ನೀರಾವರಿ ಪರಿಕರ ಪಡೆಯುವ ಕಾಲಮಿತಿ 7ರಿಂದ 5 ವರ್ಷಕ್ಕೆ ಇಳಿಕೆ: ಕೃಷಿ ಸಚಿವ

KannadaprabhaNewsNetwork |  
Published : Jun 28, 2024, 02:17 AM ISTUpdated : Jun 28, 2024, 11:59 AM IST
27ಡಿಡಬ್ಲೂಡಿ7ತಾಲೂಕಿನ ಹೆಬ್ಬಳ್ಳಿಯಲ್ಲಿ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ರೈತರಿಗೆ ಕೀಟ ನಾಶಕ ವಿತರಣೆ ಮಾಡಿದರು. | Kannada Prabha

ಸಾರಾಂಶ

ಈ ಮೊದಲು ಒಮ್ಮೆ ನೀರಾವರಿ ಪರಿಕರ ಸವಲತ್ತು ಪಡೆದರೆ ಮತ್ತೊಮ್ಮೆ ಇದೇ ಸೌಲಭ್ಯ ಪಡೆಯಲು ಏಳು ವರ್ಷ ಕಾಯಬೇಕಿತ್ತು. ಇನ್ಮುಂದೆ ಅದನ್ನು ಐದು ವರ್ಷಗಳಿಗೆ ಇಳಿಕೆ ಮಾಡಲಾಗುತ್ತಿದೆ.

ಧಾರವಾಡ:  ರಾಜ್ಯಾದ್ಯಂತ ರೈತರ ಬೇಡಿಕೆ ಹಿನ್ನಲೆಯಲ್ಲಿ ಕೆಲವು ಕೃಷಿ ಸೂಕ್ಷ್ಮ ನೀರಾವರಿ ಪರಿಕರಗಳ ಸವಲತ್ತು ಪಡೆಯಲು ಇರುವ ಕಾಲಮಿತಿಯನ್ನು ಏಳು ವರ್ಷಗಳಿಂದ ಐದು ವರ್ಷಗಳಿಗೆ ಇಳಿಸಲು ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹೆಬ್ಬಳ್ಳಿ ಗ್ರಾಮದಲ್ಲಿ ಗುರುವಾರ ವಿವಿಧ ಕೃಷಿ ಪ್ರಾತ್ಯಕ್ಷಿಕೆ ಉದ್ಘಾಟಿಸಿ, ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿದ ಅವರು, ಈ ಮೊದಲು ಒಮ್ಮೆ ನೀರಾವರಿ ಪರಿಕರ ಸವಲತ್ತು ಪಡೆದರೆ ಮತ್ತೊಮ್ಮೆ ಇದೇ ಸೌಲಭ್ಯ ಪಡೆಯಲು ಏಳು ವರ್ಷ ಕಾಯಬೇಕಿತ್ತು. ಇನ್ಮುಂದೆ ಅದನ್ನು ಐದು ವರ್ಷಗಳಿಗೆ ಇಳಿಕೆ ಮಾಡಲಾಗುತ್ತಿದ್ದು, ಇದರಿಂದ ರೈತರಿಗೆ ಅನುಕೂಲ ಆಗಲಿದೆ ಎಂದರು. ಕಳೆದ ಸಾಲಿನಲ್ಲಿ ಸುಮಾರು ₹ 1000 ಕೋಟಿ ವೆಚ್ಚದಲ್ಲಿ ಕೃಷಿ ಪರಿಕರಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಿಂದೆಂದಿಗಿಂತ ರಾಜ್ಯ ಕಾಂಗ್ರೆಸ್‌ ಸರ್ಕಾರ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದೆ. ಕೃಷಿಗೆ ಸಂಬಂಧಿತ ಇಲಾಖೆಗಳಲ್ಲಿ ಕಾರ್ಯಗತಗೊಳ್ಳುತ್ತಿರುವ ವಿವಿಧ ಯೋಜನೆಗಳನ್ನು ಕ್ರೋಡೀಕರಿಸಿ ಸಮಗ್ರ ಕೃಷಿ ಉತ್ತೇಜನಕ್ಕೆ ಪ್ರೋತ್ಸಾಹಿಸಲು ಕರ್ನಾಟಕ ರೈತ ಸಮೃದ್ಧಿ ಯೋಜನೆ ಘೋಷಿಸಿ ₹ 10 ಕೋಟಿ ಅನುದಾನ ತೆಗೆದಿರಿಸಲಾಗಿದೆ. ಕೃಷಿಯಲ್ಲಿ ಡಿಜಿಟಲ್‌ ಪದ್ಧತಿ ಬಳಸಿ ರೈತ ಆದಾಯ ಮತ್ತು ಉತ್ಪನ್ನಗಳನ್ನು ಹೆಚ್ಚಿಸುವ ಹಾಗೂ ಬೆಳೆ ಉತ್ಪಾದನಾ ತಂತ್ರಜ್ಞಾನ ಮಟ್ಟದ ಸಲಹೆಗಳನ್ನು ಪ್ರತಿ ರೈತರಿಗೆ ಒದಗಿಸಲು ಸರ್ಕಾರವು ರಾಜ್ಯದ 14 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ವಿಸ್ತಾರ ಎಂಬ ಕಾರ್ಯಕ್ರಮ ಕೃಷಿ ಇಲಾಖೆ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ. ಕಳೆದ ಮುಂಗಾರು ಹಂಗಾಮಿಗೆ ₹ 1700 ಕೋಟಿ ಬೆಳೆ ವಿಮೆ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೂ ಮುಂಚೆ ಹೆಬ್ಬಳ್ಳಿ ಗ್ರಾಮದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ ರೈತ ಯಲ್ಲಪ್ಪ ಈಶ್ವರಪ್ಫ ಸಾಲಿ ಅವರ ಕೃಷಿ ತಾಕುಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿದರು. ಸಿದ್ದಪ್ಪ ಬಸಪ್ಪ ಬಿಕ್ಕೋಜಿ ಅವರ ಜಮೀನಿನಲ್ಲಿ ಡ್ರೋಣ್‌ ಮೂಲಕ ನ್ಯಾನೋ‌ ಯೂರಿಯ ಸಿಂಪರಣೆ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದರು. ಇದೇ ಗ್ರಾಮದಲ್ಲಿ ಸಚಿವರು ಆಹಾರ ಮತ್ತು ಪೌಷ್ಠಿಕ ಭದ್ರತಾ ಯಾಜನೆಯಡಿ ರೈತರಿಗೆ ರಾಸಾಯನಿಕ, ರಸಗೊಬ್ಬರ ಕೀಟ ನಾಶಕ ವಿತರಣೆ ಮಾಡಿದರು. ತದ ನಂತರ ಹೈಟೆಕ್ ಹಾರ್ವೆಸ್ಟ್‌ ಹಬ್ ಯೋಜನೆಯಡಿ ಸಂಗಪ್ಪ ಕಲ್ಲಪ್ಪ ಹಲಿಯಾಳ ಅವರಿಗೆ ಬಹುಬೆಳೆ ಹೈಟೆಕ್ ಕಟಾವು ಯಂತ್ರವನ್ನು ಸಹ ವಿತರಿಸಿದರು.

PREV

Recommended Stories

ಭವಿಷ್ಯದ ದೃಷ್ಟಿಯಿಂದ ಬೆಂಗ್ಳೂರು ಸಜ್ಜುಗೊಳಿಸಿ: ಮೋದಿ
ಕಾಯುವಿಕೆ ಅಂತ್ಯ । 19 ಕಿ.ಮೀ. ಎಲೆಕ್ಟ್ರಾನಿಕ್ ಸಿಟಿಗೆ ಹಳದಿ ಮಾರ್ಗ ಮೆಟ್ರೋ - 25 ನಿಮಿಷಕ್ಕೆ 1 ರೈಲು