ಮೃತ ಜೀವಿತಾಗೆ ಅಪರಿಚಿತ ಯುವಕನೊಬ್ಬ ಪದೇ ಪದೇ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ವಿಷಯವನ್ನು ಯುವತಿ ತನ್ನ ಪೋಷಕರ ಗಮನಕ್ಕೆ ತಂದಾಗ, ಪೋಷಕರು ಸಹ ಆತನಿಗೆ ಫೋನ್ ಮಾಡಿ ಎಚ್ಚರಿಕೆ ನೀಡಿದ್ದರು.
ಅಪರಿಚಿತ ಯುವಕನೊಬ್ಬನಿಂದ ಪದೇ ಪದೇ ಫೋನ್ ಮಾಡಿ ಕಿರುಕುಳ
ಕನ್ನಡಪ್ರಭ ವಾರ್ತೆ ಬೇತಮಂಗಲ
ನಿರಂತರ ಮಾನಸಿಕ ಹಿಂಸೆ ಹಾಗೂ ಬೆದರಿಕೆಗೆ ಬೇಸತ್ತು ೧೬ ವರ್ಷದ ಯುವತಿ ನೇಣಿಗೆ ಶರಣಾಗಿರುವ ಘಟನೆ ದೊಡ್ಡಕಾರಿಯಲ್ಲಿ ನಡೆದಿದೆ.
ದೊಡ್ಡಕಾರಿ ಜೀವಿತ (೧೬) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಯುವತಿಯ ಸಾವಿಗೆ ಮೊಬೈಲ್ ಮೂಲಕ ನಿರಂತರವಾಗಿ ನೀಡಲಾಗುತ್ತಿದ್ದ ಮಾನಸಿಕ ಹಿಂಸೆಯೇ ಕಾರಣ ಎಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.
ಮೃತ ಜೀವಿತಾಗೆ ಅಪರಿಚಿತ ಯುವಕನೊಬ್ಬ ಪದೇ ಪದೇ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ವಿಷಯವನ್ನು ಯುವತಿ ತನ್ನ ಪೋಷಕರ ಗಮನಕ್ಕೆ ತಂದಾಗ, ಪೋಷಕರು ಸಹ ಆತನಿಗೆ ಫೋನ್ ಮಾಡಿ ಎಚ್ಚರಿಕೆ ನೀಡಿದ್ದರು. ಆದರೆ, ಅದಕ್ಕೆ ಜಗ್ಗದ ಆತ, ಯಾವುದೇ ಕಾರಣಕ್ಕೂ ನಿನ್ನನ್ನು ಬಿಡುವುದಿಲ್ಲ, ಕಾಲೇಜು ಬಳಿ ಬಂದು ಎತ್ತುಕೊಂಡು ಹೋಗುತ್ತೇನೆ ಎಂದು ಜೀವಿತಾಗೆ ಪ್ರಾಣಬೆದರಿಕೆ ಒಡ್ಡುತ್ತಿದ್ದ ಎಂದು ಪೋಷಕರು ತಿಳಿಸಿದ್ದಾರೆ.
ಕಿರುಕುಳ ನೀಡುತ್ತಿದ್ದ ಯುವಕ ತನ್ನ ಹೆಸರನ್ನು ಹೇಳುತ್ತಿರಲಿಲ್ಲ. ಆದರೆ, ಆತನ ಮೊಬೈಲ್ ಸಂಖ್ಯೆ ಟ್ರೂ ಕಾಲರ್‌ನಲ್ಲಿ ಪರಿಶೀಲಿಸಿದಾಗ ಮುಬಾರಕ್ ಪಾಷಾ ಎಂದು ಹೆಸರು ತೋರಿಸುತ್ತಿತ್ತು ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಂಬರ್ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಯುವತಿಯ ಪೋಷಕರು ಹಾಗೂ ದೊಡ್ಡಕಾರಿ ಗ್ರಾಮಸ್ಥರು ಬೇತಮಂಗಲ ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿ. ಯುವತಿಯ ಆತ್ಮಹತ್ಯೆಗೆ ಕಾರಣನಾದ ಕಿರಾತಕನನ್ನು ತಕ್ಷಣವೇ ಬಂಧಿಸಿ, ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ರಂಗಪ್ರವೇಶ ಮಾಡಿದ ಬೇತಮಂಗಲ ವೃತ್ತ ನಿರೀಕ್ಷಕ ಎಸ್.ಆರ್.ಜಗದೀಶ್ ಪೋಷಕರು ಮತ್ತು ಗ್ರಾಮಸ್ಥರ ಮನವಿ ಆಲಿಸಿ, ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ, ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ತಪ್ಪಿತಸ್ಥರನ್ನು ಶೀಘ್ರದಲ್ಲೇ ಬಂಧಿಸಿ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.