ಸಂವಿಧಾನದಿಂದ ಸಮಾನತೆ ಕಾಣಲು ಸಾಧ್ಯವಾಗಿದೆ : ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ

KannadaprabhaNewsNetwork |  
Published : Jan 30, 2025, 01:46 AM ISTUpdated : Jan 30, 2025, 01:23 PM IST
ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ಬುಧವಾರ ಭದ್ರಾವತಿ ಹಳೇನಗರದ ಶ್ರೀ ವೀರಶೈವ ಸಭಾಭವನದಲ್ಲಿ ಕ.ದ.ಸಂ.ಸ-೫೦ ನೆನಪಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಜಾಗೃತಿ ಸಮಾವೇಶ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮೈಸೂರು ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ  ಸ್ವಾಮೀಜಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. | Kannada Prabha

ಸಾರಾಂಶ

 ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಈ ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನದಿಂದಾಗಿ ನಾವೆಲ್ಲರೂ ಸಮಾನತೆ ಕಾಣಲು ಸಾಧ್ಯವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಭದ್ರಾವತಿ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಈ ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನದಿಂದಾಗಿ ನಾವೆಲ್ಲರೂ ಸಮಾನತೆ ಕಾಣಲು ಸಾಧ್ಯವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ಹಳೇನಗರದ ಶ್ರೀ ವೀರಶೈವ ಸಭಾಭವನದಲ್ಲಿ ಕ.ದ.ಸಂ.ಸ-೫೦ ನೆನಪಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಈ ದೇಶದಲ್ಲಿ ಪ್ರತಿಯೊಂದನ್ನು ಹೋರಾಟ, ಸಂಘರ್ಷದ ಮೂಲಕ ಪಡೆದುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಈ ದೇಶದ ಸಂವಿಧಾನದಿಂದಾಗಿ ನಾವೆಲ್ಲರೂ ಒಗ್ಗಟ್ಟಿನಿಂದ, ಸಮಾನತೆ ಹಾಗೂ ನೆಮ್ಮದಿಯಿಂದ ಬದುಕುವಂತಾಗಿದೆ. ಒಂದು ವೇಳೆ ಸಂವಿಧಾನ ರಚನೆಯಾಗದಿದ್ದಲ್ಲಿ ಈ ದೇಶದ ಜನರ ಸ್ಥಿತಿ ಕಲ್ಪಿಸಿಕೊಳ್ಳುವುದು ಅಸಾಧ್ಯವಾಗುತ್ತಿತ್ತು ಎಂದರು. ಪ್ರಸ್ತುತ ನಾವುಗಳು ಸಂವಿಧಾನ ತಿಳಿದುಕೊಳ್ಳಬೇಕಾಗಿದೆ. 

ಇಂತಹ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ. ಮನೆ ಮನೆಗಳಲ್ಲಿ ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದು ಹೇಳಿದರು. ಸಮಾವೇಶದ ದಿವ್ಯ ಸಾನ್ನಿಧ್ಯ ವಹಿಸಿದ್ದ ಮೈಸೂರು ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಸಂವಿಧಾನ ಯಾಕೆ ಓದಬೇಕು ಎಂಬುದನ್ನು ಅರ್ಥಮಾಡಿಕೊಂಡಾಗ ಮಾತ್ರ ಸಂವಿಧಾನ ವಿರೋಧಿಸುವವರಿಗೆ ಉತ್ತರ ನೀಡಲು ಸಾಧ್ಯ. 

