ಕನ್ನಡಪ್ರಭವಾರ್ತೆ ನಾಗಮಂಗಲ
ತಾಲೂಕಿನ ಚಿಣ್ಯ ಸರ್ಕಲ್ ಸಮೀಪದ ಭೂಸಮುದ್ರ ಗೇಟ್ ಬಳಿ ವಿಬ್‌ಗಯಾರ್ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಬೆಂಕಿ ನಂದಿಸುವ ಕುರಿತು ಮಕ್ಕಳಿಗೆ ಪ್ರಾತ್ಯಕ್ಷಿತೆ ನೀಡಿ ಮಾತನಾಡಿ, ಮುನ್ನೆಚ್ಚರಿಕೆ ವಹಿಸಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ ಬೆಂಕಿ ಅನಾಹುತ ತಪ್ಪಿಸಬಹುದು ಎಂದರು.
ಮನೆಗಳಲ್ಲಿ ಗೃಹಿಣಿಯರು ಅಡುಗೆ ಸಿಲಿಂಡರ್ ಬಳಸುವಾಗ ವಿಶೇಷ ಕಾಳಜಿ ವಹಿಸಬೇಕು. ಅನಿಲ ಸೋರಿಕೆಯಾಗುವುದು ಕಂಡು ಬಂದ ತಕ್ಷಣ ಗಾಬರಿಯಾಗದೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ ಅವಘಡವನ್ನು ತಪ್ಪಿಸಬಹುದು ಎಂದರು.ಬೇಸಿಗೆ ಸಮಯದಲ್ಲಿ ರೈತರು ತಮ್ಮ ಜಮೀನು ತೋಟಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಸುಡಲು ಬೆಂಕಿ ಹಚ್ಚುವ ವೇಳೆ ಮುಂಜಾಗ್ರತಾ ಕ್ರಮ ವಹಿಸಬೇಕು. ಶಾಲಾ ಮಕ್ಕಳು ಬೆಂಕಿ ಮತ್ತು ಹರಿಯುವ ನೀರಿನಲ್ಲಿ ಆಟವಾಡಬಾರದು. ಸುರಕ್ಷಾ ಕವಚ ಧರಿಸಿ ಈಜು ಕಲಿಯಬೇಕು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಇನ್ನಿತರೆ ಅಗ್ನಿ ಅವಘಡಗಳು ಸಂಭವಿಸಿದ ಕೂಡಲೇ ತುರ್ತು ಸಹಾಯವಾಣಿ ಸಂಖ್ಯೆ 101 ಅಥವಾ 112ಕ್ಕೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರೆ ತಕ್ಷಣ ಕಾರ್ಯ ಪ್ರವೃತ್ತರಾಗಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಲಾಗುವುದು. ಈ ಕುರಿತು ಶಾಲಾ ಮಕ್ಕಳು ಪೋಷಕರು ಹಾಗೂ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ಮನೆಯಲ್ಲಿ ಗೃಹಿಣಿಯರು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಕೆಯಲ್ಲಿ ಅನಾಹುತ ಉಂಟಾಗದಂತೆ ನಿರ್ವಹಿಸಬೇಕಾದ ಜವಾಬ್ದಾರಿಗಳ ಕುರಿತು ಅಗ್ನಿಶಾಮಕಠಾಣೆಯ ಅಧಿಕಾರಿ ಚಂದ್ರಶೇಖರ್ ಮಾಹಿತಿ ನೀಡಿದರು. ಬಳಿಕ ಶಾಲಾ ಆವರಣದಲ್ಲಿ ಬೆಂಕಿ ನಂದಿಸುವ ಕುರಿತು ಮಕ್ಕಳಿಗೆ ಪ್ರಾತ್ಯಕ್ಷಿತೆ ಮೂಲಕ ತೋರಿಸಿ ಕೊಡಲಾಯಿತು. ಕಾರ್ಯಕ್ರಮದ ನಂತರ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಗೌರವಿಸಲಾಯಿತು. ಶಾಲೆ ಮುಖ್ಯ ಶಿಕ್ಷಕ ಅಭಿಲಾಷ್ ಸೇರಿದಂತೆ ಶಿಕ್ಷಕ ವರ್ಗ ಹಾಗೂ ಎಲ್ಲಾ ವಿದ್ಯಾರ್ಥಿಗಳು ಇದ್ದರು.