ಉಡುಪಿ: ಉಡುಪಿ ಕೃಷ್ಣಮಠದಲ್ಲಿ ಪ್ರತಿನಿತ್ಯ ನಾಲ್ಕೈದು ಸಾವಿರ ಮಂದಿ ಭಕ್ತರಿಗೆ, ಯಾತ್ರಾರ್ಥಿಗಳಿಗೆ ಕೃಷ್ಣಪ್ರಸಾದದ ರೂಪದಲ್ಲಿ ಅನ್ನಸಂತರ್ಪಣೆ ನಡೆಯುತ್ತದೆ. ಆದರೆ 2 ವರ್ಷಗಳಿಗೊಮ್ಮೆ ಪರ್ಯಾಯೋತ್ಸವದ ಎರಡು ದಿನಗಳ ಕಾಲ ಮಾತ್ರ ಲಕ್ಷಕ್ಕೂ ಅಧಿಕ ಮಂದಿಗೆ ಅನ್ನಪ್ರಸಾದ, ಪಾಯಸ, ಸಿಹಿ ಭಕ್ಷಗಳ ವಿತರಣೆ ಭರ್ಜರಿಯಾಗಿ ನಡೆಯುತ್ತದೆ. ಅದಕ್ಕಾಗಿ ಒಂದು ವಾರದಿಂದ ಬೃಹತ್ ಹೊರೆಕಾಣಿಕೆ ಸಲ್ಲಿಕೆ ನಡೆಸಲಾಗುತ್ತದೆ.
ಕೃಷ್ಣಮಠ ಮತ್ತು ಮಟ್ಟು ಗುಳ್ಳ: ಈ ಹೊರೆಕಾಣಿಕೆ ಸಲ್ಲಿಕೆಯಲ್ಲಿ ಉದ್ಯಾವರ ಸಮೀಪದ ಮಟ್ಟು ಗ್ರಾಮದಿಂದ ಬರುವ ಮಟ್ಟಗಳ ಹೊರೆಕಾಣಿಗೆ ಬಹಳ ವೈಶಿಷ್ಟ್ಯವಾದುದು. ಮಟ್ಟು ಗ್ರಾಮದ ಜನರು ಸಂಕಷ್ಟದಲ್ಲಿದ್ದಾಗ ಕೃಷ್ಣಮಠದ ಶ್ರೀ ವಾದಿರಾಜ ತೀರ್ಥರು ಹಿಡಿ ಮರಳನ್ನು ಮಂತ್ರಿಸಿ ಅವುಗಳನ್ನು ಗುಳ್ಳ (ಬದನೆ)ದ ಬೀಜಗಳನ್ನಾಗಿ ಪರಿವರ್ತಿಸಿ ನೀಡಿದರು. ಅದಕ್ಕಾಗಿ ಆ ಪ್ರದೇಶದಲ್ಲಿ ಯಥೇಚ್ಚವಾಗಿ ಬೆಳೆಸಲಾಗುವ ಬದನೆಯನ್ನು ಮಟ್ಟುಗುಳ್ಳ ಎಂದು ಕರೆಯುತ್ತಾರೆ. ಅಂದಿನಿಂದ ಇಂದಿನವರೆಗೂ ಕೃಷ್ಣಮಠದ ನಿತ್ಯ ಬಳಕೆಯಲ್ಲಿ ಮಟ್ಟುಗುಳ್ಳಕ್ಕೆ ವಿಶೇಷ ಸ್ಥಾನವಿದೆ. ಪ್ರತಿ ಪರ್ಯಾಯದಂತೆ, ಶನಿವಾರ ಭಾರಿ ಪ್ರಮಾಣದ ಮಟ್ಟುಗುಳ್ಳದ ಹೊರೆಕಾಣಿಕೆ ನಡೆಯಿತು.