ಕನ್ನಡಪ್ರಭ ವಾರ್ತೆ ಧಾರವಾಡ
ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದರಿಂದ ವಶಕ್ಕೆ ತೆಗೆದುಕೊಳ್ಳಲು ಬಂದಿದ್ದ ಸಿಬಿಐ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಭಾನುವಾರ ಪರಾರಿಯಾಗಿದ್ದ ಪೊಲೀಸ್ ಇನಸ್ಪೆಕ್ಟರ್ ಚೆನ್ನಕೇಶವ ಟಿಂಗರಿಕರ್ ಸೋಮವಾರ ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದು, ಅವರ ವರ್ತನೆಗೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದ ಆರೋಪಿಯಾಗಿರುವ ಟಿಂಗರಿಕರ್ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ವಾರೆಂಟ್‌ಗೆ ಹೆದರಿದ ಟಿಂಗರಿಕರ್ ಸಿಬಿಐ ಕೈಗೆ ಸಿಗದೇ ಸೋಮವಾರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮೊರೆ ಹೋದರು. ಇದೇ ವೇಳೆ ವಾರಂಟ್ ರದ್ದು ಪಡಿಸುವಂತೆ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ಈ ವೇಳೆ ಅವರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ನ್ಯಾಯಾಧೀಶರು, ಓರ್ವ ಪೊಲೀಸ್ ಅಧಿಕಾರಿಯಾಗಿ ಇಂತಹ ವರ್ತನೆ ಮಾಡುವುದು ಸರಿಯಾ ಎಂದು ಪ್ರಶ್ನಿಸಿದರು. ಇದೇ ವೇಳೆ ಕೋರ್ಟ್ ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡಿತು. ಟಿಂಗರಿಕರ್ ಅವರನ್ನು ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಅಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. ಆದರೆ, ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಸದ್ಯಕ್ಕೆ ಮುಂದೂಡಿ ಆದೇಶಿಸಿದೆ.
ಹಿಂದೆ ಏನಾಗಿತ್ತು?ಟಿಂಗರಿಕರ್ ಯೋಗೀಶಗೌಡ ಕೊಲೆ ಪ್ರಕರಣದ ತನಿಖಾಧಿಕಾರಿ ಆಗಿದ್ದರು. ಪ್ರಕರಣವನ್ನು ಮುಚ್ಚಿ ಹಾಕಲು ಟಿಂಗರಿಕರ್ ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೂ ಪ್ರಕರಣದ ವಿಚಾರಣೆ ಅಂತಿಮ ಹಂತದಲ್ಲಿತ್ತು. ಇನ್ನೇನು ವಿಚಾರಣೆ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಮುಂಚೆಯೇ ನೀಡಿದ್ದ ಭರವಸೆಯಂತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲಾಯಿತು. ಅಲ್ಲಿಂದ ಪ್ರಕರಣದ ಕಥೆಯೇ ಹೊರಳಿತು. ಅದುವರೆಗೂ ಕೊಲೆಯ ಆರೋಪಿಗಳಾಗಿದ್ದವರು, ಈ ಕೊಲೆಯನ್ನೇ ಮಾಡಿರಲಿಲ್ಲ ಎಂಬುದನ್ನು ಸಿಬಿಐ ಪತ್ತೆ ಹಚ್ಚಿತ್ತು. ಅಸಲಿ ಕೊಲೆಗಾರರನ್ನು ಹೆಡೆಮುರಿ ಕಟ್ಟಿ ತಂದು ನ್ಯಾಯಾಲಯದ ಎದುರು ನಿಲ್ಲಿಸಿತು.
ಇದೇ ವೇಳೆ ಉಪನಗರ ಠಾಣೆ ಪೊಲೀಸ್ ಇನಸ್ಪೆಕ್ಟರ್ ಚೆನ್ನಕೇಶವ ಟಿಂಗರಿಕರ್ ಪ್ರಕರಣವನ್ನು ಮುಚ್ಚಿಹಾಕಿ, ನಿಜವಾದ ಆರೋಪಿಗಳ ಬದಲು ನಕಲಿ ಆರೋಪಿಗಳನ್ನು ತಂದು ಪ್ರಕರಣದಲ್ಲಿ ಸೇರಿಸಿದ್ದಾರೆ ಎಂಬ ಅಂಶವನ್ನು ಸಿಬಿಐ ಪತ್ತೆ ಹಚ್ಚಿತು. ಹೀಗಾಗಿ, ಈ ಪ್ರಕರಣದಲ್ಲಿ ಟಿಂಗರಿಕರ್ ಕೂಡ ಸಾಕ್ಷಿನಾಶದ ಆರೋಪದಡಿ 19ನೇ ಆರೋಪಿಯನ್ನಾಗಿ ಮಾಡಲಾಗಿತ್ತು. ಇದೇ ಕಾರಣಕ್ಕೆ ಸಿಬಿಐ ತಮ್ಮನ್ನು ಬಂಧಿಸುತ್ತದೆ ಎಂದು ತಿಂಗಳುಗಟ್ಟಲೇ ನಾಪತ್ತೆಯಾಗಿದ್ದರು. ಅವರ ತಂದೆ ನಿಧನರಾದಾಗಲೂ ಬಾರದೇ, ತಂದೆಯ ಅಂತ್ಯಸಂಸ್ಕಾರದ ಕೊನೆಯ ಗಳಿಗೆಯಲ್ಲಿ ಬಂದು, ರುದ್ರಭೂಮಿಯಿಂದಲೇ ಮತ್ತೆ ನಾಪತ್ತೆಯಾಗಿದ್ದರು. ಬಳಿಕ ಧಾರವಾಡ ಹೈಕೋರ್ಟ್ ಮೊರೆ ಹೋಗಿ, ನಿರೀಕ್ಷಣಾ ಜಾಮೀನು ಪಡೆದಿದ್ದರು. ಈ ವೇಳೆ ಹೈಕೋರ್ಟ್ ಅವರಿಗೆ ಅನೇಕ ಷರತ್ತುಗಳನ್ನು ವಿಧಿಸಿತ್ತು. ಇದಾದ ನಂತರ ಪ್ರಕರಣದ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯದಲ್ಲಿ ಮುಂದುವರಿಯಿತು. ಇದೇ ವೇಳೆ ಟಿಂಗರಿಕರ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದರು. ಮೂರು ಬಾರಿ ವಿಚಾರಣೆಗೆ ಗೈರಾಗಿದ್ದಕ್ಕೆ ಕೋರ್ಟ್ ಅವರ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿ ಮಾಡಿತ್ತು. ಆಗ ವಶಕ್ಕೆ ಪಡೆಯಲು ಬಂದಿದ್ದ ಸಿಬಿಐ ಅಧಿಕಾರಿಗಳ ಕೈಗೆ ಸಿಗದೇ ಪರಾರಿಯಾಗಿದ್ದರು ಟಿಂಗರಿಕರ್.