ಸರ್ಕಾರಿ ಗೌರವಗಳೊಂದಿಗೆ ಟಿಜೆಎಸ್‌ ಜಾರ್ಜ್‌ ಅಂತ್ಯಕ್ರಿಯೆ

KannadaprabhaNewsNetwork |  
Published : Oct 06, 2025, 01:00 AM IST
TJS George 1 | Kannada Prabha

ಸಾರಾಂಶ

  ಹಿರಿಯ ಪತ್ರಕರ್ತ, ಪದ್ಮಭೂಷಣ ಟಿಜೆಎಸ್‌ ಜಾರ್ಜ್ ಅವರ ಅಂತ್ಯಕ್ರಿಯೆ ಭಾನುವಾರ ನಗರದ ಹೆಬ್ಬಾಳದ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ರಾಜಕೀಯ, ಪತ್ರಿಕೋದ್ಯಮ, ಸಾಹಿತ್ಯ, ವಿವಿಧ ಕ್ಷೇತ್ರಗಳ ಹಲವು ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ

  ಬೆಂಗಳೂರು :  ಶುಕ್ರವಾರ ನಿಧನರಾದ ಹಿರಿಯ ಪತ್ರಕರ್ತ, ಪದ್ಮಭೂಷಣ ಟಿಜೆಎಸ್‌ ಜಾರ್ಜ್ ಅವರ ಅಂತ್ಯಕ್ರಿಯೆ ಭಾನುವಾರ ನಗರದ ಹೆಬ್ಬಾಳದ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ರಾಜಕೀಯ, ಪತ್ರಿಕೋದ್ಯಮ, ಸಾಹಿತ್ಯ, ವಿವಿಧ ಕ್ಷೇತ್ರಗಳ ಹಲವು ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಅಗಲಿದ ಅಕ್ಷರ ಮಾಂತ್ರಿಕನಿಗೆ ವಿದಾಯ ಹೇಳಿದರು. ನಂತರ ಟಿಜೆಎಸ್‌ ಜಾರ್ಜ್‌ ಅವರ ಪುತ್ರ ಜೀತ್‌ ಥೈಲ್‌, ಪುತ್ರಿ ಶೇಬಾ ಥೈಲ್‌ ಸೇರಿ ಕುಟುಂಬ ಸದಸ್ಯರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಿತಾಗಾರದಲ್ಲಿ ಅಗ್ನಿಸ್ಪರ್ಶದ ಮೂಲಕ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿಸಿದರು.

ಸರ್ಕಾರಿ ಗೌರವ:

ಇದಕ್ಕೂ ಮುನ್ನ ಪೊಲೀಸ್‌ ಬ್ಯಾಂಡ್‌ ಮೂಲಕ ರಾಷ್ಟ್ರಗೀತೆ ನುಡಿಸಿ ಪೊಲೀಸರಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಮೃತರಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಬಳಿಕ ಅಧಿಕಾರಿಗಳು ಮೃತದೇಹದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಜಾರ್ಜ್‌ ಅವರ ಕುಟುಂಬದವರಿಗೆ ಹಸ್ತಾಂತರಿಸಿದರು.

ಗಣ್ಯರಿಂದ ಅಂತಿಮ ದರ್ಶನ:

ವಯೋಸಹಜ ಅನಾರೋಗ್ಯದಿಂದ ಟಿಜೆಎಸ್‌ ಜಾರ್ಜ್‌ ಅವರು ಶುಕ್ರವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯ ಶೈತ್ಯಾಗಾರದಿಂದ ಭಾನುವಾರ ಹೆಬ್ಬಾಳ ಚಿತಾಗಾರಕ್ಕೆ ತಂದು ಮಧ್ಯಾಹ್ನ 1.30ರಿಂದ 2.45ರವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ನಮನ ಸಲ್ಲಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಇದೇ ವೇಳೆ ವಿಧಾನ ಪರಿಷತ್‌ ಸದಸ್ಯರಾದ ನಜೀರ್‌ ಅಹಮದ್‌, ಕೆ.ಶಿವಕುಮಾರ್‌, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನಂ, ‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ, ಪುರವಣಿ ಮುಖ್ಯ ಸಂಪಾದಕ ಗಿರೀಶ್‌ ಹತ್ವಾರ್‌(ಜೋಗಿ), ಹಿರಿಯ ಪತ್ರಕರ್ತರಾದ ಎಚ್‌.ಆರ್‌.ರಂಗನಾಥ್‌, ವಿಶ್ವೇಶ್ವರ ಭಟ್‌, ಕೃಷ್ಣ ಪ್ರಸಾದ್‌, ಕೆ.ಆರ್‌.ಬಾಲಸುಬ್ರಹ್ಮಣ್ಯಂ ಸೇರಿ ಮಾಧ್ಯಮ ಕ್ಷೇತ್ರದ ಹಲವು ಪ್ರಮುಖರು, ಸ್ನೇಹಿತರು, ಓದುಗರು, ಬಂಧುಗಳು ನೂರಾರು ಸಂಖ್ಯೆಯಲ್ಲಿ ಅಗಲಿದ ಹಿರಿಯ ಪತ್ರಕರ್ತಗೆ ಅಂತಿಮ ನಮನ ಸಲ್ಲಿಸಿದರು.

ಭಾರತೀಯ ಪತ್ರಿಕೋದ್ಯಮದಲ್ಲಿ ಟಿಜೆಎಸ್‌ ಜಾರ್ಜ್ ಎಂದೇ ಪ್ರಖ್ಯಾತರಾದ ತಯ್ಯಿಲ್‌ ಜೇಕಬ್‌ ಸೋನಿ ಜಾರ್ಜ್‌ ಅವರು ಫ್ರೀ ಪ್ರೆಸ್‌ ಜರ್ನಲ್‌ನಿಂದ ಆರಂಭಗೊಂಡು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರೆಗೆ ಹಲವು ಮಾಧ್ಯಮಗಳಲ್ಲಿ ಏಳು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು.

PREV
Read more Articles on

Recommended Stories

8 ವರ್ಷದ ಬಾಲಕಿ ಹೊಟ್ಟೇಲಿ ಮೂರು ಕೆ.ಜಿ. ಕೂದಲು ಪತ್ತೆ! ಇದೊಂದು ಕಾಯಿಲೆ
ಜೈಪುರ ಸಾಹಿತ್ಯೋತ್ಸವ 2026ರಲ್ಲಿ ಬಾನು ಮುಷ್ತಾಕ್, ಸುಧಾಮೂರ್ತಿ