ಕರ್ನಾಟಕದಲ್ಲಿ ಟಿಪ್ಪು, ತುಘಲಕ್‌ ಮಾದರಿ ಕಾಂಗ್ರೆಸ್ ದುರಾಡಳಿತ: ಬಿಜೆಪಿ ದೂಷಣೆ

KannadaprabhaNewsNetwork |  
Published : Nov 23, 2024, 12:32 AM IST
ಬಿಜೆಪಿ ಧರಣಿ ಪ್ರತಿಭಟನೆಯಲ್ಲಿ ಭಜನಾ ಸಂಕೀರ್ತನೆಗೆ ತಬಲಾ ಸಾಥ್‌ ನೀಡಿ ಗಮನ ಸೆಳೆದ ಶಾಸಕ ವೇದವ್ಯಾಸ್‌ ಕಾಮತ್‌  | Kannada Prabha

ಸಾರಾಂಶ

ಪ್ರತಿಯೊಬ್ಬ ಹಿಂದು, ಮುಸ್ಲಿಂ, ಕ್ರೈಸ್ತರ ಆಸ್ತಿಯನ್ನೂ ವಕ್ಫ್‌ ಕಬಳಿಸಿದೆ. ಹೀಗಾಗಿ ಬಿಜೆಪಿ ವತಿಯಿಂದ ಪ್ರತಿ ಹಿಂದುಗಳ ಮನೆಗೆ ತೆರಳಿ ಪಹಣಿ ಪತ್ರ(ಆರ್‌ಟಿಸಿ) ಪರಿಶೀಲನೆ ನಡೆಸುತ್ತೇವೆ. ಇದನ್ನು ಎಲ್ಲ ಕಡೆಗಳಲ್ಲಿ ಅಭಿಯಾನವಾಗಿ ಕೈಗೆತ್ತಿಕೊಳ್ಳಲಾಗುವುದು. ಧರ್ಮವನ್ನು ಉಳಿಸುವ ಈ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು. ಅಲ್ಲದೆ ವಕ್ಫ್‌ ಕಬಳಿಕೆ ಬಗ್ಗೆ ಸಿಬಿಐನಿಂದ ಸಮಗ್ರ ತನಿಖೆ ನಡೆಯಬೇಕು ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯಾದ್ಯಂತ ನಡೆಯುತ್ತಿರುವ ವಕ್ಫ್‌ ಅಕ್ರಮ ಹಾಗೂ ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾಥ್‌ ನೀಡುತ್ತಿದೆ ಎಂದು ಆರೋಪಿಸಿ ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷಣೆಯಡಿ ಶುಕ್ರವಾರ ಮಂಗಳೂರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ದಿನಪೂರ್ತಿ ಧರಣಿ ಪ್ರತಿಭಟನೆ ನಡೆಸಿದೆ.

ಮಂಗಳೂರು ಪುರಭವನ ಎದುರಿನ ರಾಜಾಜಿ ಪಾರ್ಕ್‌ನಲ್ಲಿ ಬೃಹತ್‌ ಪೆಂಡಾಲ್‌ ಹಾಕಿ ಭಜನಾ ಸಂಕೀರ್ತನ ಜೊತೆಗೆ ಧರಣಿ ಪ್ರತಿಭಟನೆ ನಡೆಸಲಾಯಿತು.ಪುರಭವನ ಎದುರು ಅಂಬೇಡ್ಕರ್‌ ಹಾಗೂ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಧರಣಿ ಪ್ರತಿಭಟನೆಗೆ ಚಾಲನೆ ನೀಡಲಾಯಿತು. ಈ ಪ್ರತಿಭಟನೆಯಲ್ಲಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಮುಖಂಡರು ಭಾಗಿಯಾಗಿದ್ದರು. ಸಂಜೆ ವರೆಗೆ ಪ್ರತಿಭಟನೆಯಲ್ಲಿ ವಿವಿಧ ಫಲಕಗಳನ್ನು ಹಿಡಿದು ಘೋಷಣೆ ಕೂಗಿದರು.

