ಗಿರೀಶ್ ಮಾದೇನಹಳ್ಳಿ
ಕನ್ನಡಪ್ರಭ ವಾರ್ತೆ ಬೆಂಗಳೂರುಯುವ ಸಮೂಹಕ್ಕೆ ಡ್ರಗ್ಸ್ ರುಚಿ ಹತ್ತಿಸಿ ವ್ಯಸನಿಗಳನ್ನಾಗಿಸುವುದಷ್ಟೇ ಅಲ್ಲ, ದಂಧೆಯ ಹಣ ವರ್ಗಾವಣೆಗೂ ಅವರನ್ನು ಮಾದಕ ವಸ್ತು ಮಾರಾಟ ಜಾಲ ಬಳಸುತ್ತಿರುವ ಆತಂಕಕಾರಿ ಸಂಗತಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ತನಿಖೆಯಲ್ಲಿ ಪತ್ತೆಯಾಗಿದೆ.
ಇದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಐಟಿ-ಬಿಟಿ ವಲಯದ ಉದ್ಯೋಗಿಗಳನ್ನೇ ಹೆಚ್ಚು ಗುರಿಯಾಗಿಸಿ ಡ್ರಗ್ಸ್ ಮಾಫಿಯಾ ಕಾರ್ಯಾಚರಣೆ ನಡೆಸಿದೆ. ತಮ್ಮ ಬಲೆಗೆ ಬೀಳುವ ವ್ಯಸನಿಗಳ ಮೂಲಕವೇ ಡ್ರಗ್ಸ್ ಮಾರಾಟ ಮೂಲಕ ಸಂಪಾದಿಸುವ ಹಣದ ವಹಿವಾಟು ನಡೆಸುತ್ತದೆ. ಈ ಮಾಹಿತಿ ಲಭ್ಯವಾದ ಕೂಡಲೇ ಎಚ್ಚೆತ್ತಿರುವ ಸಿಸಿಬಿ ಡಿಸಿಪಿ-2 ರಾಜಾ ಇಮಾಮ್ ಕಾಸಿಂ ನೇತೃತ್ವದ ಮಾದಕ ವಸ್ತು ನಿಗ್ರಹ ದಳ, ಈ ಹಣ ವರ್ಗಾವಣೆ ಜಾಡು ಹಿಡಿದು ದಂಧೆಕೋರರ ಬೇಟೆಗಿಳಿದಿದೆ.ಈ ಹಣ ವರ್ಗಾವಣೆಗೆ ಬ್ರೇಕ್ ಹಾಕುವ ಸಲುವಾಗಿ ಸಿಸಿಬಿ ಅಧಿಕಾರಿಗಳು ಡ್ರಗ್ಸ್ ಜಾಲದ ಮಾರಾಟಗಾರರು ಮಾತ್ರವಲ್ಲದೆ ಗ್ರಾಹಕರ ಮೇಲೂ ನಿಗಾ ವಹಿಸಿದ್ದಾರೆ. ಅಲ್ಲದೆ ರಾಜಧಾನಿಯಲ್ಲಿ ನಿರಂತರವಾಗಿ ವ್ಯಸನಿಗಳನ್ನು ಕೇಂದ್ರೀಕರಿಸಿ ಸಿಸಿಬಿ ದಾಳಿಗಳನ್ನೂ ನಡೆಸಿದ್ದಾರೆ. ಈ ಮೂಲಕ ಹಣ ವರ್ಗಾವಣೆ ಜಾಲದ ಬೇರು ಕತ್ತರಿಸುವ ಪ್ರಯತ್ನವನ್ನೂ ಸಿಸಿಬಿ ನಡೆಸಿದೆ.
