ಮೀಸಲು ಅರಣ್ಯದಲ್ಲಿ ತೇಗ ಸೇರಿದಂತೆ ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸುತ್ತಿದ್ದ ಮರಗಳ್ಳರ ತಂಡವನ್ನು ಪತ್ತೆಹಚ್ಚುವಲ್ಲಿ ವಲಯ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಮೀಸಲು ಅರಣ್ಯದಲ್ಲಿ ತೇಗ ಸೇರಿದಂತೆ ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸುತ್ತಿದ್ದ ಮರಗಳ್ಳರ ತಂಡವನ್ನು ಪತ್ತೆಹಚ್ಚುವಲ್ಲಿ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.ಸೋಮವಾರಪೇಟೆ ವಲಯದ ಹುದುಗೂರು ಶಾಖಾ ವ್ಯಾಪ್ತಿಯ ಐಗೂರು ಗ್ರಾಮದ ಕಾಜೂರು ಅರಣ್ಯ ಪ್ರದೇಶದಲ್ಲಿ ತೇಗದ ಮರಗಳನ್ನು ಕಡಿದು ನಾಟಗಳಾನ್ನಾಗಿ ಪರಿವರ್ತಿಸಿ ಸಾ ಮಿಲ್‌ಗೆ ಸಾಗಿಸಲು ಬೊಲೆರೋ ಪಿಕಪ್ ವಾಹನಕ್ಕೆ ತುಂಬಿಸುತ್ತಿದ್ದ ಸಂದರ್ಭ ಅರಣ್ಯ ಅಧಿಕಾರಿಗಳು ಈಚಗೆ ದಾಳಿ ನಡೆಸಿದ್ದಾರೆ.ಆರೋಪಿಗಳು ಅರಣ್ಯ ಸಿಬ್ಬಂದಿಗಳ ಮೇಲೆ ದಾಳಿಗೆ ಪ್ರಯತ್ನಿಸಿದ ಸಂದರ್ಭ, ಆತ್ಮರಕ್ಷಣೆಗಾಗಿ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಎಡವಾರೆ ಗ್ರಾಮದ ಬಿ.ಜೆ.ಸಂತೋಷ್ ಎಂಬ ಆರೋಪಿಯನ್ನು ಸ್ಥಳದಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ಎಡವಾರೆ ಗ್ರಾಮದ ಬಿ.ಆರ್.ಅಶ್ವಥ್, ಬಿ.ವಿ.ನಿತೀನ್, ಕೊಡ್ಲಿಪೇಟೆ ಅರಕನಹಳ್ಳಿಯ ಸಯ್ಯದ್ ಜಹೀರ್, ಕುಶಾಲನಗರ ರಸಲ್‌ಪುರದ ವಿ.ಎಂ.ಷರೀಪ್, ಐಗುರು ಗ್ರಾಮದ ಅಕ್ಷಯ್ ನಾಪತ್ತೆಯಾಗಿದ್ದಾರೆ. ವಾಹನ ಸಮೇತ ತೇಗದ ನಾಟಗಳನ್ನು ವಶಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಆರ್‌ಎಫ್‌ಒ ಶೈಲೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಬಂಧಿತ ಆರೋಪಿಗೆ ನ್ಯಾಯಾಲಯದಿಂದ ಜಾಮೀನು ದೊರೆತಿದೆ.ಬುಧವಾರ ಘಟನಾ ಸ್ಥಳಕ್ಕೆ ಸಿಸಿಎಫ್ ಸೋನಾಲ್, ಡಿಎಫ್‌ಒ ಅಭಿಷೇಕ್, ಎಸಿಎಫ್ ಎ.ಎ.ಗೋಪಾಲ್, ಅರಣ್ಯ ಸಂಚಾರಿ ದಳದ ಎಸಿಎಫ್ ಗಾನಶ್ರೀ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಶೈಲೇಂದ್ರ ಕುಮಾರ್, ಡಿಆರ್‌ಎಫ್‌ಓ ಚಂದ್ರೇಶ್, ಸಿಬ್ಬಂದಿ ಚಂದ್ರಶೇಖರ್, ರವಿ ಕುಮಾರ್, ಅಂತೋಣಿ, ದಿವಾಕರ್, ಸಚಿನ್, ಅಯ್ಯಪ್ಪ, ಜೀವನ್, ಪ್ರಜ್ವಲ್, ಆನೆ ಕಾರ್ಯಪಡೆಯ ಸಿಬ್ಬಂದಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.