ರಾಜ್ಯದಲ್ಲಿ ಟಿಪ್ಪು, ಮೊಘಲ್‌ ದುರಾಡಳಿತ:

ಸಂಸದ ಕ್ಯಾ.ಬ್ರಿಜೇಶ್‌ ಚೌಟ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಮೊಘಲ್‌ ಹಾಗೂ ಟಿಪ್ಪು ಮಾದರಿಯಲ್ಲಿ ದುರಾಡಳಿತ ನಡೆಸುತ್ತಿದ್ದಾರೆ. ಇದು ಹಿಂದುಗಳನ್ನು ಮುಗಿಸುವ ಷಡ್ಯಂತರವಾಗಿದ್ದು, ಹಿಂದೆ ಟಿಪ್ಪು ಹೇಗೆ ಮಾಡುತ್ತಿದ್ದನೋ, ಅದೇ ರೀತಿ ಈಗ ಸಿದ್ದರಾಮಯ್ಯ ಅವರು ಹಿಂದುಗಳ ಬದುಕು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದು ದಮನ ನೀತಿ ಮುಂದುವರಿಯುತ್ತಿದೆ. ವಕ್ಫ್‌ ಮೂಲಕ ಲ್ಯಾಂಡ್‌ ಜಿಹಾದ್‌ ನಡೆಯುತ್ತಿದೆ. ಮಂಗಳೂರು ತಾಲೂಕಿನಲ್ಲೇ 35 ವಕ್ಫ್‌ ಆಸ್ತಿ ಒತ್ತುವರಿಯಾದ ಮಾಹಿತಿ ಇದೆ. ಶೇ.50ಕ್ಕಿಂತ ಅಧಿಕ ಆಸ್ತಿಗಳು ವಕ್ಫ್ ವಶದಲ್ಲಿವೆ ಎಂದು ಅವರು ಟೀಕಿಸಿದರು.

ವಕ್ಫ್‌ ಆಸ್ತಿ ಒತ್ತುವರಿ ಬಗ್ಗೆ ಸಿಬಿಐ ತನಿಖೆ ನಡೆಯಬೇಕು. ಸತ್ಯ ನೆಲದ ಮೂಲಸತ್ವವಾಗಿದ್ದು, ವಕ್ಫ್‌ ವಿರೋಧಿಸುವವರು ಕೇಂದ್ರದ ಪಾರ್ಲಿಮೆಂಟರಿ ಸಮಿತಿ ಮುಂದೆ ಬಂದು ಹೇಳಿಕೆ ನೀಡಲಿ. ಅದು ಬಿಟ್ಟು ವಕ್ಫ್‌ ಆಸ್ತಿ ಕಬಳಿಕೆಗೆ ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್‌ ಖಾನ್‌ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದನ್ನು ನಿಲ್ಲಿಸಲಿ ಎಂದು ಸಂಸದರು ಆಗ್ರಹಿಸಿದರು.

ಶಾಸಕ ರಾಜೇಶ್‌ ನಾಯ್ಕ್‌, ಮೇಯರ್‌ ಮನೋಜ್‌ ಕುಮಾರ್‌, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ, ಮುಖಂಡರಾದ ಮೋನಪ್ಪ ಭಂಡಾರಿ, ಪ್ರೇಮಾನಂದ ಶೆಟ್ಟಿ, ಸುನಿಲ್‌ ಆಳ್ವ, ರಾಜೇಶ್‌ ಕಾವೇರಿ, ನಂದನ್‌ ಮಲ್ಯ, ರಾಜಗೋಪಾಲ ರೈ, ಯತೀಶ್‌ ಆರ್ವಾರ್‌, ಗುರುಪ್ರಸಾದ್‌, ಪೂಜಾ ಪೈ, ಶಕೀಲ ಕಾವಾ, ಪೂರ್ಣಿಮಾ, ಕಿರಣ್‌ ಕುಮಾರ್‌, ಅರುಣ್‌ ಶೇಟ್‌, ಮತ್ತಿತರರಿದ್ದರು.ಆರ್‌ಟಿಸಿ ಪರಿಶೀಲನೆ ಅಭಿಯಾನ

ಪ್ರತಿಯೊಬ್ಬ ಹಿಂದು, ಮುಸ್ಲಿಂ, ಕ್ರೈಸ್ತರ ಆಸ್ತಿಯನ್ನೂ ವಕ್ಫ್‌ ಕಬಳಿಸಿದೆ. ಹೀಗಾಗಿ ಬಿಜೆಪಿ ವತಿಯಿಂದ ಪ್ರತಿ ಹಿಂದುಗಳ ಮನೆಗೆ ತೆರಳಿ ಪಹಣಿ ಪತ್ರ(ಆರ್‌ಟಿಸಿ) ಪರಿಶೀಲನೆ ನಡೆಸುತ್ತೇವೆ. ಇದನ್ನು ಎಲ್ಲ ಕಡೆಗಳಲ್ಲಿ ಅಭಿಯಾನವಾಗಿ ಕೈಗೆತ್ತಿಕೊಳ್ಳಲಾಗುವುದು. ಧರ್ಮವನ್ನು ಉಳಿಸುವ ಈ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು. ಅಲ್ಲದೆ ವಕ್ಫ್‌ ಕಬಳಿಕೆ ಬಗ್ಗೆ ಸಿಬಿಐನಿಂದ ಸಮಗ್ರ ತನಿಖೆ ನಡೆಯಬೇಕು ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಆಗ್ರಹಿಸಿದರು.