ಇತ್ತೀಚಿನ ಕೆಲ ಡ್ರಗ್ಸ್ ಮಾರಾಟ ಪ್ರಕರಣದ ತನಿಖೆ ವೇಳೆ ವ್ಯಸನಿಗಳ ಆರ್ಥಿಕ ವ್ಯವಹಾರ ಪರಿಶೀಲಿಸಿದಾಗ ದೊಡ್ಡಮಟ್ಟದ ಹಣ ವಿಲೇವಾರಿ ನಡೆದಿರುವುದು ಗೊತ್ತಾಯಿತು. ದುಬಾರಿ ಬೆಲೆಯ ಡ್ರಗ್ಸ್ ಖರೀದಿಗೆ ಆರ್ಥಿಕವಾಗಿ ಸಶಕ್ತರಾಗದೆ ಇದ್ದ ವ್ಯಸನಿಗಳಿಗೆ ಸುಲಭವಾಗಿ ಸಿಂಥೆಟಿಕ್ ಸಿಕ್ಕಿದೆ. ಇದರಿಂದ ಹಣ ವರ್ಗಾವಣೆ ಗುಮಾನಿ ಮೂಡಿದೆ ಎಂದು ಸಿಸಿಬಿ ಅಧಿಕಾರಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.ಗ್ರಾಹಕರೇ ಟಾರ್ಗೆಟ್ ಯಾಕೆ?:
ಮಾದಕ ವಸ್ತು ಜಾಲ ಹರಡುವಿಕೆಗೆ ಗ್ರಾಹಕರ ಗುರಿಯಾಗಿಸಿ ಕಾರ್ಯಾಚರಣೆ ನಡೆಸುವುದು ಮುಖ್ಯವಾಗುತ್ತದೆ. ಗ್ರಾಹಕರ ಮೇಲೆ ನಿಗಾವಹಿಸಿದರೆ ಪೂರೈಕೆದಾರ ಹಾಗೂ ಪೆಡ್ಲರ್‌ಗಳ ಸುಳಿವು ಸಿಗುತ್ತದೆ. ಗ್ರಾಹಕರ ಬಿಟ್ಟರೆ ನಮಗೆ ಎಲ್ಲಿಂದ ಡ್ರಗ್ಸ್ ಬರುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ಡ್ರಗ್ಸ್ ಸೇವಿಸಿದರೂ ಕಾನೂನು ಕ್ರಮ ಜರುಗಿಸುವುದಿಲ್ಲ ಎನ್ನುವ ಭಾವನೆ ಗ್ರಾಹಕರಿಗೆ ಬಂದರೆ ಡ್ರಗ್ಸ್ ಮಾರುಕಟ್ಟೆ ವಿಸ್ತರಣೆಯಾಗುವ ಅಪಾಯವಿದೆ ಎಂದು ಡಿಸಿಪಿ ಕಾಸಿಂ ಹೇಳುತ್ತಾರೆ.ಗ್ರಾಹಕರ ಮೇಲೆ ದಾಳಿ ವೇಳೆ ಕೆಲ ಬಾರಿ ಅಧಿಕಾರಿ-ಸಿಬ್ಬಂದಿಯಿಂದ ಕರ್ತವ್ಯ ಲೋಪವಾಗುತ್ತವೆ. ಆದರೆ ಈ ವಿಚಾರ ಆಯುಕ್ತರಿಗೆ ತಿಳಿದರೆ ತಪ್ಪಿತಸ್ಥ ಅಧಿಕಾರಿಗಳು ಬೆಲೆ ತೆರಬೇಕಾಗುತ್ತದೆ. ಹಾಗಂತ ಗ್ರಾಹಕರನ್ನು ಮುಕ್ತವಾಗಿ ಬಿಟ್ಟರೆ ಡ್ರಗ್ಸ್ ಜಾಲದ ವಿಸ್ತರಣೆ ಬೇರು ಕತ್ತರಿಸಲು ಕಷ್ಟವಾಗುತ್ತದೆ. ಹೀಗಾಗಿ ಗ್ರಾಹಕರ ಗುರಿಯಾಗಿಸಿದರೆ ಆ ದಂಧೆಯ ಆರ್ಥಿಕ ವಹಿವಾಟಿನ ಮಾಹಿತಿ ಸಹ ಸಿಗಲಿದೆ ಎಂದು ಡಿಸಿಪಿ ಅವರ ಅಭಿಪ್ರಾಯ.
