ಕನ್ನಡಪ್ರಭ ವಾರ್ತೆ ಸಾಗರ
ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರಿಗೆ ಗೌರವ ಡಾಕ್ಟರೇಟ್ ಪದವಿ ನೀಡುವಂತೆ ಪ್ರಾಂತ್ಯ ಆರ್ಯ ಈಡಿಗರ ಸಂಘದ ವತಿಯಿಂದ ಬುಧವಾರ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು.ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಸಮಾಜವಾದಿ ಡಾ.ರಾಮಮನೋಹರ ಲೋಹಿಯಾ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ತಮ್ಮ ೯೪ರ ಇಳಿ ವಯಸ್ಸಿನಲ್ಲೂ ಅದನ್ನು ಪಾಲಿಸಿಕೊಂಡು ಬಂದಿದ್ದಾರೆ. ಬಡವರು, ದೀನದಲಿತರು, ಶೋಷಿತರು, ಹಿಂದುಳಿದ ವರ್ಗಗಳ ಜನರ ಅಪಾರ ಮೆಚ್ಚುಗೆಯನ್ನು ಕಾಗೋಡು ಗಳಿಸಿದ್ದಾರೆ. ಅಧಿಕಾರವಿರಲಿ, ಇಲ್ಲದಿರಲಿ ಸದಾ ಜನರ ಬಗ್ಗೆ ತುಡಿಯುವ ಮನಸ್ಸು ಕಾಗೋಡು ತಿಮ್ಮಪ್ಪನವರದ್ದು. ಈ ವಯಸ್ಸಿನಲ್ಲೂ ಕ್ಷೇತ್ರದ ಮೂಲೆಮೂಲೆಗೆ ಸಂಚರಿಸಿ ಅಧಿಕಾರಿಗಳು ಅನುಷ್ಠಾನಗೊಳಿಸಿದ ಕಾಮಗಾರಿಗಳನ್ನು ವೀಕ್ಷಿಸಿ ಸದಾ ಜನಪರವಾದ ಚಿಂತನೆಯನ್ನು ತೋರಿಸುತ್ತಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಕಾಗೋಡಿನಂತಹ ಪುಟ್ಟ ಗ್ರಾಮದಲ್ಲಿ ಹುಟ್ಟಿರುವ ಕಾಗೋಡು ತಿಮ್ಮಪ್ಪನವರು ಸಮಾಜವಾದಿ ತತ್ವಾದರ್ಶಗಳನ್ನು ಇರಿಸಿಕೊಂಡು, ರಾಜಕೀಯ ಕ್ಷೇತ್ರ ಪ್ರವೇಶ ಮಾಡಿದವರು. ೧೯೭೨ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿ ತಮ್ಮ ರಾಜಕೀಯ ಜೀವನ ಆರಂಭಿಸಿದ್ದಾರೆ. ಗೇಣಿ ರೈತರ ಬವಣೆ ಬಲ್ಲವರಾಗಿದ್ದ ಕಾಗೋಡು ತಿಮ್ಮಪ್ಪನವರು ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೆ ತರುವಲ್ಲಿ ಪ್ರಮುಖಪಾತ್ರ ವಹಿಸಿದ್ದು ಉಲ್ಲೇಖಾರ್ಹ. ಹಿಂದುಳಿದ ವರ್ಗಗಳನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತುವಲ್ಲಿ ಅವರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಇವರ ಸುದೀರ್ಘ ರಾಜಕೀಯ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ಕೃಷಿ ವಿಶ್ವ ವಿದ್ಯಾಲಯದಿಂದ ಸಮಾಜ ಸೇವೆ ಅಡಿಯಲ್ಲಿ ಘಟಿಕೋತ್ಸವ ಸಂದರ್ಭದಲ್ಲಿ ಕಾಗೋಡು ತಿಮ್ಮಪ್ಪನವರಿಗೆ ಗೌರವ ಡಾಕ್ಟರೇಟ್ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.ಸಂಘದ ಅಧ್ಯಕ್ಷ ಬಿ.ಎಂ.ಮಂಜಪ್ಪ, ಟಿ.ವಿ.ಪಾಂಡುರಂಗ, ತಾರಾಮೂರ್ತಿ, ಟಿ.ಪರಮೇಶ್ವರ್, ಮಂಡಗಳಲೆ ಹುಚ್ಚಪ್ಪ, ಚಂದ್ರು ಕರ್ಕಿಕೊಪ್ಪ, ತುಕಾರಾಮ ಶಿರವಾಳ, ಗಿರೀಶ್ ಕೋವಿ, ಹೊಳೆಯಪ್ಪ, ಮಹಾಬಲ ಕೌತಿ ಇನ್ನಿತರರಿದ್ದರು.