ಮಠ, ಮಂದಿರ, ರೈತರ ಭೂಮಿಯನ್ನು ಕಬಳಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಹಿಂದು ವಿರೋಧಿ ಎನಿಸಿದ್ದಾರೆ. ವಕ್ಫ್‌ ನೋಟಿಸ್‌ ವಾಪಸ್‌ ಪಡೆಯುವಂತೆ ಸಿಎಂ ಸೂಚನೆ ನೀಡಿದರೂ ವಕ್ಫ್‌ನಲ್ಲಿ ಇತ್ಯರ್ಥವಾಗದೆ ಏನೂ ಪ್ರಯೋಜನವಿಲ್ಲ. ಇದರಿಂದಾಗಿ ಹಿಂದುಗಳು ತಮ್ಮದೇ ಜಾಗಕ್ಕಾಗಿ ವಕ್ಫ್‌ ಮುಂದೆ ಕೈಚಾಚಬೇಕಾದ ಪರಿಸ್ಥಿತಿ ಉದ್ಭವವಾಗಿದೆ. 2016ರಲ್ಲಿ 1.20 ಲಕ್ಷ ಎಕರೆ ಇದ್ದ ವಕ್ಫ್‌ ಭೂಮಿ 2024ರಲ್ಲಿ 9.40 ಲಕ್ಷ ಎಕರೆಗೆ ಹೆಚ್ಚ‍ಳವಾಗಿದೆ. ಮುಸ್ಲಿಮರ ಹಿತಾಸಕ್ತಿ ಕಾಪಾಡುವ ಮೂಲಕ ಓಟ್‌ಬ್ಯಾಂಕ್‌ ಷಡ್ಯಂತರವನ್ನು ಕಾಂಗ್ರೆಸ್‌ ಸರ್ಕಾರ ನಡೆಸುತ್ತಿದೆ. ತನ್ನದೇ ಆಸ್ತಿಗಾಗಿ ಹಿಂದುಗಳು ವಕ್ಫ್‌ ಎದುರು ಮಂಡಿಯೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

-ವೇದವ್ಯಾಸ್‌ ಕಾಮತ್‌, ಶಾಸಕರು, ಮಂಗಳೂರು ದಕ್ಷಿಣ

---------

ಎಲ್ಲರ ಆಸ್ತಿಯನ್ನು ವಕ್ಫ್‌ ಕಬಳಿಸಿದ್ದು, ಜಾತಿ, ಮತ, ಧರ್ಮ ಬಿಟ್ಟು ಯೋಚಿಸಬೇಕಾಗಿದೆ. ವಕ್ಫ್‌ ಕಬಳಿಕೆ ಬಿಜೆಪಿಗೆ ಮಾತ್ರವಲ್ಲ ಎಲ್ಲ ಪಕ್ಷಗಳಿಗೂ ಸಮಸ್ಯೆ ಆಗಲಿದೆ. ಈ ಬಗ್ಗೆ ಸರ್ವಪಕ್ಷಗಳ ಮುಖಂಡರು ಆಲೋಚನೆ ಮಾಡಬೇಕು. ಭಿನ್ನಾಭಿಪ್ರಾಯ ಬದಿಗಿಟ್ಟು ಹೋರಾಟಕ್ಕೆ ಮುಂದಾಗಬೇಕು. ಸರ್ಕಾರ ನೋಟಿಸ್‌ ನೀಡುವುದನ್ನು ಮತ್ತೆ ಮುಂದುವರಿಸಿದರೆ ಹೋರಾಟ ನಡೆಸಲಾಗುವುದು.

-ಡಾ.ಭರತ್‌ ಶೆಟ್ಟಿ, ಶಾಸಕರು, ಮಂಗಳೂರು ಉತ್ತರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''