)
ಉಡುಪಿ: ಬಾಲ್ಯದಿಂದಲೂ ಉಡುಪಿ ಕೃಷ್ಣಮಠ ಮತ್ತು ಇಲ್ಲಿನ ಪರ್ಯಾಯೋತ್ಸವಗಳು ಉಡುಪಿಯ ಜನತೆಗೆ ಭಕ್ತಿ ಮತ್ತು ಸಾಧನೆಗೆ ಬಹು ದೊಡ್ಡ ಪ್ರೇರಣೆಗಳಾಗಿವೆ. ನನ್ನ ಜೀವನದಲ್ಲೂ ಕೃಷ್ಣಮಠ ಬಹಳ ಪ್ರಭಾವ ಬೀರಿದೆ. ಚಿಕ್ಕಂದಿನಿಂದ ಕೃಷ್ಣ ಮಠದ ಪರ್ಯಾಯೋತ್ಸವವನ್ನು ನೋಡುತ್ತಾ ಸಂಭ್ರಮಿಸುತಿದ್ದ ನನಗೆ ನಾನು ಒಂದು ದಿನ ಇದೇ ಪರ್ಯಾಯೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷನಾಗುತ್ತೇನೆ ಎಂಬ ಯೋಚನೆ ಕನಸಿನಲ್ಲೂ ಬಂದಿರಲಿಲ್ಲ.
ಜೀವನದ ಅತ್ಯಂತ ಸಂತಸವಿದು: ಕಳೆದ ಆರೇಳು ತಿಂಗಳಿಂದ ತಮ್ಮ ತಂಡದೊಂದಿಗೆ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವದ ವೈಭವಪೂರ್ಣ ಆಯೋಜನೆಯ ಹೊಣೆಯನ್ನು ಹೊತ್ತು ದುಡಿಯುತ್ತಿರುವ ಯಶ್‌ಪಾಲ್ ಸುವರ್ಣರು, ತಮ್ಮ ಗುರುಗಳೆಂದೇ ಸ್ಮರಿಸುವ ಶ್ರೀ ಲಕ್ಷ್ಮೀವರ ತೀರ್ಥರು ತಮ್ಮ ಮೇಲಿಟ್ಟ ಪ್ರೀತಿಯನ್ನು, ಹಿಂದೂ ಸಮಾಜಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ವಿಶೇಷ ಪ್ರೋತ್ಸಾಹ ಸಹಕಾರದೊಂದಿಗೆ ಮಾರ್ಗದರ್ಶನ ನೆನಪಿಸಿಕೊಳ್ಳುತ್ತಾರೆ. ಅದೇ ಪ್ರೀತಿ ವಿಶ್ವಾಸ ಈಗ ಶ್ರೀ ವೇದವರ್ಧನ ತೀರ್ಥರು ತೋರುತಿದ್ದಾರೆ. ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಜವಾಬ್ದಾರಿ ಜೀವನದ ಅತ್ಯಂತ ಸಂತಸ ಕೆಲಸ ಎಂದಿದ್ದಾರೆ. ಶ್ರೀಗಳ ಆಶಯಕ್ಕೆ ಬದ್ಧ: ಅಷ್ಟ ಮಠಗಳಲ್ಲಿ ಅತ್ಯಂತ ಕಿರಿಯ ವಯಸ್ಸಿನ ಶ್ರೀ ವೇದವರ್ಧನ ತೀರ್ಥರು ತಮ್ಮ 2 ವರ್ಷಗಳ ಪರ್ಯಾಯೋತ್ಸವವನ್ನು ಭಕ್ತ ಪರ್ಯಾಯವನ್ನಾಗಿ ನಡೆಸುವ ಆಶಯ ಹೊಂದಿದ್ದಾರೆ. ಅನ್ನದಾನಕ್ಕೆ ವಿಶ್ವದಲ್ಲಿಯೇ ಖ್ಯಾತಿವೆತ್ತಿರುವ ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ರುಚಿ ಶುಚಿಯಾದ ಊಟೋಪಚಾರ, ಸುಲಭ ಕೃಷ್ಣ ದರ್ಶನ, ಅದಕ್ಕೆ ಪೂರಕವಾಗಿ ಕೃಷ್ಣ ಮಠದ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದ್ದಾರೆ. ಇದಕ್ಕೆ ಪರ್ಯಾಯ ಸ್ವಾಗತ ಸಮಿತಿ ಸಂಪೂರ್ಣ ಬದ್ದತೆಯಿಂದ ದುಡಿಯಲಿದೆ ಎಂದು ಅವರು ಹೇಳಿದ್ದಾರೆ.
