ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಏಪ್ರಿಲ್ ತಿಂಗಳ ಅಂತ್ಯದವರೆಗೆ ರಾಜ್ಯಾದ್ಯಂತ 200 ಕೋಟಿ ಮಹಿಳೆಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದು ಇದೊಂದು ಮಹತ್ವದ ಸಾಧನೆ ಎನ್ನುವಂತೆ ರಾಜ್ಯ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ. ಆದರೆ, ಅದರಿಂದ ಆಗಿರುವ ತೊಂದರೆಗಳ ಬಗ್ಗೆ ಮಾತ್ರ ಗಮನ ಹರಿಸುತ್ತಿಲ್ಲ.
ಉಚಿತ ಬಸ್ ಪ್ರಯಾಣದಿಂದ ಸಾರಿಗೆ ಬಸ್‌ಗಳಲ್ಲಿ ಮಹಿಳೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ಸುಗಳ ಸಂಖ್ಯೆ ಹೆಚ್ಚಿಸದ ಪರಿಣಾಮ ದಿನನಿತ್ಯ ಹಣಕೊಟ್ಟು ಪ್ರಯಾಣಿಸುವ ಪ್ರಯಾಣಿಕರಿಗೆ ನರಕ ಯಾತನೆಯಾಗುತ್ತಿದೆ.ಸಾರಿಗೆ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದಿಂದಾಗಿ ಹಣಕೊಟ್ಟು ಪ್ರಯಾಣಿಸುವವರು ಬಸ್ ಹತ್ತಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ಹತ್ತುವ ವೇಳೆ ಉಂಟಾಗುವ ನೂಕು ನುಗ್ಗಲಿನಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಈಗಾಗಲೇ ನೂರಾರು ಪ್ರಯಾಣಿಕರು ಪಿಕ್ ಪಾಕೆಟ್ ಕಳ್ಳರ ಕೈಚಳಕ್ಕಕೆ ಬಲಿಯಾಗಿದ್ದಾರೆ.
ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಹಾಗೂ ವಯೋವೃದ್ಧರು, ದೈನಂದಿನ ಕೆಲಸ ಕಾರ್ಯಗಳಿಗಾಗಿ ಪಟ್ಟಣಕ್ಕೆ ಆಗಮಿಸುವ ಸಾರ್ವಜನಿಕರು ಮತ್ತು ಪಟ್ಟಣದ ಆಸ್ಪತ್ರೆಗೆ ಬರುವ ರೋಗಿಗಳು ಬಸ್ ಹತ್ತಲು ಆಗುತ್ತಿಲ್ಲ. ಒಂದೆಡೆ ಉಚಿತ ಬಸ್ ಪ್ರಯಾಣವನ್ನು ಸಾಧನೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರ ಪ್ರಯಾಣಿಕರ ಸುಲಲಿತ ಸಂಚಾರಕ್ಕೆ ಯಾವುದೇ ಕ್ರಮ ವಹಿಸಿಲ್ಲ.
ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಪ್ರತಿದಿನ ಬಸ್ ಮೂಲಕ ಸಂಚರಿಸುವ ಸರ್ಕಾರಿ ನೌಕರರಿಗೆ, ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ, ಶಾಲಾ ಕಾಲೇಜುಗಳಿಗೆ ಹೋಗಲು ತುಂಬಾ ತೊಂದರೆಯಾಗುತ್ತಿದೆ. ಯಾವುದೇ ಗ್ಯಾರಂಟಿ ಕೊಡಬೇಕಾದರೆ ಮೊದಲು ಅದರ ಸಾಧಕ ಬಾಧಕ ನೋಡಬೇಕು. ಆ ನಂತರ ತಜ್ಞರ ವರದಿ ಆಧರಿಸಿ ಅನುಷ್ಟಾನಗೊಳಿಸಬೇಕು. ಆದರೆ, ಮತ ಬ್ಯಾಂಕ್ ರಾಜಕಾರಣದ ಉದ್ದೇಶದಿಂದ ಶಕ್ತಿ ಯೋಜನೆ ಜಾರಿಗೊಂಡಿದ್ದು ಇದರಿಂದ ಹಣಕೊಟ್ಟು ಪ್ರಯಾಣಿಸುತ್ತಿರುವ ಸಾರ್ವಜನಿಕರಿಗೆ ಕಿರುಕುಳ ನಿರಂತರವಾಗಿದೆ ಎಂದು ಪುರುಷ ಪ್ರಯಾಣಿಕರು ದೂರಿದ್ದಾರೆ.
ಸರ್ಕಾರ ಜನರಿಗೆ ಕಲ್ಪಿಸಿರುವ ಗ್ಯಾರಂಟಿಗಳನ್ನು ನಾವು ಸ್ವಾಗತಿಸುತ್ತೇವೆ. ಉಚಿತ ಬಸ್‌ನಲ್ಲಿ ಅನಾವಶ್ಯಕವಾಗಿ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ದಿನನಿತ್ಯ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಮಹಿಳೆಯರಿಗೆ ಶಕ್ತಿ ಯೋಜನೆ ನಿಲ್ಲಿಸಿ ಅದರ ಬದಲು ವಯಸ್ಸಾದವರಿಗೆ ಮತ್ತು ಶಾಲಾ-ಕಾಲೇಜಿಗೆ ಹೋಗುವ ಮಕ್ಕಳಿಗೆ ಉಚಿತ ಬಸ್ ಪ್ರಯಾಣದ ಯೋಜನೆ ರೂಪಿಸಬೇಕು.