- ಹೊನ್ನಾಳಿ ತಾಲೂಕು ಕ.ಸಾ.ಪ.ದಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಕವಿಗೋಷ್ಠಿ

- - -

ಹೊನ್ನಾಳಿ: ಕವಿಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ರೀತಿಯಲ್ಲಿ ಕವನಗಳನ್ನು ರಚಿಸಿ, ಜನರ ಮುಂದಿಡಬೇಕು ಎಂದು ಸಾಹಿತಿ ಹಾಗೂ ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಎಸ್.ರುದ್ರೇಶ್‌ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಸಹಯೋಗದಿಂದ ಶನಿವಾರ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕವನಗಳು ಮನುಷ್ಯನ ಋಣಾತ್ಮಕ ಅಂಶಗಳನ್ನು ಬದಲಾಯಿಸಿ, ಧನಾತ್ಮಕ ಗುಣಗಳನ್ನು ರೂಪಿಸಿಕೊಳ್ಳುವಂತಿರಬೇಕು. ಓದುಗನ ಮನಸ್ಸಿಗೆ ಒಪ್ಪಿ ಆಗಾಗ ಮೆಲುಕು ಹಾಕುವಂತಿದ್ದರೆ ಅಂತಹ ಕವನಗಳು ಸದಾ ನೆನಪಿನಲ್ಲಿರುತ್ತವೆ ಎಂದು ಹೇಳಿದರು.


ಪ್ರಸ್ತುತ ದಿನಗಳಲ್ಲಿ ಯುವ ಸಮುದಾಯ ಪುಸ್ತಗಳನ್ನು ಓದುವುದನ್ನೇ ಮರೆತಂತ್ತಿದೆ. ಜ್ಞಾನ ಪುಸ್ತಕದಿಂದ ಮಸ್ತಕ ತಲುಪಿದರೆ ಮಾತ್ರ ಗ್ರಂಥಗಳು, ಪುಸ್ತಕಗಳು ತಮ್ಮ ಸಾರ್ಥಕತೆ ಮೆರೆಯುತ್ತವೆ ಎಂದು ತಿಳಿಸಿದರು.

ಲೇಖಕ, ನಿವೃತ್ತ ಉಪನ್ಯಾಸಕ ಯು.ಎನ್. ಸಂಗನಾಳಮಠ ಆಶಯ ನುಡಿಗಳನ್ನಾಡಿ, ಉತ್ತಮ ಕವನ ರಚನೆಯಾಗಲು ಸತತ ಅಭ್ಯಾಸವೂ ಮುಖ್ಯವಾಗುತ್ತದೆ. ಕವಿಯಲ್ಲಿ ಅಡಗಿರುವ ಅಗಾಧವಾದ ಅಕ್ಷರಗಳ ಸಂಪತ್ತು ಕವನಗಳಲ್ಲಿ ಹೊರಬರಬೇಕು ಎಂದು ಹೇಳಿದರು.

ಸಾಹಿತಿ ಡಾ.ಕೊಟ್ರೇಶ್‌ ಉತ್ತಂಗಿ ಮಾತನಾಡಿ, ವಾಸ್ತವ ಅಂಶಗಳಿಗೆ ಒತ್ತು ನೀಡಿ ಕವನಗಳನ್ನು ರಚಿಸಬೇಕು. ಪ್ರಸ್ತುತ ದಿನಗಳಲ್ಲಿ ಯುದ್ಧಗಳು, ಪ್ರಕೃತಿ ಮೇಲೆ ದೌರ್ಜನ್ಯಗಳು, ರಾಜಕೀಯ ಮೇಲಾಟಗಳು ನಡೆಯುತ್ತಿವೆ. ಇಂತಹ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೆಲಸವಾಗಬೇಕು ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಉಪ ಪ್ರಾಂಶುಪಾಲೆ ಕೆ.ರೇಣುಕಮ್ಮ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ.ಮುರಿಗಪ್ಪ ಗೌಡ ಪ್ರಾಸ್ತಾವಿಕ ಮಾತನಾಡಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಎಂ.ಎಸ್. ರೇವಪ್ಪ, ಕಾರ್ಯದರ್ಶಿ ಕೆ.ಶೇಖರಪ್ಪ, ಖಜಾಂಚಿ ಡಿ.ಎಂ. ನಿಜಲಿಂಗಪ್ಪ, ಗೋವಿಂದಪ್ಪ, ನಿರ್ದೇಶಕ ಕತ್ತಿಗೆ ನಾಗರಾಜ್, ರಾಜು ಜಿ.ಎಚ್., ನಿವೃತ್ತ ಉಪನ್ಯಾಸಕ ಕೆ.ಸಿದ್ದಪ್ಪ ಹಾಗೂ ಇತರರು ಇದ್ದರು. ಕವಿಗೋಷ್ಠಿಯಲ್ಲಿ 20 ಹೆಚ್ಚು ಕವಿಗಳು ಕವನ ವಾಚನ ಮಾಡಿದರು.

- - -

-18ಎಚ್.ಎಲ್.ಐ3:

ಹೊನ್ನಾಳಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ನಿವೃತ್ತ ಡಿಎಚ್‌ಒ ಎಚ್.ಎಸ್.ರುದ್ರೇಶ್ ಮಾನಾಡಿದರು.