ಪ್ರಸ್ತುತ ಅಂಬೇಡ್ಕರ್‌ರವರ ಸಂವಿಧಾನ ಬದಲಿಸಿ ಮತ್ತೊಂದು ಸಂವಿಧಾನ ರಚಿಸುತ್ತೇವೆ ಎಂಬುವವರ ಮನಸ್ಥಿತಿಗಳನ್ನು ನಾವುಗಳು ಅರ್ಥಮಾಡಿಕೊಳ್ಳಬೇಕಾಗಿದೆ. ಮೇಲ್ವರ್ಗದವರು ಪುನಃ ಈ ದೇಶದಲ್ಲಿ ಅಸ್ಪೃಶ್ಯತೆ, ಅಸಮಾನತೆ ಹಾಗೂ ಶೋಷಣೆಯ ಬದುಕು ಎದುರು ನೋಡುತ್ತಿದ್ದಾರೆ. ಇದಕ್ಕೆ ನಾವುಗಳು ಅವಕಾಶ ನೀಡಬಾರದು. ಇನ್ನೂ ಹೆಚ್ಚು ಜಾಗೃತರಾಗಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಸಂವಿಧಾನ ಜಾಗೃತಿ ಸಮಾವೇಶಗಳು ಸಹಕಾರಿಯಾಗಿವೆ ಎಂದರು. 

ವಿಧಾನ ಪರಿಷತ್ ಸದಸ್ಯ ಎಚ್.ಪಿ.ಸುಧಾಮದಾಸ್, ಮಾಜಿ ಸಂಸದ ಚಂದ್ರಪ್ಪ, ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್, ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಕೃಷ್ಣಪ್ಪ, ಪ.ಜಾ ಮತ್ತು ಪಂ. ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ನಗರಸಭೆ ಅಧ್ಯಕ್ಷ ಎಂ.ಮಣಿ ಎಎನ್‌ಎಸ್, ಹಿರಿಯ ಸದಸ್ಯ ಬಿ.ಕೆ.ಮೋಹನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಶಿವಕುಮಾರ್, ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಮುಖಂಡರಾದ ಬಿ.ಕೆ.ಜಗನ್ನಾಥ್, ಎಸ್.ಕುಮಾರ್, ಬಿ.ಎಸ್.ಗಣೇಶ್, ಸಿ.ಜಯಪ್ಪ, ಕೆ.ಎ.ರಾಜಕುಮಾರ್, ಈಶ್ವರಪ್ಪ, ಜಿಂಕ್‌ಲೈನ್ ಮಣಿ, ಕಾಣಿಕ್‌ರಾಜ್, ಪರಮೇಶಿ, ಎನ್.ಗೋವಿಂದ, ಎಸ್.ಉಮಾ, ಶಾಂತ, ರೇಖಾ, ಶ್ರೀಧರ್ ಮತ್ತಿತರರಿದ್ದರು.ಸಮಿತಿ ತಾಲೂಕು ಸಂಚಾಲಕ ಆರ್.ಸಂದೀಪ್ ಅಧ್ಯಕ್ಷತೆ ವಹಿಸಿದ್ದರು. ಪುಷ್ಪರಾಜ್ ತಂಡದವರಿಂದ ಕ್ರಾಂತಿ ಗೀತೆ ಹಾಡಲಾಯಿತು. ತಾಲೂಕು ಸಂಘಟನಾ ಸಂಚಾಲಕ ಕೆ.ಸುರೇಶ್ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಚಿನ್ನಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ರಂಗನಾಥ್ ನಿರೂಪಿಸಿದರು.

ಸಮಾವೇಶಕ್ಕೂ ಮೊದಲು ನಗರದ ಬಿ.ಎಚ್.ರಸ್ತೆ, ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ ನೂತನ ೧೨ ಅಡಿ ಎತ್ತರದ ಕಂಚಿನ ಪ್ರತಿಮೆಗೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಇನ್ನಿತರರು ಮಾಲಾರ್ಪಣೆ ಮಾಡುವ ಮೂಲಕ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಜಾಗೃತಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳ ಮದುವೆ ಸಂಬಂಧ ಹತ್ಯೆ ಯತ್ನಕ್ಕೊಳಗಾಗಿದ್ದ ಮಹಿಳೆ ಸಾವು
ಕೋಗಿಲು ಒತ್ತುವರಿಗೆ ಇಬ್ಬರು ಖಾಕಿಬಲೆಗೆ