- ಗ್ಯಾರಂಟಿ ಕಚೇರಿಯಲ್ಲೇ ಬೆಸ್ಕಾಂ ಅಧಿಕಾರಿ-ಸಿಬ್ಬಂದಿ ಸೇವೆ ಲಭ್ಯ

- - -

ಹರಿಹರ: ಗೃಹಜ್ಯೋತಿ ಮರು ಪರಿಶೀಲನೆ ಪ್ರಕ್ರಿಯೆ ಸಮಸ್ಯೆಗಳ ಪರಿಹಾರಕ್ಕಾಗಿ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಸಮಿತಿ ತಾಲೂಕು ಅಧ್ಯಕ್ಷ ಎನ್.ಎಚ್. ಶ್ರೀನಿವಾಸ್ ನಂದಿಗಾವಿ ತಿಳಿಸಿದರು.

ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿನ ಗ್ಯಾರಂಟಿ ಅನುಷ್ಠಾನ ಸಮಿತಿಯ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಇತ್ತೀಚಿಗೆ ಗೃಹಜ್ಯೋತಿ ಫಲಾನುಭವಿಗಳ ಪರಿಶೀಲನೆಗಾಗಿ ಮರು ಪರಿಶೀಲನಾ ಪ್ರಕ್ರಿಯೆ ಆರಂಭ ಮಾಡಿದೆ. ಮರು ಪರಿಶೀಲನೆಗೆ ಬೆಸ್ಕಾಂ ಸಿಬ್ಬಂದಿ, ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಆದರೆ ಅವರ ಭೇಟಿ ಸಂದರ್ಭದಲ್ಲಿ ಕೆಲವು ಮನೆಯಲ್ಲಿ ಫಲಾನುಭವಿಗಳು ಲಭ್ಯವಾಗುತ್ತಿಲ್ಲ. ಅಂತಹವರ ಅನುಕೂಲಕ್ಕಾಗಿ ನಮ್ಮ ಕಚೇರಿಯಲ್ಲಿ ಒಂದು ವಾರ ಕಾಲ ಬೆಸ್ಕಾಂ ಅಧಿಕಾರಿ-ಸಿಬ್ಬಂದಿ ಹಾಜರಿದ್ದು, ಫಲಾನುಭವಿಗಳ ಮರು ಪರಿಶೀಲನೆ ಮಾಡುವರು. ಈ ವ್ಯವಸ್ಥೆಯ ಸದುಪಯೋಗ ತಾಲೂಕಿನ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ತಾಲೂಕಿನಲ್ಲಿ ಸುಮಾರು 46 ಸಾವಿರಕ್ಕೂ ಹೆಚ್ಚು ಗೃಹಜ್ಯೋತಿ ಫಲಾನುಭವಿಗಳಿದ್ದು, ಅವರಲ್ಲಿ ಈಗಾಗಲೇ 32 ಸಾವಿರದಷ್ಟು ಫಲಾನುಭವಿಗಳ ಮರುಪರಿಶೀಲನೆ ಪ್ರಕ್ರಿಯೆ ಮುಗಿದಿದೆ. ಉಳಿದ 14 ಸಾವಿರ ಫಲಾನುಭವಿಗಳ ಮರು ಪರಿಶೀಲನೆ ಪ್ರಕ್ರಿಯೆ ಆಗಬೇಕಾಗಿದೆ. ಒಂದು ವಾರ ಕಾಲ ನಮ್ಮ ಕಚೇರಿಯಲ್ಲಿ ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದು, ಪ್ರಕ್ರಿಯೆ ನಡೆಸಲಿದ್ದಾರೆ. ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್, ಮತ್ತು ಮೊಬೈಲ್, 2 ಪಾಸ್ ಪೋರ್ಟ್ ಫೋಟೋ, ರೇಷನ್ ಕಾರ್ಡ್, ಬಾಡಿಗೆದಾರರಾಗಿದ್ದರೆ, ಬಾಡಿಗೆ ಕರಾರು ಪತ್ರ, ವೋಟರ್ ಐ.ಡಿ.ಗಳೊಂದಿಗೆ ನಮ್ಮ ಕಚೇರಿಗೆ ಆಗಮಿಸಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.


ಗೃಹಜ್ಯೋತಿ ಪರಿಶೀಲನೆ ಅರ್ಜಿಯ ಭಾಗ-2ರಲ್ಲಿ ಗೃಹಜ್ಯೋತಿ ಫಲಾನುಭವಿಗಳಾಗಲು ಇಚ್ಛೆ ಇಲ್ಲದಿದ್ದಲ್ಲಿ ಸ್ಥಗಿತಗೊಳಿಸಲು ಅವಕಾಶ ಇರುತ್ತದೆ. ಇದನ್ನು ಎಲ್ಲ ಫಲಾನುಭವಿಗಳು ಗಮನಿಸಬೇಕು ಮತ್ತು ಇದಕ್ಕೆ ಒಪ್ಪಿಗೆ ನೀಡದೇ ಇರುವುದೇ ಉತ್ತಮ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಎಂ.ಸಂತೋಷ್ ನೋಟದವರ್, ನಗರಸಭೆ ನಾಮನಿರ್ದೇಶಿತ ಸದಸ್ಯರಾದ ಕೆ.ಬಿ.ರಾಜಶೇಖರ್, ಸಂತೋಷ್ ದೊಡ್ಡಮನಿ, ಕೃಷ್ಣಪ್ಪ ರಾಜನಹಳ್ಳಿ ಮುಂತಾದವರು ಉಪಸ್ಥಿತರಿದ್ದರು.

- - -

-19 HRR 04: