ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ವಿಧಾನಸಭೆಯಲ್ಲಿ ಮನ ಬಂದಂತೆ ಪಾಸ್ ಮಾಡುವ ಬಿಲ್‍ಗಳನ್ನು ವಿಧಾನಪರಿಷತ್‍ನಲ್ಲಿ ತಿರಸ್ಕರಿಸಬೇಕಾದರೆ ಬಹುಮತವಿರಬೇಕು. ಅದಕ್ಕಾಗಿ ಈ ಬಾರಿಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿರವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸುವಂತೆ ಶಿಕ್ಷಕರುಗಳಲ್ಲಿ ಮನವಿ ಮಾಡಿದರು.
ರಾಷ್ಟ್ರೀಯ ಹೆದ್ದಾರಿ-13 ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮತಯಾಚಿಸಿ ಮಾತನಾಡಿದ ಅವರು, ನರೇಂದ್ರಮೋದಿ ದೇಶದ ಪ್ರಧಾನಿಯಾದಾಗಿನಿಂದಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಗೌರವ ಸಿಕ್ಕಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಮಾಡುವ ಕಾನೂನುಗಳನ್ನು ಮೇಲ್ಮನೆಗೆ ಕಳಿಸಿದಾಗ ಅಲ್ಲಿ ತೀರ್ಮಾನಿಸಲು ಪಕ್ಷಕ್ಕೆ ಬಹುಮತ ವಿರಬೇಕು. ಹಾಗಾಗಿ ವಿಧಾನಪರಿಷತ್ ಚುನಾವಣೆ ಅತ್ಯಂತ ಮಹತ್ವದ್ದು ಎಂದರು.ಮತ ಪಡೆಯುವುದಕ್ಕಾಗಿ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಗೆ ಮುನ್ನ ಉಚಿತ ಗ್ಯಾರೆಂಟಿಗಳನ್ನು ನೀಡಿ ಜನರ ಮನ ವೊಲಿಸಿತು. ಪ್ರಧಾನಿ ನರೇಂದ್ರ ಮೋದಿರವರು ಏನು ಬೇಕಾದರೂ ಉಚಿತ ಗ್ಯಾರೆಂಟಿಗಳನ್ನು ನೀಡಬಹುದಿತ್ತು. ದೇಶ ದಿವಾಳಿ ಯಾಗಿಸಲು ಅವರಿಗೆ ಇಷ್ಟವಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಬ್ಬ ಮಹಿಳೆಗೆ ಒಂದು ಲಕ್ಷ ರು.ಗಳನ್ನು ನೀಡುವುದಾಗಿ ಘೋಷಿಸಿದೆ. ಅದಕ್ಕಾಗಿ 84 ಲಕ್ಷ ಕೋಟಿ ರು.ಗಳು ಬೇಕಾಗುತ್ತದೆ. ಹಣ ಎಲ್ಲಿಂದ ತರುತ್ತಾರೆಂದು ತಿಪ್ಪಾರೆಡ್ಡಿ ಪ್ರಶ್ನಿಸಿದರು. ನರೇಂದ್ರಮೋದಿರವರ ಪಾರದರ್ಶಕ ಆಡಳಿತಕ್ಕೆ ಅಮೇರಿಕಾ, ಬ್ರಿಟನ್, ಜರ್ಮನ್, ರಷ್ಯ ದೇಶಗಳಿಗೆ ನಡುಕ ಉಂಟಾಗಿದೆ. ಮತ್ತೊಮ್ಮೆ ಮೋದಿ ದೇಶದ ಪ್ರಧಾನಿಯಾಗುವುದು ಖಚಿತ ಎಂದು ಹೇಳಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಕೋವಿಡ್‍ನಲ್ಲಿ ಜೀವಕ್ಕೆ ಹೆದರದೆ ಶಿಕ್ಷಕರುಗಳಿಗೆ ಕಿಟ್‍ಗಳನ್ನು ನೀಡಿದರು.ಸದನದಲ್ಲಿ ಶಿಕ್ಷಕರುಗಳ ಬೇಡಿಕೆ, ಸಮಸ್ಯೆಗಳ ಬಗ್ಗೆ ಹಿಂದಿನಿಂದಲೂ ಜಗಳವಾಡುತ್ತಿದ್ದೇವೆ. ಶಿಕ್ಷಣ ವ್ಯವಸ್ಥೆಯನ್ನು ಹೊಸ ಉತ್ತುಂಗಕ್ಕೆ ತೆಗೆದುಕೊಂಡು ಹೋಗಬೇಕಾಗಿರುವುದರಿಂದ ಮುಂದಿನ ತಿಂಗಳು ಮೂರನೆ ತಾರೀಖು ನಡೆಯುವ ಚುನಾವಣೆಯಲ್ಲಿ ವೈ.ಎ.ನಾರಾಯಣಸ್ವಾಮಿರವರನ್ನು ಗೆಲ್ಲಿಸಿ ಎಂದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಗ್ರಾಮಾಂತರ ಮಂಡಲಾಧ್ಯಕ್ಷ ಕಲ್ಲೇಶಯ್ಯ, ಶಿಕ್ಷಣ ಜಯಣ್ಣ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶೈಲಜಾರೆಡ್ಡಿ, ಬಿಜೆಪಿ ಉಪಾಧ್ಯಕ್ಷೆ ಚಂದ್ರಿಕ ಲೋಕನಾಥ್, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಜಯಲಕ್ಷ್ಮಿ, ಉಪ ಪ್ರಾಂಶುಪಾಲ ಶಿವಕುಮಾರ್ ಈ ಸಂದರ್ಭದಲ್ಲಿದ್ದರು. ಮಾಜಿ ಶಾಸಕ ತಿಪ್ಪಾರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಆರುಣ್ ಶಹಾಪುರ್ ಸೇರಿದಂತೆ ಇತರರು ಸಂತ ಜೋಸೆಫ್ ಸ್ಕೂಲ್, ರೋಟರಿ ವಿದ್ಯಾಲಯ, ವಿದ್ಯಾ ವಿಕಾಸ ವಿದ್ಯಾಸಂಸ್ಥೆ, ವಾಸವಿ ವಿದ್ಯಾ ಸಂಸ್ಥೆ, ಡಯಟ್ ಕಾಲೇಜು, ಶಿಕ್ಷಕರ ಸರ್ಕಾರಿ ಶಿಕ್ಷಣ ವಿದ್ಯಾಲಯಗಳಿಗೆ ಭೇಟಿ ನೀಡಿ ವೈ.ಎ.ನಾರಾಯಣಸ್ವಾಮಿ ಪರ ಮತಯಾಚನೆ ಮಾಡಿದರು.