ಕನ್ನಡಪ್ರಭ ವಾರ್ತೆ ತಿಪಟೂರು
ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಈವರೆಗೂ ನಡೆಯುತ್ತಿರುವ ಕೊಬ್ಬರಿ ಹರಾಜು ವಾರದ ಬುಧವಾರ ಮತ್ತು ಶನಿವಾರದ ಬದಲಾಗಿ ಅಕ್ಟೋಬರ್ 1ರಿಂದ ಪ್ರತಿ ಸೋಮವಾರ ಮತ್ತು ಗುರುವಾರ ನಡೆಯಲಿದ್ದು ಹರಾಜಿನ ಸಮಯ ಈಗಿನ ಮಧ್ಯಾಹ್ನ 2ಗಂಟೆಗೆ ಬದಲಾಗಿ 3ಗಂಟೆಗೆ ನಡೆಯಲಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಎಸ್.ಬಿ. ನ್ಯಾಮಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಗರದ ಎಪಿಎಂಸಿ ಪ್ರಾಂಗಣದಲ್ಲಿ ಶಾಸಕ ಕೆ.ಷಡಕ್ಷರಿ ಅಧ್ಯಕ್ಷತೆಯಲ್ಲಿ ನಡೆದ ಕೊಬ್ಬರಿ ವರ್ತಕರ ಸಭೆಯಲ್ಲಿ ಎಪಿಎಂಸಿ ಮಾರುಕಟ್ಟೆಯ ಕೊಬ್ಬರಿ ವಹಿವಾಟಿಗೆ ಸಂಬಂಧಿಸಿದಂತೆ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಪ್ರತಿ ತಿಂಗಳಿನಲ್ಲಿ ಎರಡನೇ ಹಾಗೂ ನಾಲ್ಕನೇ ಶನಿವಾರ ಎರಡು ದಿನಗಳು ಬ್ಯಾಂಕ್ ರಜೆ ಬರುತ್ತಿರುವುದರಿಂದ ರೈತರಿಗೆ ಕೊಬ್ಬರಿ ಹಣ ನೀಡಲು ವರ್ತಕರಿಗೆ ತೊಂದರೆಯಾಗುವ ಕಾರಣ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರೈತರು ತರುವ ಎಲ್ಲಾ ಕೊಬ್ಬರಿಯೂ ಎಪಿಎಂಸಿ ಪ್ರವೇಶದ ಗೇಟ್ ಬಳಿ ಕಡ್ಡಾಯವಾಗಿ ನಮೂದಾಗಬೇಕು. ಎಲ್ಲಾ ಖರೀದಿದಾರರು ಬೇಡಿಕೆಗೆ ತಕ್ಕಂತೆ ಹಾರಾಜಿನಲ್ಲಿ ಭಾಗವಹಿಸಿ ಧಾರಣೆ ನಮೂದಿಸುವುದು. ಮಾರುಕಟ್ಟೆ ವ್ಯವಸ್ಥೆಯನ್ನು ಹಾಳು ಮಾಡಲು ಉದ್ದೇಶ ಪೂರ್ವಕವಾಗಿ ಟೆಂಡರಿನಲ್ಲಿ ಅಸಾಮಾನ್ಯ ಧಾರಣೆಯನ್ನು ನಮೂದಿಸಿದರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಂಡು ಅಂಗಡಿ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದರು.ಅಕ್ಟೊಂಬರ್ 1ರಿಂದ ಎಲ್ಲಾ ದಲ್ಲಾಲರು ತಮ್ಮ ತಮ್ಮ ಅಂಗಡಿಗಳಲ್ಲಿ ಘೋಷಣೆಯಾಗಿರುವ ಅತಿ ಹೆಚ್ಚಿನ ಟೆಂಡರ್ ಧಾರಣೆಯನ್ನು ಲೆಕ್ಕ ಮಾಡಿ ರೈತರಿಗೆ ಹಣ ಪಾವತಿಸುವುದು. ದಲ್ಲಾಲರು ತಮ್ಮ ಅಂಗಡಿಗೆ ಟೆಂಡರ್ ನಮೂದಿಸುವಂತೆ ಹೆಚ್ಚಿನ ಸಂಖ್ಯೆಯ ಖರೀದಿದಾರರನ್ನು ಉತ್ತೇಜಿಸುವುದು. ರೈತರು ಅಂಗಡಿಗೆ ತಂದು ತೂಕ ಕೊಡುವ ಕೊಬ್ಬರಿಯನ್ನು ಗರಿಷ್ಟ ಮೂರು ಟೆಂಡರ್‌ಗಳವರೆಗೆ ಮಾತ್ರ ತಮ್ಮ ಕೊಬ್ಬರಿಯನ್ನು ಅಂಗಡಿಗಳಲ್ಲಿ ಇಟ್ಟುಕೊಳ್ಳಬಹುದು ಇದನ್ನು ಬಿಟ್ಟು ಹಾಗೆ ಮುಂದುವರೆಸಿದರೆ ಅಂತಹ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಖರೀದಿದಾರರು ಕನಿಷ್ಠ 5 ದಲ್ಲಾಲರ ಅಂಗಡಿಗಳಿಗೆ ಟೆಂಡರ್ ನಮೂದಿಸತಕ್ಕದ್ದು ಮತ್ತು ಅಂತಹ ಅಂಗಡಿಗಳಲ್ಲಿ ಖರೀದಿದಾರರು ಟೆಂಡರ್‌ಗಿಟ್ಟ ಎಲ್ಲಾ ಕೊಬ್ಬರಿಗೂ ಟೆಂಡರ್ ನಮೂದಿಸತಕ್ಕದ್ದು. ಖರೀದಿದಾರರು ಮೂರು ತಿಂಗಳವರೆಗೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಿದ್ದಲ್ಲಿ ಅಂತಹ ಖರೀದಿದಾರರಿಗೆ ಕಾರಣ ಕೇಳುವ ನೋಟೀಸ್ ನೀಡಿ ಸದರಿಯವರ ಲೈಸೆನ್ಸ್ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಹಾಗಾಗಿ ಶಾಸಕ ಕೆ. ಷಡಕ್ಷರಿಯವರ ಅಧ್ಯಕ್ಷತೆಯಲ್ಲಿ ವರ್ತಕರು, ರವಾನೆದಾರರು ಹಾಗೂ ರೈತರ ಜೊತೆ ನಡೆಸಿದ ಸಭೆಯಲ್ಲಿ ತೆಗೆದುಕೊಂಡಿರುವ ಈ ತೀರ್ಮಾನಗಳಿಗೆ ಸಹಕರಿಸಬೇಕೆಂದು ಕಾರ್ಯದರ್ಶಿ ತಿಳಿಸಿದರು.