ಕೆ ಪ್ರಧಾನಿಗಳ ಕಾರ್ಯಾಲಯ ಸ್ಪಂದಿಸಿದೆ. ಅವರು ನನಗೆ ಪತ್ರ ಬರೆದಿದ್ದಾರೆ. ಈ ಸಮಿತಿ ಆ ಪ್ರದೇಶವನ್ನು ವೀಕ್ಷಣೆ ಮಾಡಿ ಸರ್ಕಾರಕ್ಕೆ ವರದಿ ಕೊಡುತ್ತದೆ ಎಂದು ತಿಳಿಸಿದ್ದಾರೆ ಎಂದರು.ಕುಡಿಯುವ ನೀರಿನ ಯೋಜನೆಗೆ ಅನುಮತಿ ನೀಡಬೇಕೆಂದು ಈ ಸಮಿತಿ ಆಗಮಿಸಿದ ಸಂದರ್ಭದಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು. 2002ರಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಕುಡಿಯುವ ನೀರಿನ ಯೋಜನೆಗೆ ರಾಜ್ಯ ರಾಜ್ಯಗಳ ಮಧ್ಯೆ ಯಾವುದೇ ವಿವಾದ ಇದ್ದರೂ ಯೋಜನೆಗೆ ಅಡ್ಡಿ ಮಾಡಬಾರದೆಂದು ಕಾನೂನು ತಂದಿದ್ದಾರೆ. ಆದರೂ ಮಹದಾಯಿ ಹಾಗೂ ಕಳಸಾ- ಬಂಡೂರಿ ಯೋಜನೆಗೆ ಗೋವಾ ರಾಜ್ಯ ತಕರಾರು ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.ಪಟ್ಟಣದ ಕೃಷಿ ಇಲಾಖೆ ಮುಂದೆ ನೀರಾವರಿ ನಿಗಮದ ಜಾಗದಲ್ಲಿ ರೈತ ಭವನ ಹಾಗೂ ರೈತ ವೀರಗಲ್ಲು ಸ್ಥಾಪನೆ ಮಾಡಲು 2 ಎಕರೆ ಜಾಗ ಮಂಜೂರು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 24 ಗಂಟೆಯಲ್ಲಿ ಈ ಕಳಸಾ- ಬಂಡೂರಿ ಯೋಜನೆ ಜಾರಿ ಮಾಡುತ್ತೇನೆಂದು ಹೇಳಿದ್ದರು. ಏಕೆ ಈ ಯೋಜನೆ ಜಾರಿ ಮಾಡಲಿಲ್ಲವೆಂದು ಪ್ರಶ್ನೆ ಮಾಡಿದರು.ಕಳೆದ 9 ವರ್ಷದಿಂದ ನಾನು ಮಹದಾಯಿ ಹೋರಾಟ ಪ್ರಾರಂಭ ಮಾಡಿದಾಗಿನಿಂದ ನಮ್ಮ ಸುತ್ತಮುತ್ತ ನಡೆಯುವ ನೂರಾರು ಕೋಟಿಯ ಭ್ರಷ್ಟಾಚಾರದ ಕುರಿತು ತನಿಖೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ನೀಡಿದ್ದೇನೆ. ಮೇಲಾಗಿ ಕೋರ್ಟ್‌ನಲ್ಲಿ ಪ್ರಕರಣ ದಾಖಲು ಮಾಡಿದ್ದರಿಂದ ಕೆಲವು ಪುಂಡ ಗುತ್ತಿಗೆದಾರರು ನನ್ನನ್ನು ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಆದ್ದರಿಂದ ಸರ್ಕಾರ ನನಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿಕೊಂಡರು.
ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಎಸ್.ಬಿ. ಜೋಗಣ್ಣವರ, ಸಿ.ಎಸ್. ಪಾಟೀಲ, ಸುಭಾಸ ಗಿರಿಯಣ್ಣವರ, ಹನುಮಂತ ಸರನಾಯ್ಕರ, ಮಲ್ಲೇಶಪ್ಪ ಅಬ್ಬಿಗೇರಿ, ಶಂಕ್ರಪ್ಪ ಜಾಧವ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ಬಸವ್ವ ಪೂಜಾರ, ಚನ್ನಬಸವ್ವ ಆಯಿಟ್ಟಿ, ವಾಸು ಚವಾಣ, ವಿಜಯಕುಮಾರ ಹೂಗಾರ, ಯಲ್ಲಪ್ಪ ಚಲವಣ್ಣವರ ಉಪಸ್ಥಿತರಿದ್ದರು.