- ಶಿಕಾರಿಪುರದಲ್ಲಿ ಹಿಂದೂ ಮಹಾಸಭಾ ಗಣಪತಿ ಸಮಿತಿ ನೂತನ ಅಧ್ಯಕ್ಷ ಸುರೇಶ್‌ ಹೂವಿನಮಂಡಿ ಹೇಳಿಕೆ

- - -

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸುದೀರ್ಘ ಕಾಲದಿಂದ ಪಟ್ಟಣದ ರಥಬೀದಿಯಲ್ಲಿನ ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿ ಸಮಿತಿ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ ಪರಿಣಾಮ ಇದೀಗ ಸಮಿತಿ ಅಧ್ಯಕ್ಷ ಹುದ್ದೆಯ ಸೌಭಾಗ್ಯ ದೊರೆತಿದೆ. ಈ ಬಾರಿ ಅತ್ಯಂತ ವಿಶಿಷ್ಟ, ಅದ್ಧೂರಿ ಹಾಗೂ ಸಂಭ್ರಮದ ಜತೆಗೆ ಪ್ರತಿಯೊಬ್ಬ ಹಿಂದೂ ಬಾಂಧವರನ್ನು ಒಳಗೊಂಡ ಗಣೇಶೋತ್ಸವ ಆಚರಣೆಗೆ ಎಲ್ಲ ರೀತಿಯಲ್ಲಿ ಪ್ರಯತ್ನಿಸಲಾಗುವುದು ಎಂದು ರಥಬೀದಿಯ ಹಿಂದೂ ಮಹಾಸಭಾ ಗಣಪತಿ ಸಮಿತಿ ನೂತನ ಅಧ್ಯಕ್ಷ ಸುರೇಶ್ ಹೂವಿನಮಂಡಿ ತಿಳಿಸಿದರು.

ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುದೀರ್ಘ ಕಾಲದಿಂದ ಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿಯಿಂದ ಪಟ್ಟಣದ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನ ಮುಂಭಾಗ ಗಣೇಶೋತ್ಸವ ಅಂಗವಾಗಿ ವಿಘ್ನೇಶ್ವರನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಅತ್ಯಂತ ಶ್ರದ್ಧೆ ಮೂಲಕ ಕೈಗೊಂಡ ಸೇವಾ ಕಾರ್ಯದಿಂದ ಪ್ರಸಕ್ತ ಸಾಲಿನ ಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಗೊಳಿಸಿದ್ದಾರೆ. ಇದು ಅತೀವ ಸಂತಸ ತಂದಿದೆ ಎಂದು ತಿಳಿಸಿದರು.


ಈ ಬಾರಿಯ ಗಣೇಶೋತ್ಸವದಲ್ಲಿ ಪ್ರತಿಷ್ಠಾಪಿಸುವ ವಿಘ್ನೇಶ್ವರನನ್ನು ಪ್ರತಿ ವರ್ಷದಂತೆ ಸತತ 21 ದಿನ ನಿತ್ಯ ಧಾರ್ಮಿಕ ಕಾರ್ಯದ ಜತೆ ಸಂಜೆ ವೇಳೆ ಸಂಪ್ರದಾಯ, ಸಂಸ್ಕೃತಿ ಬಿಂಬಿಸುವ ವಿವಿಧ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಭಕ್ತವರ್ಗ ಸಹಿತ ಎಲ್ಲ ವಯೋಮಾನದವರಿಗೆ ಸಂತೋಷದಿಂದ ವೀಕ್ಷಿಸುವ ಹೊಸ ಹೊಸ ಕಾರ್ಯಕ್ರಮ ಆಯೋಜಿಸುವ ಯೋಜನೆ ಹೊಂದಿದ್ದೇವೆ. ಈ ದಿಸೆಯಲ್ಲಿ ಪಟ್ಟಣದ ಎಲ್ಲ ಹಿರಿಯರ ಕಿರಿಯರ, ಸಂಘ ಸಂಸ್ಥೆಗಳ, ಅಂಗಡಿ ಮುಂಗಟ್ಟು ಮಾಲೀಕರು, ಸಂತೆ ವ್ಯಾಪಾಸ್ಥರು, ಕಿರಾಣಿ ವರ್ತಕರ ಸಲಹೆ- ಸಹಕಾರ ಪಡೆದು ವಿಭಿನ್ನವಾಗಿ ಬಹು ವಿಜೃಂಭಣೆಯಿಂದ ಹಬ್ಬ ಆಚರಿಸಲಾಗುವುದು. ಅಧ್ಯಕ್ಷರನ್ನಾಗಿಸಿ ಸರ್ವಾನುಮತದಿಂದ ಆಯ್ಕೆ ಮಾಡಿದ ಹಿಂದೂ ಸಮಾಜದ ಮುಖಂಡರು, ಹಿರಿಯರು, ಕಿರಿಯರ ಸಹಿತ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನೂತನ ಸಮಿತಿ ಖಜಾಂಚಿ, ಸತೀಶ್ ಗೊಲ್ಲರ್, ರಾಜ್ ಭಜರಂಗಿ ಮಾಜಿ ಅಧ್ಯಕ್ಷ ರವೀಂದ್ರ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

- - -

(ಬಾಕ್ಸ್‌) ಶಿಕಾರಿಪುರ ಪಟ್ಟಣದ ಹಿಂದೂ ಮಹಾಸಭಾ ಗಣಪತಿ ಅತ್ಯಂತ ಪ್ರಸಿದ್ಧವಾಗಿದೆ. ಹಲವು ವರ್ಷಗಳಿಂದ ನಿರಂತರ ಅದ್ಧೂರಿಯಾಗಿ, ಜಾತಿ- ಮತಭೇದಗಳಿಲ್ಲದೇ, ಸರ್ವರೂ ಪಾಲ್ಗೊಳ್ಳುವ ಮೂಲಕ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಪ್ರಸಕ್ತ ಸಾಲಿನ ನೂತನ ಸಮಿತಿಗೆ ವ್ಯಾಪಾರಸ್ಥರು, ಬೀದಿಬದಿ ವ್ಯಾಪಾರಸ್ಥರು, ಗುತ್ತಿಗೆದಾರರ ಸಹಿತ ಸರ್ವರೂ ಸಹಕರಿಸಬೇಕು.

- ಸಂತೋಷ್ ಗುಡ್ಡಳ್ಳಿ, ಮಾಜಿ ಅಧ್ಯಕ್ಷ.

- - -

-18ಕೆಎಸ್‌ಕೆಪಿ1: ಹಿಂದೂ ಮಹಾಸಭಾ ಗಣಪತಿ ಸಮಿತಿ ನೂತನ ಅಧ್ಯಕ್ಷ ಸುರೇಶ್ ಹೂವಿನಮಂಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.