‘ಶೀರೂರು ಪರ್ಯಾಯ, ನಮ್ಮ ಪರ್ಯಾಯ’ ಎನ್ನುವುದು ಪರ್ಯಾಯ ಸ್ವಾಗತ ಸಮಿತಿಯ ಧ್ಯೇಯವಾಗಿದೆ. ಶೀರೂರು ಮಠದ ಪರಮಪೂಜ್ಯ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ನಾಡಿನ ಸಮಸ್ತ ಭಕ್ತರ ಸಹಕಾರದಿಂದ ಅತ್ಯಂತ ವ್ಯವಸ್ಥಿತ, ವೈಭವಯುತ ಹಾಗೂ ಶ್ರದ್ಧಾಭಕ್ತಿಯ ಪ್ರತೀಕವಾಗಿ ನಡೆಯಲಿ ಎಂದು ಆಶಿಸುವುದಾಗಿ ಹೇಳಿದ್ದಾರೆ.ಯಾತ್ರಾರ್ಥಿಗಳು, ಜವಾಬ್ದಾರಿ ದ್ವಿಗುಣ: ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥರು ತಮ್ಮ ಪರ್ಯಾಯೋತ್ಸವದಲ್ಲಿ ನಡೆಸಿದ ವಿಶ್ವದಾಖಲೆಯ ಕೋಟಿ ಗೀತಾ ಲೇಖನ ಯಜ್ಞ ವಿಶ್ವದ ಪ್ರತಿ ಮನೆ ಮನಗಳನ್ನು ತಲುಪಿದೆ. ಲಕ್ಷ ಕಂಠ ಗೀತಾ ಪಾರಾಯಣಕ್ಕೆ ದೇಶದ ಹೆಮ್ಮೆಯ ಪ್ರಧಾನಿ ವಿಶ್ವನಾಯಕ ನರೇಂದ್ರ ಮೋದಿ ಅವರೇ ಆಗಮಿಸುವ ಮೂಲಕ ಉಡುಪಿಗೆ ವಿಶೇಷ ಗೌರವ ಸಮರ್ಪಿಸಿದ್ದಾರೆ. ಇದರ ಪರಿಣಾಮ ಉಡುಪಿಗೆ, ಶ್ರೀಕೃಷ್ಣ ಮಠಕ್ಕೆ ಸಂದರ್ಶಿಸುವ ಉತ್ತರ ಭಾರತದ ಭಕ್ತರ ಸಂಖ್ಯೆ ಗಣನೀಯ ಏರಿಕೆಯಾಗಿದೆ, ಆದ್ದರಿಂದ ಶೀರೂರು ಮಠದ ಪರ್ಯಾಯದಲ್ಲ್ಯೂ ಭಾರಿ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದೆ. ಈ ಭಕ್ತರಿಗೆ ಎಲ್ಲ ರೀತಿಯಲ್ಲೂ ಸುವ್ಯವಸ್ಥೆ ಮಾಡಬೇಕು ಎಂದು ಶೀರೂರು ಶ್ರೀಗಳು ಆಶಿಸಿದ್ದಾರೆ. ಅದರಂತೆ ಸ್ವಾಗತ ಸಮಿತಿ ಸದಾ ಸಹಕಾರ ನೀಡಲಿದೆ. ಸ್ವಾಗತ ಗೋಪುರ, ವಿದ್ಯುತ್ ಅಲಂಕಾರ: ಶ್ರೀ ಲಕ್ಷ್ಮೀವರ ತೀರ್ಥರು ಕೃಷ್ಣ ಮಠದ ಉತ್ತರ ಭಾಗದಲ್ಲಿ ಪರಶುರಾಮ ದ್ವಾರ ನಿರ್ಮಿಸುವ ಆಶಯ ಹೊಂದಿದ್ದರು, ಅದನ್ನೀಗ ಪರ್ಯಾಯ ಸ್ವಾಗತ ಸಮಿತಿ ಮೂಲಕ 1 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಪ್ರಪ್ರಥಮ ಬಾರಿಗೆ, ಪರ್ಯಾಯೋತ್ಸವಕ್ಕೆ ಉಡುಪಿ ನಗರದ ದೀಪಾಲಂಕಾರಕ್ಕೆ 50 ಲಕ್ಷ ರು. ಅನುದಾನ ನೀಡಲಾಗಿದೆ. ಈ ಮೂಲಕ ಮುಂದಿನ ಎಲ್ಲ ಪರ್ಯಾಯ ಮಹೋತ್ಸವಕ್ಕೆ ನಗರಸಭೆಯ ಅನುದಾನ ಒದಗಿಸುವ ನಿರ್ಣಯದ ಮೂಲಕ ಮೇಲ್ಪಂಕ್ತಿ ಹಾಕಲಾಗಿದೆ.