-ಬಾಕ್ಸ್-ಗೌರಿಬಿದನೂರಿನಲ್ಲಿ ಟ್ಯಾಟೂ ಗ್ಯಾಂಗ್
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನಲ್ಲಿ ತಮ್ಮ ತಂಡದ ಸದಸ್ಯರ ಗುರುತಿಗೆ ಗಾಂಜಾ ದಂಧೆಕೋರರ ತಂಡ ಗಾಂಜಾ ಸೊಪ್ಪಿನ ಚಿತ್ರದ ಟ್ಯಾಟೂ ಹಾಕಿಸುವುದು ಬಯಲಾಗಿದೆ. ಸೊಪ್ಪಿನ ಮಾದರಿಯ ಟ್ಯಾಟೂ ನೋಡಿದರೆ ಮಾಹಿತಿ ನೀಡುವಂತೆ ಗೌರಿಬಿದನೂರಿನ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾರೆ.ಇತ್ತೀಚೆಗೆ ಗಾಂಜಾ ಮಾರಾಟ ಮಾಡುತ್ತಿದ್ದ ಪೆಡ್ಲರ್‌ವೊಬ್ಬನನ್ನು ಇನ್ಸ್‌ಪೆಕ್ಟರ್ ಕೆ.ಪಿ.ಸತ್ಯನಾರಾಯಣ್ ನೇತೃತ್ವದ ತಂಡ ಬಂಧಿಸಿತ್ತು. ಆಗ ಆರೋಪಿ ವಿಚಾರಣೆ ವೇಳೆ ಹಣೆ ಮೇಲೆ ಟ್ಯಾಟೂ ವಿಚಾರ ಬೆಳಕಿಗೆ ಬಂದಿದೆ. ಪೆಡ್ಲರ್‌ಗಳ ಹಣೆಯನ್ನು ನೋಡಿದ ಕೂಡಲೇ ಗ್ರಾಹಕರಿಗೆ ಈತನ ಬಳಿ ಗಾಂಜಾ ಲಭ್ಯವಿದೆ ಎಂಬ ಸೂಚನೆ ಸಿಗುತ್ತದೆ. ಇದೊಂದು ಗಾಂಜಾ ದಂಧೆಕೋರರ ಮಾರಾಟದ ಹೊಸ ದಾರಿ. ಬೆಂಗಳೂರಿನಲ್ಲಿ ಸಹ ಟ್ಯಾಟೂ ಗುರುತಿನ ಗಾಂಜಾ ದಂಧೆಕೋರರ ಮೇಲೆ ಪೊಲೀಸರು ನಿಗಾವಹಿಸಿದ್ದಾರೆ.
-ಬಾಕ್ಸ್-ಹೇಗೆ ಹಣ ವರ್ಗಾವಣೆ?
ಡ್ರಗ್ಸ್ ಖರೀದಿ ವ್ಯವಹಾರವನ್ನು ಬಹುತೇಕ ಆನ್‌ಲೈನ್ ಮೂಲಕವೇ ಪೆಡ್ಲರ್‌ಗಳು ನಡೆಸುತ್ತಾರೆ. ಆ ಗ್ರಾಹಕನಿಗೆ ಬ್ಯಾಂಕ್ ಖಾತೆ ವಿವರ ನೀಡಿದರೆ ಕ್ಯೂಆರ್ ಕೋಡ್ ಮೂಲಕ ಹಣ ವರ್ಗಾಯಿಸುತ್ತಾನೆ. ಈ ಹಣ ವರ್ಗಾವಣೆಗಾಗಿ ವ್ಯಸನಿಗಳ ಬ್ಯಾಂಕ್ ಖಾತೆಯನ್ನು ಬಳಸಲಾಗುತ್ತದೆ. ಅಲ್ಲಿಂದ ನಗದು ರೂಪದಲ್ಲಿ ಪೆಡ್ಲರ್‌ಗಳು ಪಡೆಯುತ್ತಾರೆ. ಕೆಲ ಬಾರಿ ಬೇರೊಂದು ಖಾತೆಗೆ ವರ್ಗಾಯಿಸಿ ಕಪ್ಪು ಹಣ ಸಕ್ರಮಗೊಳಿಸುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.-ಕೋಟ್-
ಡ್ರಗ್ಸ್ ಮಾರಾಟ ಜಾಲವು ವ್ಯಸನಿಗಳನ್ನು ಹಣ ವರ್ಗಾವಣೆಗೆ ಬಳಸುತ್ತಿರುವ ಸಂಗತಿ ಗೊತ್ತಾಗಿದೆ. ಆದರೆ ಈವರೆಗೆ ಈ ಹಣದ ವಹಿವಾಟಿಗೆ ಎಷ್ಟು ಖಾತೆಗಳು ಬಳಕೆಯಾಗಿವೆ ಹಾಗೂ ಎಷ್ಟು ಹಣ ಕೈ ಬದಲಾಗಿದೆ ಎಂಬುದು ಖಚಿತವಾಗಿಲ್ಲ. ಈ ಬಗ್ಗೆ ತನಿಖೆ ನಡೆದಿದೆ.-ರಾಜಾ ಇಮಾಮ್ ಕಾಸಿಮ್, ಡಿಸಿಪಿ-2, ಸಿಸಿಬಿ