ಸಾಧನೆ ಮಾಡಲು ಸಾಧಿಸುವ ಛಲವಿರಬೇಕು

KannadaprabhaNewsNetwork | Published : Mar 21, 2024 1:03 AM

ಸಾರಾಂಶ

ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರು ಸಾಧಿಸಬಲ್ಲಳು. ಅದಕ್ಕೆ ಹೆಣ್ಣನ್ನು ಕೀಳಾಗಿ ಕಾಣಬೇಡಿ ಎಂದು ಬೆಂಗಳೂರಿನ ವಿಜಯನಗರದ ಸಾಧನಾ ಐ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಸೆಂಟರ್ನ ನಿರ್ದೇಶಕಿ ಡಾ. ಜ್ಯೋತಿ ಕೆ.ಸಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರು ಸಾಧಿಸಬಲ್ಲಳು. ಅದಕ್ಕೆ ಹೆಣ್ಣನ್ನು ಕೀಳಾಗಿ ಕಾಣಬೇಡಿ ಎಂದು ಬೆಂಗಳೂರಿನ ವಿಜಯನಗರದ ಸಾಧನಾ ಐ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಸೆಂಟರ್‌ನ ನಿರ್ದೇಶಕಿ ಡಾ. ಜ್ಯೋತಿ ಕೆ.ಸಿ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಆಶ್ರಯದಲ್ಲಿ ಬುಧವಾರ ೨೦೨೩-೨೪ನೇ ಸಾಲಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಸ್ವಾಗತ ಕೋರುವ ಪುತ್ರಿಯರ ದಿನ - ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಧನೆ ಮಾಡಲು ಕಲಿಕೆಯ ಹಸಿವಿರಬೇಕು, ಹಾಗೆಯೇ ಸಾಧಿಸುವ ಛಲವು ಇರಬೇಕು. ಆಗ ನಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ. ಪರಿಶ್ರಮವಿಲ್ಲದೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂದರು.

ನೀವು ಗುರಿಯನ್ನು ತಲುಪಲು ಅನೇಕ ಅಡೆತಡೆಗಳು ಎದುರಾಗುತ್ತವೆ. ಆ ಅಡೆತಡೆಗಳನ್ನು ಎದುರಿಸಿ ನಿಲ್ಲಬೇಕು. ಜೊತೆಗೆ ನೀವು ಪರಿಶ್ರಮಪಟ್ಟರೆ ಮಾತ್ರ ಯಶಸ್ಸನ್ನು ಹೊಂದಲು ಸಾಧ್ಯವಾಗುತ್ತದೆ ಎಂದರು.

ನಮ್ಮ ಯಶಸ್ಸನ್ನು, ನಮ್ಮ ಗುರಿಯನ್ನು ತುಳಿಯಲು ಅನೇಕ ಜನರು ಕಾಯುತ್ತಾ ಕುಳಿತಿರುತ್ತಾರೆ. ನಮ್ಮನ್ನು ಅವಮಾನ ಮಾಡುವವರ ಮುಂದೆ ನಾವು ತಲೆ ಎತ್ತಿ ನಿಲ್ಲಬೇಕು. ನಮಗೆ ಅವಮಾನ ಮಾಡಿದವರನ್ನು ಎಂದಿಗೂ ಮರೆಯಬಾರದು. ನಮ್ಮ ಸಾಮರ್ಥ್ಯದ ಪರಿಚಯವನ್ನು ಅವರಿಗೆ ಮಾಡಿಸಬೇಕು. ಅಷ್ಟೇ ಅಲ್ಲದೇ ನಾವು ಏನನ್ನು ಮಾಡಲು ಹೊರಟಿದ್ದೇವೆ ಎಂಬುದರ ಸ್ಪಷ್ಟತೆ ನಮಗಿರಬೇಕು. ವಯಸ್ಸಿನಲ್ಲಿ ತಪ್ಪು ಮಾಡುವುದ ಸಹಜ. ಆದರೆ ನಮ್ಮ ಗುರಿಯನ್ನು ಮರೆತು, ಪ್ರೀತಿ ಪ್ರೇಮ ಎಂಬ ಅಮಲಿಗೆ ಬಿದ್ದು ನಿಮ್ಮ ತಂದೆ-ತಾಯಿಯ ಕನಸನ್ನು ಹುಸಿಗೊಳಿಸಬೇಡಿ. ನಿಮ್ಮ ಗುರಿಯತ್ತ ನಿಮ್ಮ ಲಕ್ಷ್ಯವಿರಲಿ ಎಂದರು.

ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೆ ಇರುತ್ತಾಳೆ ಎಂಬುದರಲ್ಲಿ ಎರಡು ಮಾತಿಲ್ಲ. ಸಾಧನೆ ಎಂಬುದು ಒಂದು ತಪಸ್ಸು. ಅದನ್ನು ಸಾಧಿಸುವ ದಾರಿ ಬಲು ಕಠಿಣ. ಇಂದಿನ ಸ್ಪರ್ಧಾತ್ಮ ಯುಗದಲ್ಲಿ ನಾವು ಗೆಲ್ಲಬೇಕಾದರೆ ಓದು ಒಂದೇ ಮಾರ್ಗ. ಕಷ್ಟಪಟ್ಟು ಬಿತ್ತಿದ ಬೀಜ ಸ್ವಲ್ಪ ತಡವಾದರು ಸಹ ಒಂದು ದಿನ ಫಲ ಕೊಟ್ಟೆ ಕೊಡುತ್ತದೆ. ಹಾಗೆ ನಮ್ಮ ಜೀವನದಲ್ಲಿ ನಾವು ಕಷ್ಟ ಪಟ್ಟು ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದಾಗ ಮಾತ್ರ ನಮ್ಮ ಜೀವನಕ್ಕೆ ಒಂದು ಅರ್ಥ ಸಿಗುತ್ತದೆ ಎಂದರು.

ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಶಾಂತಾದೇವಿ.ಟಿ ಸ್ವಾಗತಿಸಿದರು. ಡಾ.ಭಾರತಿ ಗಾಣಿಗೇರ ಅತಿಥಿಗಳನ್ನುಪರಿಚಯಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಡಾ.ಅಶ್ವಿನಿ ಕೆ.ಎನ್. ನಿರೂಪಿಸಿದರು. ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಆಶಾ ಭಾವಿಕರ ವಂದಿಸಿದರು.

Share this article