ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಜಿಲ್ಲೆ ನ್ಯಾಮತಿ ತಾ. ಸೂರಗೊಂಡನಕೊಪ್ಪದಲ್ಲಿ ಶನಿವಾರ ದೆಹಲಿ ಪ್ರವಾಸ ಸಕ್ಸಸ್ಸಾ ಸರ್ ಎಂಬ ಮಾಧ್ಯಮಗಳ ಪ್ರಶ್ನೆಗೆ ಅಷ್ಟೇ ಸಮಾಧಾನದಿಂದ, ಹುಬ್ಬೇರಿಸುತ್ತ ಮಂದಸ್ಮಿತರಾಗಿ ಕಾಲ.. ಕಾಲ.. ಉತ್ತರ ಕೊಡುತ್ತದೆ ಎಂದಷ್ಟೇ ಡಿಕೆಶಿ ಪ್ರತಿಕ್ರಿಯಿಸುತ್ತ ದಿಲ್ಲಿ ಪ್ರವಾಸದಿಂದ ಬಂದ ಬಳಿಕ ತಮ್ಮ ಮೊಗದಲ್ಲಿ ಮೂಡಿರುವ ಖುಷಿಯನ್ನು ಹೊತ್ತೇ ಕಾರನ್ನೇರಿದರು.
ಸೂರಗೊಂಡನಕೊಪ್ಪದಲ್ಲಿ ಕೆಲವರಿಂದ ಕಪ್ಪುಬಟ್ಟೆ ಪ್ರದರ್ಶನದ ಬಗ್ಗೆ ಕಿಡಿಕಾರಿದ ಡಿ.ಕೆ.ಶಿವಕುಮಾರ್, ಇದು ರಾಜಕೀಯ ಸಭೆಯಲ್ಲ, ಕಾಂಗ್ರೆಸ್ ಪಕ್ಷದ ಸಭೆಯೂ ಅಲ್ಲ. ಎಲ್ಲಾ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ನ್ಯಾಯ ಕೊಡಿಸಿದೆ. ಪರಿಶಿಷ್ಟ ಜಾತಿಗಳಿಗೆ 6, 6, 5ರಷ್ಟು ಮೀಸಲಾತಿ ಕೊಡಿಸಿದೆ. ಪಾಪ ಬಿಜೆಪಿಯವರಿಗೆ, ರಾಜೀವನಿಗೆ ತೆದುಕೊಳ್ಳುವುದಕ್ಕೆ ಆಗುತ್ತಿಲ್ಲ ಎಂದು ಕುಟುಕಿದರು.ತಾವೆಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತೇವೋ ಎಂದು ಬಿಜೆಪಿಯವರು ನೂರಾರು ಜನರನ್ನು ಸೇರಿಸಿ, ಹೀಗೆ ಮಾಡುತ್ತಾರೆ. ನನಗೆ ಇಲ್ಲಿಗೆ ಬರುವ ಮುಂಚೆಯೇ ಇದೆಲ್ಲವೂ ಗೊತ್ತಿತ್ತು. ಲಂಬಾಣಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿದ್ದು ಕಾಂಗ್ರೆಸ್ ಪಕ್ಷ. ಲಂಬಾಣಿ ಸಮುದಾಯದ ಶೇ.90 ಜನ ಒಳ್ಳೆಯವರೇ. ಇಂತಹ ಶೇ.10 ಪರ್ಸೆಂಟ್ ಜನ ಇರುತ್ತಾರೆ ಎಂದು ಬಿಜೆಪಿಯ ರಾಜೀವ್ ಇತರರ ಬಗ್ಗೆ ವ್ಯಂಗ್ಯವಾಡಿದರು.
ಸೂರಗೊಂಡನಕೊಪ್ಪದಲ್ಲಿ ಶ್ರೀ ಸಂತ ಸೇವಾಲಾಲ್‌ರ ಜಯಂತ್ಯೋತ್ಸವಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಕಪ್ಪುಬಟ್ಟೆ ಹಿಡಿದು ಯುವಕರು ಆಕ್ರೋಶ ಹೊರಹಾಕಿದರು.
ಕಪ್ಪುಬಟ್ಟೆ ಹಿಡಿದು ಪ್ರತಿಭಟಿಸುತ್ತಿದ್ದ ಯುವಕರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸಪಟ್ಟರು. ಕಡೆಗೆ ಸಮಾಜದ ಯುವ ಮುಖಂಡ, ಬಿಜೆಪಿ ಮಾಜಿ ಶಾಸಕ ಪಿ.ರಾಜೀವ್ ಪ್ರತಿಭಟನಾನಿರತ ಯುವಕರಿಗೆ ಸಮಾಧಾನಪಡಿಸಿ, ಮನವಿ ಮಾಡಿದ ನಂತರ ಘೋಷಣೆ ಕೂಗುವುದು, ಪ್ರತಿಭಟಿಸುವುದನ್ನು ಯುವಕರು ನಿಲ್ಲಿಸಿದರು. ಯಾವುದೇ ಯುವಕರನ್ನೂ ಬಂಧಿಸದಂತೆ ಪೊಲೀಸ್ ಅಧಿಕಾರಿಗಳಿಗೆ ಪಿ.ರಾಜೀವ್ ಮನವಿ ಮಾಡಿದರು.