ಕುಶಲಕರ್ಮಿಗಳ ಆದಾಯ ಹೆಚ್ಚಳ, ಮಾರುಕಟ್ಟೆ ವ್ಯವಸ್ಥೆ ಅಗತ್ಯ

KannadaprabhaNewsNetwork |  
Published : Jul 20, 2026, 02:45 AM IST
ಪೋಟೋ: 15ಎಸ್‌ಎಂಜಿಎಕೆಪಿ03ಶಿವಮೊಗ್ಗದ ಇಲ್ಲಿನ ಜೆಎನ್ಎನ್‌ಸಿಇ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ‘ವಿಶ್ವಕರ್ಮ ಯೋಜನೆಯಡಿ ಬ್ರ‍್ಯಾಂಡಿಂಗ್ ಮತ್ತು ಮಾರ್ಕೆಟಿಂಗ್’ ಕುರಿತಾದ ಒಂದು ದಿನದ ಜಾಗೃತಿ ಕಾರ್ಯಕ್ರಮದಲ್ಲಿ ಮೊದಲ ಹಂತದ ತರಬೇತಿ ಪಡೆದ ಕುಶಲಕರ್ಮಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. | Kannada Prabha

ಸಾರಾಂಶ

ಶಿವಮೊಗ್ಗ ಘನತೆಯಿಂದ ಸಮಾಜದ ಒಳಿತಿಗಾಗಿ ದುಡಿಯುತ್ತಿರುವ ಕುಶಲಕರ್ಮಿಗಳ ಕರಕುಶಲ ಪರಂಪರೆಯನ್ನು ಉಳಿಸುವುದರ ಜೊತೆಗೆ, ಗ್ರಾಮೀಣ ಹಾಗೂ ಸಾಂಪ್ರದಾಯಿಕ ಕುಶಲಕರ್ಮಿಗಳ ಆದಾಯ ಹೆಚ್ಚಿಸುವುದು ಮತ್ತು ಅವರಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು ಅತಿ ಮುಖ್ಯವಾಗಿದೆ ಎಂದು ಎನ್‌ಇಎಸ್‌ ಸಂಸ್ಥೆಯ ಜಂಟಿ ನಿರ್ದೇಶಕ ಡಾ. ಪಿ.ನಾರಾಯಣ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಘನತೆಯಿಂದ ಸಮಾಜದ ಒಳಿತಿಗಾಗಿ ದುಡಿಯುತ್ತಿರುವ ಕುಶಲಕರ್ಮಿಗಳ ಕರಕುಶಲ ಪರಂಪರೆಯನ್ನು ಉಳಿಸುವುದರ ಜೊತೆಗೆ, ಗ್ರಾಮೀಣ ಹಾಗೂ ಸಾಂಪ್ರದಾಯಿಕ ಕುಶಲಕರ್ಮಿಗಳ ಆದಾಯ ಹೆಚ್ಚಿಸುವುದು ಮತ್ತು ಅವರಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು ಅತಿ ಮುಖ್ಯವಾಗಿದೆ ಎಂದು ಎನ್‌ಇಎಸ್‌ ಸಂಸ್ಥೆಯ ಜಂಟಿ ನಿರ್ದೇಶಕ ಡಾ. ಪಿ.ನಾರಾಯಣ್ ಹೇಳಿದರು.

ಇಲ್ಲಿನ ಜೆಎನ್ಎನ್‌ಸಿಇ ಕಾಲೇಜಿನಲ್ಲಿ ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಅಧೀನದ ಬೆಂಗಳೂರಿನ ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ‘ವಿಶ್ವಕರ್ಮ ಯೋಜನೆಯಡಿ ಬ್ರ‍್ಯಾಂಡಿಂಗ್ ಮತ್ತು ಮಾರ್ಕೆಟಿಂಗ್’ ಕುರಿತ ಒಂದು ದಿನದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಂಪ್ರದಾಯಿಕ ಕುಶಲಕರ್ಮಿಗಳು ಹಾಗೂ ಕರಕುಶಲ ವೃತ್ತಿದಾರರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೌಶಲ್ಯಕ್ಕೆ ಅತಿ ಹೆಚ್ಚಿನ ಮಹತ್ವ ಇದೆ. ಹಿಂದೆಲ್ಲ ಕೌಶಲ್ಯ ವಂಶಪಾರಂಪರ್ಯವಾಗಿ ಬರುತ್ತಿತ್ತು. ಈಗ ಹಾಗಿಲ್ಲ. ಕೌಶಲ್ಯದಲ್ಲ್ಲಿ ಉತ್ಸುಕತೆ ಇರುವವರಿಗೆ ಕಲಿಯುವ, ಅದರಲ್ಲಿ ತೊಡಗಿಸಿಕೊಳ್ಳುವ ವ್ಯವಸ್ಥೆ ಇದೆ. ಸರ್ಕಾರ ಕುಶಲಕರ್ಮಿಗಳಿಗಾಗಿ ಮೂಲ ವ್ಯವಸ್ಥೆ, ಬ್ಯಾಂಕ್ ಸಾಲ, ಸಬ್ಸಿಡಿ ಮೂಲಕ ಆರ್ಥಿಕ ಸಬಲೀಕರಣ, ತರಬೇತಿ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಸಹ ನೀಡುತ್ತಿದ್ದು ಕುಶಲಕರ್ಮಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಎಂಎಸ್‌ಎಂಇ ಡಿಎಫ್‌ಒ, ಸಹಾಯಕ ನಿರ್ದೇಶಕ ಶಿವಕುಮಾರ್ ಮಾತನಾಡಿ, ಪಿಎಂ ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳಿಗೆ ₹3 ಲಕ್ಷದವರೆಗೆ ಶೇ.5 ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರಕಲಿದೆ. ಪಿಎಂಇಜಿಪಿ ಯೋಜನೆಯಡಿ ಶೇ.15 ರಿಂದ 30 ಸಬ್ಸಿಡಿಯೊಂದಿಗೆ ₹50 ಲಕ್ಷದವರೆಗೆ ಸಾಲ ಸೌಲಭ್ಯ ದೊರೆಯಲಿದೆ. ಬ್ಯಾಂಕುಗಳ ತಮ್ಮ ಕೌಶಲ್ಯದ ಆಧಾರದ ಮೇಲೆ ಸಾಲ ನೀಡಲಿದ್ದು, ಕೌಶಲ್ಯವನ್ನು ಅತ್ಯುತ್ತಮವಾಗಿ ಬಳಕೆ ಮಾಡಿಕೊಂಡು ಸಾಲ ಪಡೆದ ಉದ್ದೇಶಕ್ಕಾಗಿಯೇ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಸುರೇಶ್ ಕುಮಾರ್ ಮಾತನಾಡಿ, 18 ವರ್ಷ ಮೇಲ್ಪಟ್ಟವರು ಪಿಎಂಇಜಿಪಿ ಯೋಜನೆಯಡಿ ಉತ್ಪಾದನೆ ಮತ್ತು ಸೇವಾ ವಲಯದಡಿ ಸಾಲ ಸೌಲಭ್ಯ ಪಡೆಯಬಹುದು. ನಗರ ಪ್ರದೇಶಕ್ಕೆ ಶೇ.15 ಮತ್ತು ಗ್ರಾಮೀಣ ಭಾಗದ ಫಲಾನುಭವಿಗಳಿಗೆ ಶೇ.25 ಹಾಗೂ ಎಸ್‌ಸಿ, ಎಸ್‌ಟಿ, ಮಹಿಳೆಯರಿಗೆ ಶೇ.35 ಸಬ್ಸಿಡಿಯಲ್ಲಿ ಸಾಲ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು.

