ಯಲ್ಲಾಪುರ: ತಾಲೂಕು ಒಕ್ಕಲುತನ ಮಾರಾಟ ಹುಟ್ಟುವಳಿ ಸಮಿತಿ (ಟಿಎಂಎಸ್) ಚುನಾವಣೆ ಸೆ. ೨೮ರಂದು ನಡೆಯಲಿದ್ದು, ಭಾರಿ ಪೈಪೋಟಿ ಏರ್ಪಟ್ಟಿದೆ.
ಒಟ್ಟೂ ೧೪ ನಿರ್ದೇಶಕರು ಆಯ್ಕೆ ಆಗಬೇಕಿದ್ದು, ೧೨ ಕ್ಷೇತ್ರಕ್ಕೆ ಮಾತ್ರ ಚುನಾವಣೆ ನಡೆಯಲಿದೆ. ಇಬ್ಬರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ತಾಲೂಕು ಸೌಹಾರ್ದ ಭಾರತೀ ಬಣದಿಂದ ೧೦ ಜನರು ಸ್ಪರ್ಧಿಸಿದ್ದರೆ ಸಹಕಾರ ಭಾರತೀ ಬಣದಿಂದ ೧೦ ಜನರು ತಮ್ಮ ೩ನೇ ಅವಧಿಗೆ ತೊಡೆತಟ್ಟಿ ನಿಂತಿದ್ದಾರೆ. ೨ ಬಣಗಳ ನಡುವೆ ಜಿದ್ದಾಜಿದ್ದಿ ತೀವ್ರವಾಗಿದೆ. ಇದರಿಂದ ಈ ಚುನಾವಣೆ ಟಿಎಂಎಸ್ ಇತಿಹಾಸದಲ್ಲೇ ಹೆಚ್ಚು ಕಾವು ಪಡೆದಿದೆ. ಅದರಲ್ಲೂ ಸೆ. ೨೮ರಂದು ನಡೆಯುವ ಚುನಾವಣೆಯ ಫಲಿತಾಂಶವನ್ನು ನ್ಯಾಯಾಲಯದ ಮುಂದಿನ ತೀರ್ಪು ಬರುವವರೆಗೂ ತಡೆಹಿಡಿದಿದೆ. ಇದರಿಂದ ಇನ್ನೂ ಗೊಂದಲ ಉಂಟಾಗಿದೆ.ಪ್ರಾಥಮಿಕ ಸೇವಾ ಸಹಕಾರಿ ಸಂಘದ ಪ್ರತಿನಿಧಿಗಳು ಆಯ್ಕೆಯಾಗುವ ವ್ಯವಸ್ಥೆ ಈ ಮೊದಲು ಇತ್ತು. ಆದರೆ ೧೯೯೮ರಲ್ಲಿ ಅಂದಿನ ಆಡಳಿತ ಮಂಡಳಿ ಬೈಲಾ ತಿದ್ದುಪಡಿ ಮಾಡಿ, ಡೆಪ್ಯುಟಿ ರಿಜಿಸ್ಟರ್ ಮೂಲಕ ಆದೇಶ ಪಡೆಯಿತು. ೨೭ ವರ್ಷಗಳಿಂದ ಈಗಿರುವಂತೆ ಚುನಾವಣೆಯನ್ನು ನಡೆಸುತ್ತ ಬರಲಾಗಿತ್ತು. ಆದರೆ ಇಡಗುಂದಿ, ದೇಹಳ್ಳಿ, ಕಿರವತ್ತಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ನ್ಯಾಯಾಲಯದ ಮೆಟ್ಟಿಲೇರಿದರು. ರಾಜ್ಯದಲ್ಲಿರುವ ಬಹುತೇಕ ಟಿಎಂಎಸ್ ಚುನಾವಣೆ ಇರುವಂತೆ ಯಲ್ಲಾಪುರದಲ್ಲೂ ಇರಬೇಕು ಎಂದು ಹೋರಾಟ ನಡೆಸಿದರು. ಮೊದಲು ರಾಜ್ಯ ಸಹಕಾರಿ ಸಚಿವರು, ಕಾರ್ಯದರ್ಶಿಗಳ ಬಳಿ ದೂರು ನೀಡಿದರು. ಈ ವರೆಗೆ ಇದ್ದ ಬೈಲಾ ರದ್ದು ಮಾಡುವಂತೆ ವಿನಂತಿಸಿದ್ದರು. ಅದರಂತೆ ಬೆಳಗಾವಿ ಉಪನಿಬಂಧಕರು ಹೊರಡಿಸಿದ ೧೯೯೮ ಡಿ. ೪ರ ಹೊರಡಿಸಿದ್ದ ಆದೇಶವನ್ನು ರಾಜ್ಯ ಸಹಕಾರಿ ಕಾರ್ಯದರ್ಶಿ ಎಸ್.ಬಿ. ಶೆಟ್ಟಣ್ಣನವರ್ ಅವರು ೧೮-೦೯-೨೦೨೫ರಂದು ರದ್ದುಪಡಿಸಿದರು.
ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ಅ. ೧೩ರಂದು ವಿಚಾರಣೆ ನಡೆಯಲಿದೆ. ಎರಡೂ ಬಣಗಳ ಬೇಡಿಕೆಯಂತೆ ಚುನಾವಣೆ ನಡೆದು, ಫಲಿತಾಂಶವನ್ನು ನ್ಯಾಯಾಲಯದ ಮುಂದಿನ ಆದೇಶ ಬರುವರೆಗೂ ತಡೆಹಿಡಿದಿದೆ. ಅಲ್ಲಿಯವರೆಗೆ ಮತಪೆಟ್ಟಿಗೆಯನ್ನು ಉಪಖಜಾನೆಯಲ್ಲಿ ಇರಿಸಬೇಕೆಂದು ನಿರ್ದೇಶನ ನೀಡಲಾಗಿದೆ. ಹೀಗಾಗಿ ಚುನಾವಣೆ ಫಲಿತಾಂಶ ಯಾವಾಗ ಪ್ರಕಟವಾಗಬಹುದು ಎಂಬುದು ತಿಳಿದಿಲ್ಲ. ಅ. ೨೧ಕ್ಕೆ ಈಗಿರುವ ಆಡಳಿತ ಮಂಡಳಿ ಅವಧಿ ಮುಗಿಯಲಿರುವುದರಿಂದ ಅದರೊಳಗೆ ನ್ಯಾಯಾಲಯ ತೀರ್ಪು ನೀಡದಿದ್ದರೆ ಸಹಕಾರಿ ಇಲಾಖೆ ಆಡಳಿತಾಧಿಕಾರಿಗಳನ್ನು ನೇಮಿಸಿದರೂ ಅಚ್ಚರಿಯಿಲ್ಲ. ಅಂತೂ ಟಿಎಂಎಸ್‌ನ ರಾಜಕೀಯ ತಾಲೂಕಿನ ಜನರಲ್ಲಿ ತೀವ್ರ ಕುತೂಹಲ ಮೂಡಿಸಿದೆ.