ಅರೆಭಾಷೆ ಗೌಡರು ಒಕ್ಕಲಿಗ ಸಮುದಾಯದ ಭಾಗವಾಗಿದ್ದರೂ ಅರೆಭಾಷೆ ಗೌಡರ ಶೈಕ್ಷಣಿಕ ಕಂದಾಯ ಸೇರಿದಂತೆ ಎಲ್ಲಾ ಮೂಲ ದಾಖಲೆಗಳಲ್ಲಿ ಗೌಡ ಎಂದೇ ನಮೂದಾಗಿರುತ್ತದೆ
ಕನ್ನಡಪ್ರಭ ವಾರ್ತೆ ಮಡಿಕೇರಿ
ಪ್ರಸ್ತುತ ನಡೆಯಲಿರುವ ಕರ್ನಾಟಕ ರಾಜ್ಯ ಸರ್ಕಾರದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಗಣತಿಯಲ್ಲಿ ಹಾಗೂ ಮುಂದಿನ ವರ್ಷ ಆರಂಭಗೊಳ್ಳಲಿರುವ ಕೇಂದ್ರ ಸರ್ಕಾರದ ಜಾತಿ ಗಣತಿಯಲ್ಲಿ ಜಾತಿಯ ಕಾಲಂನಲ್ಲಿ ಗೌಡ ಎಂದು, ಉಪಜಾತಿ ಅರೆಭಾಷೆ ಗೌಡ ಮತ್ತು ಮಾತೃಭಾಷೆ ಅರೆಭಾಷೆ ಎಂದು ಎಲ್ಲಾ ಅರೆಭಾಷೆ ಗೌಡರು ನಮೂದಿಸುವಂತೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಅವರು ಮನವಿ ಮಾಡಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೂಲತಃ ಅರೆಭಾಷೆ ಗೌಡರು ಒಕ್ಕಲಿಗ ಸಮುದಾಯದ ಭಾಗವಾಗಿದ್ದರೂ, ಅರೆಭಾಷೆ ಗೌಡರ ಶೈಕ್ಷಣಿಕ, ಕಂದಾಯ ಸೇರಿದಂತೆ ಎಲ್ಲಾ ಮೂಲ ದಾಖಲೆಗಳಲ್ಲಿ ಗೌಡ ಎಂದೇ ನಮೂದಾಗಿರುತ್ತದೆ. ಈಗ ಬದಲಾಯಿಸಿ ಮಾಹಿತಿ ನೀಡಿದರೆ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿಸಿದ್ದಾರೆ.ಈ ಕಾರಣದಿಂದ ಬೆಂಗಳೂರು, ಮೈಸೂರು, ಮಡಿಕೇರಿ ಮತ್ತು ಪುತ್ತೂರಿನಲ್ಲಿ ಸಮುದಾಯದ ಸಭೆಗಳನ್ನು ನಡೆಸಿ, ಕೊಡಗಿನ ಎಲ್ಲಾ ಗೌಡ ಸಮಾಜಗಳೊಂದಿಗೆ ಸಾಧಕ ಬಾಧಕಗಳನ್ನು ಚರ್ಚಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಗಣತಿಯಲ್ಲಿ ತಮ್ಮ ಜಾತಿಗೆ ಇರುವ ಇನ್ನೊಂದು ಹೆಸರು ಎಂಬ ಕಾಲಂ ಸಹ ಇದ್ದು, ಅಲ್ಲಿ ಒಕ್ಕಲಿಗ ಎಂದು ನಮೂದಿಸಲು ಕೋರಿದ್ದಾರೆ.ಉಪಜಾತಿಯಲ್ಲಿ ಅರೆ ಭಾಷೆಗೌಡ ಎಂಬುವುದನ್ನು ಪ್ರತ್ಯೇಕ ಕಾಲಂನಲ್ಲಿ ಸೇರಿಸಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಅದು ತಕ್ಷಣಕ್ಕೆ ಕಾರ್ಯಗತವಾಗದೇ ಇದ್ದರೂ ಇತರೆ ಎನ್ನುವ ಕಾಲಂ ನಲ್ಲಿ ಅರೆ ಭಾಷೆಗೌಡ ಎಂದು ಬರೆಸಲು ಅವಕಾಶವಿದೆ. ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಲು ಅರೆಭಾಷೆ ಗೌಡರಿಗೆ ಯಾವುದೇ ಸಮಸ್ಯೆ ಇಲ್ಲದಿರುವುದರಿಂದ, ಸಮುದಾಯ ಬಾಂಧವರು ಈ ಎಲ್ಲಾ ವಿವರಗಳನ್ನು ಗಮನದಲ್ಲಿರಿಸಿಕೊಂಡು ಕಡ್ಡಾಯವಾಗಿ ಎರಡೂ ಗಣತಿಯಲ್ಲಿ ಪಾಲ್ಗೊಂಡು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.