55 ವರ್ಷದೊಳಗಿನ ಎಲ್ಲ ನೇರ ಪಾವತಿ ಪೌರಕಾರ್ಮಿಕರನ್ನು ಕಾಯಂಗೊಳಿಸುವ ಪ್ರಕ್ರಿಯೆ ಸರ್ಕಾರಿ ಮಟ್ಟದಲ್ಲಿ ನಡೆಯುತ್ತಿದೆ. ಶೀಘ್ರದಲ್ಲೇ ಆದೇಶ ಹೊರಬೀಳಲಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳಿ ಅಶೋಕ್ ಸಾಲಪ್ಪ ತಿಳಿಸಿದ್ದಾರೆ.
- ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳಿ ಅಶೋಕ್ ಸಾಲಪ್ಪ ಹೇಳಿಕೆ
- - -ಕನ್ನಡಪ್ರಭ ವಾರ್ತೆ ಹರಿಹರ
55 ವರ್ಷದೊಳಗಿನ ಎಲ್ಲ ನೇರ ಪಾವತಿ ಪೌರಕಾರ್ಮಿಕರನ್ನು ಕಾಯಂಗೊಳಿಸುವ ಪ್ರಕ್ರಿಯೆ ಸರ್ಕಾರಿ ಮಟ್ಟದಲ್ಲಿ ನಡೆಯುತ್ತಿದೆ. ಶೀಘ್ರದಲ್ಲೇ ಆದೇಶ ಹೊರಬೀಳಲಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳಿ ಅಶೋಕ್ ಸಾಲಪ್ಪ ತಿಳಿಸಿದರು.ನಗರಸಭೆ ಆವರಣದಲ್ಲಿ ಶುಕ್ರವಾರ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಆಯೋಜಿಸಿದ್ದ ನೇರ ಪಾವತಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ, ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಆರೋಗ್ಯ ವಿಮಾ ಕಾರ್ಡ್ ವಿತರಿಸಿ ಅವರು ಮಾತನಾಡಿದರು.
ಯಾರ ಬೇಡಿಕೆಯೂ ಇಲ್ಲದಿದ್ದರೂ ಸ್ವಯಂ ಚಿಂತನೆಯಿಂದ ಶ್ರಮವಹಿಸಿ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಮಾರಣಾಂತಿಕ ಕಾಯಿಲೆಗಳಿಗೆ ₹5 ಲಕ್ಷವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾದ ಈ ಕಾರ್ಡ್ ಅನ್ನು, ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ 5,744 ಕಾರ್ಮಿಕರಿಗೆ ವಿತರಿಸಲಾಗಿದೆ. ಪ್ರಸ್ತುತ ಕಾರ್ಮಿಕರಿಗೆ ಮಾತ್ರ ಇರುವ ಈ ಸೌಲಭ್ಯವನ್ನು ಮುಂದಿನ ಬಜೆಟ್ ವೇಳೆಗೆ ಅವರ ಕುಟುಂಬ ವರ್ಗಕ್ಕೂ ವಿಸ್ತರಿಸುವ ಚಿಂತನೆ ಇದೆ ಎಂದರು.ಕಾರ್ಮಿಕರ ಮಕ್ಕಳ ಉನ್ನತ ವ್ಯಾಸಂಗ ಹಾಗೂ ವಿದೇಶಿ ಶಿಕ್ಷಣಕ್ಕೆ ನೆರವು, ನಿವೇಶನ ಇದ್ದವರಿಗೆ ಮನೆ ಕಟ್ಟಲು ಸಹಾಯಧನ, ಚಾಲನೆ ಬರುವ ಮಕ್ಕಳಿಗೆ ಕಸ ಸಾಗಣೆ (ಗಾರ್ಬೇಜ್) ಆಟೋ ವಿತರಿಸುವ ಸೌಲಭ್ಯಗಳೂ ಸಹ ಇದ್ದು, ಕಾರ್ಮಿಕ ಕುಟುಂಬಗಳು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಇದೇ ವೇಳೆ ಆರೋಗ್ಯ ಇಲಾಖೆಯ ''''''''ಎಚ್‌ಐವಿ ಜಾಗೃತಿ ಅಭಿಯಾನ-2026''''''''ರ ಕರಪತ್ರಗಳನ್ನು ಶಾಸಕರು ಬಿಡುಗಡೆ ಮಾಡಿದರು. ಪೌರ ಸೇವಾ ನೌಕರರ ಸಂಘ ಹಾಗೂ ನಗರಸಭೆಯಿಂದ ಶಾಸಕರು ಮತ್ತು ನಿಗಮದ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ. ಮಂಜುನಾಥ್ ಅವರು ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೆ ದೊರೆಯುವ ಸೌಲಭ್ಯಗಳ ವಿವರ ನೀಡಿದರು.ಜಿಲ್ಲಾ ಯೋಜನಾ ನಿರ್ದೇಶಕ ವೀರೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್ವರ್, ನಿಕಟಪೂರ್ವ ಎಂಡಿ ಕುಮಾರ್, ಪೌರಾಯುಕ್ತೆ ವಿ. ಈರಮ್ಮ, ನಿಗಮದ ನಾಮನಿರ್ದೇಶಿತ ಸದಸ್ಯ ಶಂಕರ್, ಪೌರ ಸೇವಾ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಗುರುನಾಥ್, ಜಿಲ್ಲಾಧ್ಯಕ್ಷ ಎಚ್. ರಮೇಶ್, ಹರಿಹರ ಘಟಕದ ಅಧ್ಯಕ್ಷ ಪಿ.ಎಚ್. ಸದಾಶಿವ, ಉಪಾಧ್ಯಕ್ಷೆ ಉಷಾ, ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ರವಿ ಮತ್ತಿತರರಿದ್ದರು.
- - -(ಕೋಟ್) ಪರಿಸರ ಸ್ವಚ್ಛವಾಗಿಡುವ ಪೌರಕಾರ್ಮಿಕರು ದುಶ್ಚಟಗಳಿಂದ ತಮ್ಮ ಆರೋಗ್ಯ ಕೆಡಿಸಿಕೊಳ್ಳಬಾರದು. ಇಷ್ಟು ದಿನ ನೀವು ಪೊರಕೆ ಹಿಡಿದಿದ್ದು ಸಾಕು. ಮುಂದಿನ ದಿನಗಳಲ್ಲಿ ಈ ಕೆಲಸಕ್ಕೆ ಯಂತ್ರಗಳು ಬರಲಿವೆ. ಆ ಯಂತ್ರಗಳನ್ನು ಚಲಾಯಿಸಲು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರ ಕೈಗೆ ಪೆನ್ನು ಕೊಡಿ.
- ಬಿ.ಪಿ. ಹರೀಶ್, ಶಾಸಕ, ಹರಿಹರ ಕ್ಷೇತ್ರ.- - -
-27HRR.06:ಹರಿಹರದಲ್ಲಿ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸಿದರು.