ಕನ್ನಡಪ್ರಭ ವಾರ್ತೆ ಬೆಳ್ತಂಗಡಿಬಾಳೂರು ಠಾಣಾ ವ್ಯಾಪ್ತಿಯ ಬಲ್ಲಾಳ ರಾಯನ ದುರ್ಗ ಹಾಗೂ ಬಂಡಾಜೆ ಫಾಲ್ಸ್ ಚಾರಣಕ್ಕೆ ಹೋಗಿದ್ದ ಯುವಕನೋರ್ವ ಭಾನುವಾರ ಸಂಜೆ ನಾಪತ್ತೆಯಾಗಿದ್ದು, ಅರಣ್ಯ, ಪೋಲಿಸ್ ಇಲಾಖಾ ಸಿಬ್ಬಂದಿ ಸಕಾಲಿಕ ಹುಡುಕಾಟದಿಂದ ಪತ್ತೆಯಾಗಿದ್ದು ಆತನನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿದೆ.
ಮಂಗಳೂರಿನ ಕೆ.ಎಂ.ಸಿ.ಯ ಎಂ.ಬಿ.ಬಿ.ಎಸ್. ವಿದ್ಯಾಭ್ಯಾಸ ಮಾಡುತ್ತಿದ್ದ 10 ಯುವಕರು ಚಾರಣಕ್ಕೆ ಹಾಗೂ ಬಂಡಾಜೆ ಫಾಲ್ಸ್ ವೀಕ್ಷಿಸಲು ಬೆಳ್ತಂಗಡಿ ತಾಲೂಕಿಗೆ ಬಂದಿದ್ದರು. ಅವರಲ್ಲಿ ಓರ್ವ ನಾಪತ್ತೆಯಾಗಿದ್ದ. ಬಳಿಕ ಆತನ ಗೆಳೆಯರು ಸುಂಕಸಾಲೆ ಗ್ರಾಮಕ್ಕೆ ಬಂದು ಅವರ ಪೈಕಿ ಆದಿತ್ಯ ಎಂಬ ಯುವಕ 112 ಪೊಲೀಸ್ ವಾಹನಕ್ಕೆ ಕರೆ ಮಾಡಿ ಧನುಷ್ ಎಂಬಾತನ ನಾಪತ್ತೆಯ ವಿಚಾರ ತಿಳಿಸಿದ್ದ. ಧನುಷ್ ಕಾಡಿನಲ್ಲಿ ಸುಮಾರು 8 ಕಿ.ಮೀ. ಒಳಗಡೆ ಮೊಬೈಲ್ ಸ್ವಿಚಾಫ್ ಆಗಿ ಕಾಣೆಯಾಗಿದ್ದರು.ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಹೋಗಿ ಅಲ್ಲಿದ್ದ ಹುಡುಗರನ್ನು ವಿಚಾರಿಸಿದರು. ಧನುಷ್ ತಪ್ಪಿಕೊಂಡಿರುವ ನಿರ್ದಿಷ್ಟ ಸ್ಥಳವನ್ನು ಸೂಚಿಸಿದ ಮೆರೆಗೆ ಸಿಬ್ಬಂದಿ ಸುಮಾರು 3 ಗಂಟೆಗೆ 30 ನಿಮಿಷಗಳ ಕಾಲ ಹುಡುಕಾಟ ನಡೆಸಿದಾಗ ಕೊನೆಗೆ ಗುಡ್ಡದ ಪ್ರದೇಶದಲ್ಲಿ ಸುಮಾರು 700 ಅಡಿ ಕೆಳಗೆ ದಟ್ಟವಾದ ಅರಣ್ಯ ಮದ್ಯದಲ್ಲಿದಲ್ಲಿ ಒಬ್ಬನೇ ನಿಂತಿರುವುದು ಕಂಡಿತು. ಸಿಬ್ಬಂದಿಯನ್ನು ಕಂಡು ಓಡಿ ಬಂದ ಧನುಷ್‌ಗೆ ಧೈರ್ಯ ತುಂಬಿ ಕುಡಿಯಲು ನೀರು ಕೊಟ್ಟು ಸಮಾಧಾನಪಡಿಸಲಾಯಿತು. ಆತನನ್ನು ವಾಹನದ ಬಳಿಗೆ ಕರೆದುಕೊಂಡು ಬಂದು ಆತನ ತಂದೆ, ತಾಯಿಗೆ ಕರೆ ಮಾಡಿಸಿ ಮಾಹಿತಿಯೊಂದಿಗೆ ಮಾತನಾಡಿಸಿ ಅವರ ಎರಡು ಕಾರಿನಲ್ಲಿ ಬಂದ 10 ಜನರನ್ನು ಕೊಟ್ಟಿಗೆಹಾರಕ್ಕೆ ಕರೆದುಕೊಂಡು ಬರಲಾಯಿತು. ಬಳಿಕ ಎಲ್ಲರನ್ನು ಮಂಗಳೂರಿಗೆ ಸುರಕ್ಷಿತವಾಗಿ ಕಳುಹಿಸಿ ಕೊಡಲಾಯಿತು. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಮೆಹಬೂಬ್ ಸಾಧನಿ, ಶಂಕರ್ ಬೋವಿ ಹಾಗೂ ಸ್ಥಳೀಯರು ಇದ್ದರು.ಇತ್ತ ಬೆಳ್ತಂಗಡಿ ವನ್ಯ ಜೀವಿ ವಿಭಾಗದಿಂದ ಕೂಡ ಹುಡುಕಾಟ ಭಾನುವಾರ ರಾತ್ರಿ ಹುಡುಕಾಟ ನಡೆಸಲಾಗಿದೆ. ಬಲ್ಲಾಳ ರಾಯನ ದುರ್ಗದ ಮೂಲಕ ಬಂಡಾಜೆ ಜಲಪಾತ ಹತ್ತಿರ ಹಾಗೂ ದ.ಕ. ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗಡಿ ಭಾಗದಲ್ಲಿ ಸಿಬ್ಬಂದಿ ಶೋಧ ನಡೆಸಿದ್ದರು.