ಮದ್ದೂರು : ಕಾಂಗ್ರೆಸ್ ನಾಯಕರ ನಿರ್ಲಕ್ಷ್ಯಕ್ಕೆ ಬೇಸತ್ತ ತಾಲೂಕಿನ ಕೆಸ್ತೂರು ಗ್ರಾಮದ ಪ್ರಭಾವಿ ಕಾಂಗ್ರೆಸ್ ಮುಖಂಡ ಕೆ.ಟಿ. ರಾಜಣ್ಣ ತಮ್ಮ ಬೆಂಬಲಿಗರೊಂದಿಗೆ ಸೋಮವಾರ ಸಂಜೆ ಜೆಡಿಎಸ್ ಸೇರ್ಪಡೆಗೊಂಡರು.
ಗ್ರಾಮದ ತಮ್ಮ ನಿವಾಸದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ .ರಮೇಶ್ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗುವ ಮೂಲಕ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಬಹಳ ನಿರೀಕ್ಷೆ ಇಟ್ಟು ಬೆಂಬಲ ನೀಡುವ ಮೂಲಕ ಅಭ್ಯರ್ಥಿ ಕೆ.ಎಂ. ಉದಯ್ ಅವರನ್ನು ಶಾಸಕರಾಗಿ ಮಾಡುವುದಕ್ಕೆ ಹಗಲಿರುಳು ಶ್ರಮಿಸಿದ್ದೆವು. ಕಾಂಗ್ರೆಸ್ ನಾಯಕರ ದುರಾಡಳಿತ ಹಾಗೂ ಶಾಸಕ ಉದಯ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ತಳೆದಿರುವ ನಿರ್ಲಕ್ಷ್ಯ ಭಾವನೆಯಿಂದ ಬೇಸರಗೊಂಡು ಕಾಂಗ್ರೆಸ್ ತೊರೆಯುವ ನಿರ್ಧಾರ ಮಾಡಿದ್ದೇವೆ ಎಂದರು.
ಶಾಸಕ ಉದಯ್ ಈಗಷ್ಟೇ ರಾಜಕಾರಣದಲ್ಲಿ ಕಣ್ಣು ಬಿಡುತ್ತಿದ್ದಾರೆ. ಇಂತಹ ವ್ಯಕ್ತಿ ಎರಡು ಬಾರಿ ಮುಖ್ಯಮಂತ್ರಿ ಯಾಗಿದಂತಹ ರೈತರ ಕಣ್ಣೀರು ಒರೆಸುವ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.
ಮುಂದಿನ ದಿನಗಳಲ್ಲಿ ಅವರ ನಡವಳಿಕೆ ಅವರಿಗೆ ಮುಳು ವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಜೆಡಿಎಸ್ ಸೇರ್ಪಡೆಗೊಂಡ ಬಳಿಕ ಕೆ. ಟಿ. ರಾಜಣ್ಣ ಎಚ್ಚರಿಕೆ ನೀಡಿದರು.
ಈ ವೇಳೆ ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಚಿಕ್ಕ ತಿಮ್ಮೇಗೌಡ. ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಜಿಪಂ ಮಾಜಿ ಸದಸ್ಯ ಕೆ. ರವಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಬಿಳಿಯಪ್ಪ, ಗ್ರಾಪಂ ಸದಸ್ಯ ರಾದ ಸುರೇಶ, ನಿಂಗಪ್ಪ, ತಾಪಂ ಮಾಜಿ ಸದಸ್ಯ ಕೆ. ಟಿ.ನಾರಾಯಣಸ್ವಾಮಿ, ಮುಖಂಡರಾದ ಮರಿಯಪ್ಪ, ಮಲ್ಲನಕುಪ್ಪೆ ಮಧು, ಚಾಕನಕೆರೆ ಸುರೇಶ್ ಹಾಗೂ ಗ್ರಾಮದ ಮುಖಂಡರು ಇದ್ದರು.