ಅರುಣ ಕುಮಾರ್‌ ಮಾತನಾಡಿ, ವಿಶ್ವಕರ್ಮ ಯೋಜನೆಯಡಿ ನೋಂದಣಿಯಾಗಿ ತರಬೇತಿ ಪಡೆದು, ಪರೀಕ್ಷೆ ಮೂಲಕ ಅರ್ಹತೆ ಪಡೆದ ನಂತರ ಕಡಿಮೆ ಬಡ್ಡಿ ದರದಲ್ಲಿ ₹2 ರಿಂದ ₹3 ಲಕ್ಷ ಸಾಲ ಸೌಲಭ್ಯ, ₹4 ಸಾವಿರ ಸ್ಟೈಫಂಡ್ ಮತ್ತು ₹15 ಸಾವಿರ ಮೌಲ್ಯದ ಟೂಲ್ ಕಿಟ್ ನೀಡಿ ನಂತರ ಮುಂದುವರಿದ ತರಬೇತಿ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮೊದಲ ಹಂತದ ತರಬೇತಿ ಪಡೆದ ಕುಶಲಕರ್ಮಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಜೋಯ್ಸ್ ರಾಮಾಚಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂಎಸ್‌ಎಂಇ ಡಿಎಫ್‌ಒ, ಸಹಾಯಕ ನಿರ್ದೇಶಕರಾದ ಮರೋತಿ ಸುಬೆ, ಲೀಡ್ ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ ಮತ್ತಿತರರು ಇದ್ದರು.

- - -

(ಕೋಟ್‌) ವಿಶ್ವಕರ್ಮ ಉತ್ಪನ್ನಗಳ ರಫ್ತು ಪ್ರೋತ್ಸಾಹ ಮತ್ತು ಮಾರುಕಟ್ಟೆ ವಿಸ್ತರಣೆಗೆ ಈ ತರಬೇತಿ ಕಾರ್ಯಕ್ರಮ ಅತ್ಯಂತ ಸಹಕಾರಿಯಾಗಲಿದೆ. ಬ್ರ್ಯಾಂಡಿಂಗ್‌ ಮತ್ತು ಪ್ಯಾಕೇಜಿಂಗ್ ಬಗ್ಗೆ ಉತ್ತಮ ಮಾಹಿತಿ ಲಭಿಸಲಿದೆ. ಉತ್ಪಾದಕರು, ಉದ್ಯಮಿಗಳು ತಮ್ಮ ಉತ್ಪನ್ನಗಳಿಂದ ಲಾಭ ಪಡೆಯುವುದು ಹೇಗೆ ಮತ್ತು ಇತರರಿಗಿಂತ ಹೇಗೆ ಭಿನ್ನವಾಗಿದ್ದೇನೆ ಎಂಬುದನ್ನು ಕಂಡುಕೊಳ್ಳಬೇಕು.

- ಡಾ. ವೈ.ವಿಜಯಕುಮಾರ್, ಪ್ರಾಂಶುಪಾಲ.

- - -

-15ಎಸ್‌ಎಂಜಿಎಕೆಪಿ03:

ಕಾರ್ಯಕ್ರಮದಲ್ಲಿ ಮೊದಲ ಹಂತದ ತರಬೇತಿ ಪಡೆದ ಕುಶಲಕರ್ಮಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುದೀರ್ಘ ಕಾಲದಿಂದ ಗಣೇಶ ಸೇವೆಯಿಂದಾಗಿ ಅಧ್ಯಕ್ಷನಾಗುವ ಸೌಭಾಗ್ಯ
ಸಹ್ಯಾದ್ರಿ ಕೃಷಿ ಒನ್ ಮಾದರಿ ಘಟಕ ಆರಂಭ: ಡಾ.ಧನಂಜಯ್‌